ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ನಗರದ ಕೆಲವು ಶಾಲೆಗಳ ವಿದ್ಯಾರ್ಥಿಗಳಲ್ಲಿ ಕೊರೊನಾ ಹರಡಿರುವುದು ವರದಿಯಾಗಿದ್ದು, ಶೈಕ್ಷಣಿಕ ಚಟುವಟಿಕೆಗಳನ್ನು ಪರ್ಯಾಯ ಮಾರ್ಗಗಳ ಮೂಲಕ ಮುಂದುವರಿಸುವಂತೆ ಸೂಚಿಸಿದೆ.
ಶಾಲೆಗಳಿಗೆ ಮಾರ್ಗಸೂಚಿ:
- ಕೋವಿಡ್ ನಿಯಂತ್ರಣದ ಬಗ್ಗೆ ಮಕ್ಕಳ ಪೋಷಕರಿಗೆ, ಎಲ್ಲಾ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸುವುದು.
- ಎಲ್ಲಾ ಶಿಕ್ಷಕರು, ಮುಖ್ಯ ಶಿಕ್ಷಕರು ಪ್ರತಿ ದಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಬಗ್ಗೆ ಅಗತ್ಯ ಅರಿವು ಮೂಡಿಸುವುದು.
- ವಿದ್ಯಾರ್ಥಿಗಳು ಮನೆಯಿಂದಲೇ ಶುದ್ಧ ಬಿಸಿನೀರನ್ನು ತರುವಂತೆ ಸೂಚಿಸುವುದು.
- 12-14 ವರ್ಷದ ಎಲ್ಲಾ ವಿದ್ಯಾರ್ಥಿಗಳು ಕೋವಿಡ್-19ರ ಲಸಿಕೆಯನ್ನು ಪಡೆದಿರುವ ಬಗ್ಗೆ ಪರಿಶೀಲಿಸುವುದು. ಪಡೆಯದೇ ಇದ್ದಲ್ಲಿ, ಆ ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ಕೊಡಿಸುವುದು.
- ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳಿದ್ದರೆ ಆರೋಗ್ಯ ಇಲಾಖೆಯ ಸ್ಥಳೀಯ ಆಸ್ಪತ್ರೆಗಳಲ್ಲಿ ಪೋಷಕರ ಉಪಸ್ಥಿತಿಯಲ್ಲಿ ತಪಾಸಣೆಗೆ ಒಳಪಡಿಸುವುದು.
- ಕೋವಿಡ್ ಲಕ್ಷಣವಿರುವಂತ ವಿದ್ಯಾರ್ಥಿಯನ್ನು ತಾತ್ಕಾಲಿಕವಾಗಿ ಕೆಲವು ದಿನಗಳಿಗೆ ಮಾತ್ರ ಭೌತಿಕ ತರಗತಿಗಳಿಗೆ ಹಾಜರಾಗದಂತೆ ತಿಳಿಸುವುದು.
- ಯಾವುದಾದರೂ ಶಾಲೆಯಲ್ಲಿ ತರಗತಿವಾರು 10ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಕೋವಿಡ್-19ರ ಲಕ್ಷಣಗಳು ಕಂಡು ಬಂದಲ್ಲಿ, ಸೋಂಕು ದೃಢಪಟ್ಟಲ್ಲಿ, ಕೂಡಲೇ ಅಂತಹ ಶಾಲಾ ಮುಖ್ಯೋಪಾಧ್ಯಾಯರು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಜಿಲ್ಲಾ ಉಪನಿರ್ದೇಶಕರ ಪೂರ್ವಾನುಮತಿ ಪಡೆದು, ಶಾಲೆಗೆ ಎರಡು, ಮೂರು ದಿನಗಳಿಗೆ ರಜೆಯನ್ನು ಘೋಷಿಸುವುದು.
- ಆರೋಗ್ಯ ಇಲಾಖೆಯ ಸ್ಥಳೀಯ ಘಟಕ, ಜಿಲ್ಲಾಡಳಿತದ ಮಾರ್ಗದರ್ಶನದ, ಸಹಕಾರದೊಂದಿಗೆ ಸಂಪೂರ್ಣ ಶಾಲಾ ಕಟ್ಟಡವನ್ನು ಸ್ಯಾನಿಟೈಸ್ ಮಾಡಿಸುವುದು.
- ಶಾಲೆಗಳಲ್ಲಿ ಶಿಕ್ಷಕರು ಮುಖ್ಯ ಶಿಕ್ಷಕರು, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು. 50 ವರ್ಷ ಮೇಲ್ಪಟ್ಟವರು ಮತ್ತು ಪೂರ್ವಭಾವಿ ಆರೋಗ್ಯ ಲಕ್ಷಣಗಳನ್ನು ಹೊಂದಿರುವವರು ಅಗತ್ಯಾನುಸಾರ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ವಹಿಸತಕ್ಕದ್ದು.
- ಕೋವಿಡ್-19ರ ಸುರಕ್ಷತಾ, ಮುನ್ನಚ್ಚರಿಕೆ ಕ್ರಮವಹಿಸಿ ಶಾಲೆ ನಡೆಸುವ ಕುರಿತು ನಿಗದಿಪಡಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನದಂತೆ ಶಿಕ್ಷಕರು, ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
ಇದನ್ನೂ ಓದಿ: ರಾಜ್ಯದಲ್ಲಿ ಗಲಭೆಯಾಗದಂತೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ : ಸಿಎಂ ಬೊಮ್ಮಾಯಿ