ಬೆಂಗಳೂರು: ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಇದಕ್ಕಾಗಿ ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ಒಂದು ಕಡೆ ಎಸ್ಎಸ್ಎಲ್ಸಿ ಪರೀಕ್ಷೆ ಇಂದಿನಿಂದ ಶುರುವಾಗುತ್ತಿದ್ದರೆ, ಮತ್ತೊಂದು ಕಡೆ 23ರಂದು ಐಪಿಎಲ್ ಹವಾ ಶುರುವಾಗಲಿದೆ. ಇದರಿಂದ ವಿದ್ಯಾರ್ಥಿಗಳು ಪುಸ್ತಕ ಹಿಡಿದು ಪರೀಕ್ಷೆಗಾಗಿ ಓದುತ್ತಾ ಕೂರುತ್ತಾರಾ ಅಥವಾ ಇಷ್ಟದ ಆಟಗಾರರ ಕ್ರಿಕೆಟ್ ಮ್ಯಾಚ್ ನೋಡುತ್ತಾ ಕೂರುತ್ತಾರಾ ಅನ್ನೋ ಚಿಂತೆ ಪೋಷಕರಿಗೆ ಕಾಡುತ್ತಿದೆ.
ಇಂದಿನಿಂದ ಪರೀಕ್ಷೆ ಶುರುವಾಗಲಿದ್ದು, ಏಪ್ರಿಲ್ 4ರವರೆಗೆ ನಡೆಯಲಿದೆ. ಸುಮಾರು 8,41,666 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇನ್ನು ಹಾಜರಾತಿ ಕೊರತೆಯಿಂದಾಗಿ 10572 ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿದಿದ್ದಾರೆ. ಒಟ್ಟು 2,847 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 46 ಸೂಕ್ಷ್ಮ ಮತ್ತು 7 ಕೇಂದ್ರಗಳು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.
ಜೊತೆಗೆ ಎಂದಿನಂತೆ ಈ ಬಾರಿಯು ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷಾರ್ಥಿಗಳಿಗೆ ಡಿಜಿಟಲ್/ ಸ್ಮಾರ್ಟ್ ಕೈ ಗಡಿಯಾರದ ಬಳಕೆ ನಿಷೇಧಿಸಲಾಗಿದೆ. ಅನಲಾಗ್ ಕೈ ಗಡಿಯಾರಗಳನ್ನು ಮಾತ್ರ ಬಳಸಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು, ಸುತ್ತಮುತ್ತ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿಯಿಂದ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಬೆಳಗ್ಗೆ 9-30 ರಿಂದ ಮಧ್ಯಾಹ್ನ 12-30 ರವರೆಗೆ ಪರೀಕ್ಷೆ ನಡೆಯಲಿದ್ದು, ಇಂದು ಮೊದಲ ದಿನ ಪ್ರಥಮ ಭಾಷೆ (ಕನ್ನಡ), ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಗಳ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆಯಲಿದ್ದಾರೆ.