ಬೆಂಗಳೂರು: ಲೋಕಸಭೆ ಚುನಾವಣೆಗೆ ರಾಜ್ಯ ಮುಖ್ಯ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ. 2024ರ ಕರಡು ಮತದಾರರ ಪಟ್ಟಿಯಲ್ಲಿ ಮುಖ್ಯ ಚುನಾವಣಾ ಅಧಿಕಾರಿಯನ್ನು ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿಯಂತೆ ರಾಜ್ಯದಲ್ಲಿ ಒಟ್ಟು 5,33,77,162 ಮತದಾರರು ಇದ್ದಾರೆ.
ಬೆಂಗಳೂರು ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, 224 ವಿಧಾನಸಭಾ ಕ್ಷೇತ್ರಗಳಲ್ಲೂ 2024ರ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ 5,33,77,162 ಮತದಾರರು ಇದ್ದಾರೆ. ಕಳೆದ ಬಾರಿ 2023ರ ಅಂತಿಮ ಮತದಾರರ ಪಟ್ಟಿಯಲ್ಲಿ 5,08,53,845 ಮತದಾರರು ಇದ್ದರು. 2024ರ ಕರಡು ಮತದಾರರ ಪಟ್ಟಿಯಲ್ಲಿ ಅದು 5,33,77,162 ಏರಿಕೆಯಾಗಿದೆ. ಈ ಪೈಕಿ 2,56,39,736 ಪುರುಷ ಮತದಾರರಿದ್ದರೆ, 2,52,09,619 ಮಹಿಳಾ ಮತದಾರರು ಇದ್ದಾರೆ. 4,896 ಇತರೆ ಮತದಾರರ ಸಂಖ್ಯೆ ಇದೆ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು 7,06,207 ಮತದಾರರು ಇದ್ದಾರೆ. 13,45,707 ಯುವ ಮತದಾರರು ಇದ್ದಾರೆ (18-19 ವರ್ಷ), 80 ವರ್ಷ ಮೇಲ್ಪಟ್ಟವರು 11,76,093 ಮತದಾರರು ಇದ್ದಾರೆ. ಕರಡು ಮತದಾರರ ಪಟ್ಟಿ 2024ರ ಪ್ರಕಾರ ಮತಗಟ್ಟೆಗಳು 58,834ಗೆ ಏರಿಕೆಯಾಗಿವೆ. ಆ ಮೂಲಕ 2023 ಗಿಂತ 552 ಮತಗಟ್ಟೆ ಏರಿಕೆಯಾಗಿದೆ ಎಂದರು.
ಜ.5ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ: ಅಂತಿಮ ಮತದಾರರ ಪಟ್ಟಿಯನ್ನು ಜ.5, 2024 ಕ್ಕೆ ಪ್ರಕಟಿಸಲಾಗುವುದು. ಇಂದಿನಿಂದ 2024 ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಆರಂಭವಾಗಲಿದೆ. ಇಂದಿನಿಂದ ಡಿ.9 ವರೆಗೆ ಆಕ್ಷೇಪಣೆಗೆ ಅವಕಾಶ ಇರಲಿದೆ. ವಿಶೇಷ ಅಭಿಯಾನ ನ.18, ನ.19, ಡಿ.1, ಡಿ. 3 ರಂದು ನಡೆಯಲಿದೆ. ಆಕ್ಷೇಪಣೆಗಳ ವಿಲೇವಾರಿ ಡಿ.26ರಂದು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಫಾರ್ಮ್ 6 ರಲ್ಲಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ಇರಲಿದೆ. ಫಾರ್ಮ್ 7ರಲ್ಲಿ ಮತದಾರರ ಪಟ್ಟಿಯಲ್ಲಿ ಪ್ರಸ್ತಾಪಿತ ಸೇರ್ಪಡೆಗೆ ಆಕ್ಷೇಪಣೆಗಾಗಿ ಮತ್ತು ಅಳಿಸಬೇಕು. ಫಾರ್ಮ್ 8ರಲ್ಲಿ ತಿದ್ದುಪಡಿಗೆ ಅವಕಾಶ ಇರಲಿದೆ ಎಂದು ವಿವರಿಸಿದರು.
3,89,353 ಮತದಾರರ ಹೆಸರು ಡಿಲೀಟ್: ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 3,89,353 ಹೆಸರು ಅಳಿಸಲಾಗಿದೆ ಎಂದು ಹೇಳಿದರು. ಈ ಪೈಕಿ ಮತದಾರರ ಮರಣದಿಂದ ಅಳಿಸಿದ ಮತದಾರರು 1,27,703, ಮತದಾರರ ಸ್ಥಳಾಂತರದಿಂದ ಅಳಿಸುವಿಕೆ 2,38,617 ಸೇರಿವೆ. ವಿಧಾನಸಭೆ ಚುನಾವಣೆ ಬಳಿಕ 6,02,199 ಹೊಸ ಹೆಸರು ಸೇರಿಸಲಾಗಿದೆ. ಇನ್ನು 6,39,995 ಮತದಾರರು ವಿವಿಧ ತಿದ್ದುಪಡಿ ಮಾಡಿದ್ದಾರೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. 2019ರ ಲೋಕಸಭೆ ಚುನಾವಣೆ ಅವಧಿಯ ಅಂತಿಮ ಮತದಾರರ ಪಟ್ಟಿಯಲ್ಲಿ 5,10,51,432 ಮತದಾರರು ಇದ್ದರು ಎಂದು ತಿಳಿಸಿದರು.
115 ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚು: ಕರಡು ಮತದಾರರ ಪಟ್ಟಿ ಪ್ರಕಾರ ರಾಜ್ಯದ 224 ಕ್ಷೇತ್ರಗಳ ಪೈಕಿ 115 ಕ್ಷೇತ್ರಗಳಲ್ಲಿ ಮಹಿಳೆಯ ಮತದಾರರ ಹೆಚ್ಚಿದ್ದಾರೆ. ಮತದಾರರ ಪಟ್ಟಿಯ ಪ್ರಕಾರ ಲಿಂಗಾನುಪಾತದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರ ಅತಿ ಹೆಚ್ಚು ಅಂದರೆ 1,092 ಮಹಿಳಾ ಮತದಾರರು ಇದ್ದಾರೆ. ಮಹದೇವಪುರ ಕ್ಷೇತ್ರದಲ್ಲಿ ಅತಿ ಕನಿಷ್ಟ 859 ಮಹಿಳಾ ಮತದಾರರು ಲಿಂಗಾನುಪಾತ ಹೊಂದಿದೆ. ಕರಡು ಮತದಾರರ ಪಟ್ಟಿ ಪ್ರಕಾರ ಮಹಿಳಾನುಪಾತದಂತೆ 86 ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಕಡಿಮೆ ಇದೆ ಎಂದರು.
ನಕಲಿ ವೋಟರ್ ಕಾರ್ಡ್- ವರದಿ ಬಂದ ಬಳಿಕ ಕ್ರಮ: ಹೆಬ್ಬಾಳದಲ್ಲಿ ನಕಲಿ ಗುರುತಿನ ಚೀಟಿ ಪತ್ತೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಮನೋಜ್ ಕುಮಾರ್ ಮೀನಾ, ವೋಟರ್ ಪಟ್ಟಿಯಲ್ಲಿ ಹೆಸರು ಇದ್ದವರು ಮಾತ್ರ ಮತದಾನ ಮಾಡಲು ಸಾಧ್ಯ. ನಕಲಿ ವೋಟರ್ ಐಡಿ ಹೊಂದಿದ್ದವರ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ. ಹಾಗಾಗಿ ನಕಲಿ ವೋಟರ್ ಐಡಿ ಕಾರ್ಡ್ನಿಂದ ಯಾವುದೇ ಉಪಯೋಗ ಇಲ್ಲ. ಮತದಾರರು ಮತಪಟ್ಟಿಗೆ ಹೆಸರು ಸೇರಿಸಬೇಕು. ನಕಲಿ ವೋಟರ್ ಐಡಿ ಜಾಲವನ್ನು ಪೊಲೀಸರು ಭೇದಿಸುತ್ತಿದ್ದಾರೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ: ಜನವರಿ ಮೊದಲ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ- ಸಲೀಂ ಅಹ್ಮದ್