ಬೆಂಗಳೂರು: ಕೊರೊನಾ ಹೊಡೆತದಿಂದಾಗಿ ನಷ್ಟದ ಸುಳಿಗೆ ಸಿಲುಕಿರುವ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಲಾಭದತ್ತ ತಿರುಗಿಸಲು ಕಾರ್ಗೋ ಸೇವೆಯ ಮೊರೆ ಹೋಗಿದೆ. ಈಗಾಗಲೇ ಒಮ್ಮೆ ಕೈ ಸುಟ್ಟುಕೊಂಡಿರುವ ಸಾರಿಗೆ ಸಂಸ್ಥೆ ಇದೀಗ ಮತ್ತೊಮ್ಮೆ ಸರಕು ಸಾಗಾಣಿಕೆಯನ್ನು ಆರಂಭಿಸಿದೆ.
ಸಾಮಾನ್ಯ ಸಾರಿಗೆಯಿಂದ ಹವಾನಿಯಂತ್ರಿತ ಸ್ಲೀಪರ್ವರೆಗೂ ಎಲ್ಲಾ ಮಾದರಿಯ ಬಸ್ಗಳನ್ನು ರಸ್ತೆಗಿಳಿಸಿ ಜನಮನ್ನಣಗಳಿಸಿರುವ ಕೆಎಸ್ಆರ್‌ಟಿಸಿ ಇದೀಗ ಪ್ರಯಾಣಿಕ ಸಾರಿಗೆಯೊಂದಿಗೆ ಕಾರ್ಗೋ ಸೇವಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ರಾಜ್ಯದ ಮೂಲೆ ಮೂಲೆಯನ್ನು ತಲುಪುವ ಜೊತೆಗೆ ಅಂತಾರಾಜ್ಯ ಸಾರಿಗೆ ಸೇವೆ ಒದಗಿಸುತ್ತಿರುವ ಕೆಎಸ್ಆರ್‌ಟಿಸಿ ಇದೀಗ ಎಲ್ಲಾ ಕಡೆಯಲ್ಲೂ ಪ್ರಯಾಣಿಕರನ್ನು ಕೊಂಡೊಯ್ಯುವ ಜೊತೆಗೆ ಪಾರ್ಸೆಲ್ ಸೇವೆಯನ್ನೂ ಒದಗಿಸಲಿದೆ.
ರಾಜ್ಯ ಸಾರಿಗೆ ಸಂಸ್ಥೆಯ ಅಡಿಯಲ್ಲಿ ಬರುವ ನಾಲ್ಕು ನಿಗಮಗಳಲ್ಲಿ ಬಿಎಂಟಿಸಿ ಹೊರತುಪಡಿಸಿ ಕೆಎಸ್ಆರ್‌ಟಿಸಿ, ಈಶಾನ್ಯ ಸಾರಿಗೆ ಮತ್ತು ವಾಯುವ್ಯ ಸಾರಿಗೆಯ 1600 ಬಸ್ಗಳು ಇನ್ಮುಂದೆ ಪ್ರಯಾಣಿಕರನ್ನು ಹೊತ್ತೊಯ್ಯುವ ಜೊತೆಗೆ ಪಾರ್ಸೆಲ್ ಸೇವೆಯನ್ನೂ ನೀಡಲಿದೆ.
ಮೊದಲ ಹಂತವಾಗಿ 109 ಸ್ಥಳಗಳಲ್ಲಿ ಸರಕು ಸಾಗಾಣಿಕೆ ಮಾಡುವ ಕಾರ್ಯಾಚರಣೆ ಆರಂಭ ಮಾಡಿದ್ದು, ಅಂತರ್ ರಾಜ್ಯಕ್ಕೂ ಪಾರ್ಸಲ್ ತಲುಪಿಸುವ ವ್ಯವಸ್ಥೆ ಮಾಡಲು ನಿರ್ಧಾರಿಸಲಾಗಿದೆ.
ಕೊರೊನಾ ಲಾಕ್ಡೌನ್ನಿಂದ ಆರಂಭಗೊಂಡ ನಷ್ಟ ಸಾರಿಗೆ ಸೇವೆ ಆರಂಭಗೊಂಡರೂ ಮುಂದುವರೆದಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಸಾಕಷ್ಟು ಇಳಿಕೆಯಾಗಿರುವುದರಿಂದ ಸಾರಿಗೆ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದ್ದು, ಖಾಸಗಿ ಮತ್ತು ಸಾರಿಗೆ ನಿಗಮ ಎರಡೂ ತತ್ತರಗೊಂಡಿವೆ. ಇದರಿಂದ ಹೊರಬರಲು ಸಾರಿಗೆ ನಿಗಮ ಕಾರ್ಗೋ ಸೇವೆಯ ಪ್ರಯೋಗಕ್ಕೆ ಕೈಹಾಕಿದೆ. ಮೂರು ನಿಗಮಗಳಿಂದ ಪಾರ್ಸೆಲ್ ಸೇವೆಯ ಮೂಲಕ ವಾರ್ಷಿಕ 80-100 ಕೋಟಿ ಆದಾಯ ನಿರೀಕ್ಷೆ ಇಟ್ಟುಕೊಂಡಿದೆ.
ಮುಂದಿನ 5 ವರ್ಷಕ್ಕೆ ಅನ್ವಯವಾಗುವಂತೆ ಖಾಸಗಿ ಕಂಪನಿಗೆ ನಮ್ಮ ಕಾರ್ಗೋ ಸೇವೆಯ ಹೊರಗುತ್ತಿಗೆ ನೀಡಲಾಗಿದೆ. ಪಾರ್ಸೆಲ್ ಸೇವೆಯ ನಿರ್ವಹಣೆ ಸಂಸ್ಥೆ ಮಾಡಲಿದ್ದು, ಸಾಗಾಣಿಕೆಯನ್ನು ಸಾರಿಗೆ ನಿಗಮ ಮಾಡಲಿದೆ. ಐದು ವರ್ಷದ ಗುತ್ತಿಗೆಯಾಗಿರುವ ಕಾರಣ ನಮ್ಮ ಕಾರ್ಗೋ ಸೇವೆಯನ್ನು ಜನ ಅವಲಂಭಿಸಲು ಹಿಂದೇಟು ಹಾಕುವ ಸಾಧ್ಯತೆ ಕಡಿಮೆ ಎನ್ನಬಹುದಾಗಿದೆ.
ಇದು ಎರಡನೇ ಪ್ರಯತ್ನ...
ಅಂದಹಾಗೆ ಕೆಎಸ್ಆರ್‌ಟಿಸಿ ಪಾರ್ಸೆಲ್ ಸೇವೆಯನ್ನು ಒದಗಿಸುತ್ತಿರುವುದು ಇದು ಮೊದಲೇನಲ್ಲ. 2008 ರಲ್ಲಿಯೇ ಪಾರ್ಸೆಲ್ ಸೇವೆ ಆರಂಭಿಸಿತ್ತಾದರೂ ಅದು ಯಶಸ್ಸು ಕಾಣಲಿಲ್ಲ. ಅಸಮರ್ಪಕ ನಿರ್ವಹಣೆ ಕಾರಣದಿಂದ ಸೇವೆಯನ್ನು ಸ್ಥಗಿತಗೊಳಿಸಿತ್ತು. ಆದರೆ ಇದೀಗ ಖಾಸಗಿ ಸಂಸ್ಥೆಗೆ ಹೊರಗುತ್ತಿಗೆ ನೀಡಿರುವ ಕಾರಣ ಸಾರಿಗೆ ನಿಗಮಕ್ಕೆ ಸರಕು ಸಾಗಾಣಿಕೆ ಪಾಲಿನ ಹಣ ಬರಲಿದ್ದು, ನಿರ್ವಹಣೆ ಜವಾಬ್ದಾರಿ ಇಲ್ಲದ ಕಾರಣ ಯೋಜನೆ ವಿಫಲವಾಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರಾಜ್ಯ ಸಾರಿಗೆ ನಿಗಮದ ಬಸ್ಸುಗಳು ಇನ್ಮುಂದೆ ಸರಕನ್ನೂ ಕೊಂಡೊಯ್ಯಲಿವೆ. ನಮ್ಮ ಸಾರಿಗೆ ಬಸ್ಸುಗಳು ಇನ್ಮುಂದೆ ನಮ್ಮ ಕಾರ್ಗೋಗಳಾಗಿಯೂ ಸೇವೆ ಒದಗಿಸಲಿವೆ. ನಷ್ಟ ತುಂಬಿಸಿಕೊಳ್ಳಲು ಕೆಎಸ್ಆರ್‌ಟಿಸಿ ಆರಂಭಿಸಿರುವ ಹೊಸ ಪ್ರಯತ್ನ ಫಲ ಕೊಡಲಿದೆಯಾ ಎಂಬುದು ಕಾದು ನೋಡಬೇಕಿದೆ.