ಬೆಂಗಳೂರು: ಮದ್ಯ ಖರೀದಿಸುವ ವಯಸ್ಸಿನ ನಿರ್ಬಂಧವನ್ನು ಸಡಿಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಮದ್ಯಪಾನ ಮಾರಾಟಕ್ಕಿರುವ ಕಾನೂನುಬದ್ಧ ವಯಸ್ಸನ್ನು ಇಳಿಸುವ ಸಂಬಂಧ ಕಾನೂನಿಗೆ ತಿದ್ದುಪಡಿ ತರಲು ತೀರ್ಮಾನಿಸಿದೆ. ಈ ವಿಚಾರವಾಗಿ ಕರಡು ಅಧಿಸೂಚನೆಯನ್ನು ಜನವರಿ 10ರಂದು ಹೊರಡಿಸಿದ್ದು, ಸಾರ್ವಜನಿಕರಿಂದ ಆಕ್ಷೇಪ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.
ಈ ಹಿಂದೆ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ಕಾನೂನಿತ್ತು. ಈಗ ಕರ್ನಾಟಕ ಅಬಕಾರಿ (ಪರವಾನಿಗೆಯ ಸಾಮಾನ್ಯ ಷರತ್ತು-ತಿದ್ದುಪಡಿ) ನಿಯಮ 2023 ತರಲು ಮುಂದಾಗಿರುವ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದೆ. ಅದರಂತೆ, ಮದ್ಯ ಕೊಳ್ಳುವ ನಿರ್ಬಂಧವನ್ನು ಸಡಿಲಿಸಿ ವಯಸ್ಸಿನ ಮಿತಿಯನ್ನು 18 ವರ್ಷಕ್ಕಿಳಿಸಲು ಸರ್ಕಾರ ಸಜ್ಜಾಗಿದೆ.
ಈ ತಿದ್ದುಪಡಿಯು ಕಾನೂನಿನ ಪ್ರಕಾರ, ಈ ಮುನ್ನ ಮದ್ಯ ಕೊಳ್ಳಲು ಇದ್ದ 21 ವರ್ಷದ ವಯಸ್ಸಿನ ಮಿತಿಯು ಇನ್ನುಂದೆ 18 ವರ್ಷಕ್ಕೆ ಇಳಿಕೆಯಾಗಲಿದೆ. ಈ ಸಲುವಾಗಿ ಅಬಕಾರಿ ಇಲಾಖೆ ನಿಯಮ 10ಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಸಾರ್ವಜನಿಕರು ಆಕ್ಷೇಪ ಸಲ್ಲಿಸಲು 30 ದಿನಗಳ ಸಮಯಾವಕಾಶವಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಆದಿ ಯೋಗಿ ಪ್ರತಿಷ್ಠಾಪನೆಗೆ ಮಂಜೂರಾಗಿರುವ ಜಾಗದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಸೂಚನೆ
2015ರ ಮುನ್ನ ರಾಜ್ಯದಲ್ಲಿ ಕುಡಿತದ ವಯಸ್ಸು 18 ಇತ್ತು. ಬಳಿಕ ಅದನ್ನು ತಿದ್ದುಪಡಿಗೊಳಿಸಿ ಕನಿಷ್ಠ ವಯೋಮಿತಿಯನ್ನು 21ಕ್ಕೆ ಹೆಚ್ಚಿಸಲಾಗಿತ್ತು. ಕರ್ನಾಟಕ ಅಬಕಾರಿ ಪರವಾನಿಗೆ (ಸಾಮಾನ್ಯ ಷರತ್ತು) ನಿಯಮ 1967 ಅನ್ನು 2015ರಲ್ಲಿ ಕರ್ನಾಟಕ ಅಬಕಾರಿ ಇಲಾಖೆ ತಿದ್ದುಪಡಿಗೆ ತಂದು ಕುಡಿತದ ವಯಸ್ಸನ್ನು ಕನಿಷ್ಠ 18 ರಿಂದ 21 ವರ್ಷಕ್ಕೆ ಏರಿಸಿತ್ತು. ಅದರಂತೆ ಪಬ್, ಬಾರ್ಗಳಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ.
ಆದರೂ ಈ ಕಾನೂನಿನ ಬಗ್ಗೆ ಸಾಕಷ್ಟು ಗೊಂದಲ ಏರ್ಪಟ್ಟಿತ್ತು. ಅಬಕಾರಿ ಇಲಾಖೆ ಅಧಿಕಾರಿಗಳಲ್ಲೇ ಕನಿಷ್ಠ ವಯಸ್ಸಿನ ಬಗ್ಗೆ ಗೊಂದಲವಿತ್ತು. ಬೆಂಗಳೂರಿನಲ್ಲಿ ಅನೇಕ ಯುವಕ, ಯುವತಿಯರು ವಯಸ್ಸು 21 ಆಗದಿದ್ದರೂ ಮದ್ಯ ಸೇವನೆ ಮಾಡುತ್ತಿದ್ದರು. ಹಲವು ಪಬ್, ಬಾರ್ಗಳು ವಯಸ್ಸು 21 ಆಗದಿದ್ದರೂ ಯುವಕ, ಯುವತಿಯರಿಗೆ ಮದ್ಯ ಮಾರಾಟ ಮಾಡುತ್ತಿದ್ದವು. ಹೀಗಾಗಿ, ಅನೇಕರು ಕುಡಿತದ ವಯಸ್ಸನ್ನು ಸಡಿಲಿಸುವಂತೆ ಒತ್ತಾಯಿಸುತ್ತಿದ್ದರು. ಇದೀಗ ರಾಜ್ಯ ಅಬಕಾರಿ ಇಲಾಖೆ ಕುಡಿತದ ವಯಸ್ಸನ್ನು 21 ರಿಂದ ಮತ್ತೆ ಈ ಮುಂಚಿನಂತೆ 18ಕ್ಕಿಳಿಸಲು ನಿರ್ಧಾರ ಕೈಗೊಂಡಿದೆ.
ಸರ್ಕಾರದ ಕುಡಿತದ ವಯಸ್ಸು ಸಡಿಲಿಸುವ ತಿದ್ದುಪಡಿಗೆ ಜನರಿಂದ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆ ಇದೆ. ಕೆಲವರು ವಯಸ್ಸು ಸಡಿಲಿಸುವ ಪರವಾಗಿದ್ದರೆ, ಹಲವರು ಇದರ ವಿರುದ್ಧ ನಿಲುವು ತಳೆದಿದ್ದಾರೆ. ಸದ್ಯ ಸರ್ಕಾರ ಕುಡಿತದ ವಯೋಮಿತಿ ಸಡಿಲಿಕೆಗೆ ಮುಂದಾಗಿದೆ.
ಇದನ್ನೂ ಓದಿ: ‘ವಿಶೇಷ ತುರ್ತು ಪ್ರತಿಕ್ರಿಯೆ ಮೇಜಿನ ಸೇವೆ’ ಆರಂಭಿಸಿದ್ದೇವೆ: ಹೈಕೋರ್ಟ್ಗೆ ಸರ್ಕಾರದ ಪ್ರಮಾಣಪತ್ರ