ಬೆಂಗಳೂರು: ಆಧುನಿಕ ತಂತ್ರಜ್ಞಾನ ಆಧಾರಿತ ಉಪಕರಣಗಳನ್ನ ಬಳಸಿಕೊಂಡು, ಆರೋಪಿಗಳನ್ನು ಶಿಕ್ಷಿಸುವ ಕೆಲಸವಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿಂದು ನಡೆದ ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ, ಅದರ ಕುರಿತು ಹೆಚ್ಚು ಗಮನ ಹರಿಸಬೇಕಿದೆ. ಅಲ್ಲದೇ ಆಧುನಿಕ ತಂತ್ರಜ್ಞಾನದ ಸಹಾಯದ ಮೂಲಕ ಆರೋಪಿಗಳನ್ನು ಸೆರೆ ಹಿಡಿದು ಶಿಕ್ಷಿಸುವ ಕಾರ್ಯವಾಗಬೇಕು ಎಂದರು.
ಮುಂದುವರೆದು ಮಾತನಾಡಿ, ಪೊಲೀಸರು ಜನಸಾಮಾನ್ಯರಿಗೆ ಸ್ಪಂದಿಸುವ ಹಾಗೂ ಜನಸ್ನೇಹಿಯಾಗಿರಬೇಕು. ಠಾಣೆಗೆ ಹೋಗುವವರಿಗೆ ಪೊಲೀಸರ ಮೇಲೆ ನಂಬಿಕೆ ಬರುವಂತಿರಬೇಕು. ಜತೆಗೆ ಗುಣಮಟ್ಟದ ತನಿಖೆಯಾದರೆ ಶಿಕ್ಷೆಯ ಪ್ರಮಾಣ ಕೂಡ ಹೆಚ್ಚಾಗುತ್ತದೆ. ಎಲ್ಲೆಲ್ಲಿ ಲೋಪಗಳಿವೆ ಅದನ್ನ ಸರಿಪಡಿಸಿಕೊಳ್ಳಬೇಕು. ತನಿಖಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು.
60 ದಿನಗಳಲ್ಲಿ ಚಾರ್ಜ್ಶೀಟ್: ಚಾರ್ಜ್ಶೀಟ್ ವಿಳಂಬವೂ ಶಿಕ್ಷೆಯ ಪ್ರಮಾಣ ಕಡಿಮೆಯಾಗಲು ಕಾರಣವಾಗುತ್ತದೆ. ಆದ್ದರಿಂದ 60 ದಿನದೊಳಗೆ ಚಾರ್ಜ್ಶೀಟ್ ಸಲ್ಲಿಸಬೇಕು. ಅಗತ್ಯ ಇದ್ದಲ್ಲಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಷನ್ ವ್ಯವಸ್ಥೆ ಮಾಡುತ್ತೇವೆ ಎಂದು ಸೂಚಿಸಲಾಗಿದೆ. ಹಗಲು ಅಪರಾಧ ಕೃತ್ಯಗಳ ಮೇಲೆ ಹೆಚ್ಚು ನಿಗವಹಿಸಬೇಕಿದೆ. ಇದಕ್ಕಾಗಿ ಬೀಟ್ ಪೊಲೀಸರ ಸಂಖ್ಯೆ ಹೆಚ್ಚು ಮಾಡಬೇಕು ಎಂದು ಹೇಳಿದ್ದೇನೆ. ಹೊಯ್ಸಳ ಬೀಟ್ ವ್ಯವಸ್ಥೆಯ ಮೇಲೆ ಮೇಲ್ವಿಚಾರಣೆ ಹೆಚ್ಚಿಸಬೇಕು. ಲೋಕಸಭಾ ಚುನಾವಣೆಗೂ ಮುನ್ನ ರೌಡಿ ಶೀಟರ್ಗಳ ಮೇಲೂ ಕಣ್ಣಿಡಬೇಕು. ಮತ್ತು ಕೋಮು ಸಂಘರ್ಷಗಳಾಗದಂತೆ ನೋಡಿಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ರಾಜ್ಯದ ಅಭಿವೃದ್ಧಿಯಾಗುತ್ತದೆ ಎಂದು ಸೂಚಿಸಿರುವುದಾಗಿ ಹೇಳಿದರು.
ಡ್ರಗ್ಸ್ ಮುಕ್ತ ರಾಜ್ಯ: ಕರ್ನಾಟಕವನ್ನ ಡ್ರಗ್ಸ್ ಮುಕ್ತ ರಾಜ್ಯ ಮಾಡಬೇಕು ಎಂದು ಸ್ಪಷ್ಟ ಸಂದೇಶ ನೀಡಿದ್ದೇನೆ. ಈ ನಿಟ್ಟಿನಲ್ಲಿ ಕಳೆದ 6 ತಿಂಗಳಲ್ಲಿ 27 ಕೋಟಿ ಮೌಲ್ಯದ 4484 ಕೆ.ಜಿ ಗಾಂಜಾ 23 ಕೆ.ಜಿ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಂಡಿಳ್ಳಲಾಗಿದೆ. ಅದನ್ನ ಫೆಬ್ರವರಿ ಮೊದಲ ವಾರದಲ್ಲಿ ನಾಶಪಡಿಸಲು ಪರವಾನಗಿ ಕೊಟ್ಟಿದ್ದೇವೆ ಎಂದರು.
ಪೊಲೀಸ್ ವೈದ್ಯಕೀಯ ತಪಾಸಣೆ ಭತ್ಯೆ ಹೆಚ್ಚಳ: ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಪೂರ್ಣಗೊಂಡಿದೆ. ಕರ್ನಾಟಕ ಪೊಲೀಸ್ ಎಂದು ನಾಮಕರಣವಾಗಿಯೂ 50 ವರ್ಷವಾಯ್ತು. ಈ ವರ್ಷ ಸುವರ್ಣ ಮಹೋತ್ಸವ ಆಚರಿಸಬೇಕು ಎಂಬ ಬೇಡಿಕೆಯಿದೆ. ಈ ಸಂಧರ್ಭದಲ್ಲಿ ಪೊಲೀಸ್ ಇಲಾಖೆಗೆ ಕೆಲವು ಘೋಷಣೆಗಳನ್ನ ಸಹ ಮಾಡಿದ್ದೇನೆ. ಎಲ್ಲ ಪೊಲೀಸರಿಗೆ ಬೆಳ್ಳಿ ಪದಕ ಕೊಡಲು ನಿರ್ಧರಿಸಲಾಗಿದೆ. ವೈದ್ಯಕೀಯ ತಪಾಸಣಾ ಭತ್ಯೆ 2013ರಲ್ಲಿ ನಾನೇ ಶುರು ಮಾಡಿದ್ದೆ, ಈಗ (1000 ದಿಂದ 1500) ಕ್ಕೆ ಹೆಚ್ಚಿಸುತ್ತಿದ್ದೇನೆ ಎಂದು ಹೇಳಿದರು.
ನಾವು ಅಧಿಕಾರಕ್ಕೆ ಬಂದು 8 ತಿಂಗಳು ತುಂಬುತ್ತಿದೆ. ಅಧಿಕಾರಕ್ಕೆ ಬಂದ ನಂತರ ಆರಂಭದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದೆ. ಈ ವೇಳೆ, ನಾವು ಪೊಲೀಸರಿಂದ ಏನು ನಿರೀಕ್ಷಿಸುತ್ತಿದ್ದೇವೆ ಎಂದು ಪ್ರಸ್ತಾಪಿಸಿದ್ದೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ರಾಜ್ಯದ ಅಭಿವೃದ್ಧಿಯಾಗುತ್ತದೆ ಎಂದು ಸೂಚಿಸಿದ್ದೆ ಅಲ್ಲದೆ ಸಮಾಜದ ದುರ್ಬಲ ವರ್ಗ, ಮನೆಗಳಲ್ಲಿ ಒಂಟಿಯಾಗಿ ವಾಸಿಸುವವರಿಗೆ ರಕ್ಷಣೆ ಕೊಡಬೇಕು.
ಹಿರಿಯ ಅಧಿಕಾರಿಗಳು ಮೇಲಿಂದ ಮೇಲೆ ಠಾಣೆಗಳಿಗೆ ಭೇಟಿ ನೀಡಬೇಕು, ಕಿರಿಯ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದ್ದೆ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಪ್ರಯತ್ನ ಹೆಚ್ಚಿಸಿದೆ. ಹಾಗಾಗಿ ಯಾವುದೇ ಕೋಮುಗಲಭೆಗಳು ನಡೆದಿಲ್ಲ ಎಂದು ತಿಳಿಸಿದರು.
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಹಾಕಿ, ಶಿಕ್ಷೆ ಪ್ರಮಾಣ ಹೆಚ್ಚಾಗಬೇಕು. ಇಲ್ಲದಿದ್ದರೆ ಡಿಸಿಪಿ ಗಳನ್ನೇ ಈ ವೈಫಲ್ಯಕ್ಕೆ ಹೊಣೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು. ಅಲ್ಲದೆ ಪೊಲೀಸರಿಗೆ ನಮ್ಮ ಸರ್ಕಾರ ಸಂಪೂರ್ಣ ಫ್ರೀ ಹ್ಯಾಂಡ್ ಕೊಟ್ಟಿದೆ. ಪೊಲೀಸರ ಕೆಲಸದಲ್ಲಿ ಮೂಗು ತೂರಿಸಬಾರದು ಎನ್ನುವುದು ನನ್ನ ಬದ್ಧತೆ. ಆದರೆ ನಾವು ಫ್ರೀ ಹ್ಯಾಂಡ್ ಕೊಟ್ಟಿದ್ದು ದುರುಪಯೋಗ ಆಗಬಾರದು. ಅದು ಜನರಿಗೆ ಅನುಕೂಲ ಆಗುವಂತಿರಬೇಕು ಎಂದು ಸೂಚಿಸಿದರು.
ವರ್ಗಾವಣೆಗಳಿಗೆ ಪೊಲೀಸ್ ಅಧಿಕಾರಿಗಳು ಹಾತೊರೆಯುವುದು, ಜಾತಿ ಬಳಸುವುದು ಅತ್ಯಂತ ಕೆಟ್ಟದ್ದು. ಹಾಗೆ ಮಾಡಬೇಡಿ. ನಮ್ಮದು ಜಾತ್ಯತೀತ ರಾಷ್ಟ್ರ. ನಾವುಗಳೇ ನಮ್ಮ ಸಂವಿಧಾನದ ಆಶಯಗಳನ್ನು ಬಲಪಡಿಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ: ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶ: ಸಿಎಂ, ಗೃಹ ಸಚಿವರು ಭಾಗಿ