ಬೆಂಗಳೂರು: ರಾಜಧಾನಿಯಲ್ಲಿ ಯಾಸ್ ಚಂಡಮಾರುತದ ಪ್ರಭಾವದಿಂದ ನಿನ್ನೆಯಿಂದ ಭಾರಿ ಮಳೆ ಸುರಿಯುತ್ತಿದೆ. ನಗರದಾದ್ಯಂತ ಇಂದು ಸಂಜೆ ಸುಮಾರು 6 ಗಂಟೆಯಿಂದ ಮತ್ತೆ ಮಳೆ ಅಬ್ಬರ ಜೋರಾಗಿದೆ.
ವಸಂತನಗರ, ರಾಜಾಜಿನಗರ, ಮಲೇಶ್ವರಂ, ಸೇರಿದಂತೆ ಹಲವೆಡೆ ಗುಡುಗು ಸಹಿತ ವರ್ಷಧಾರೆಯಾಗುತ್ತಿದೆ. ಗಾಳಿ ಸಹಿತ ಮಳೆ ಆಗುತ್ತಿದ್ದು, ಆರ್ ಆರ್ ನಗರ, ಬಿಟಿಎಂ ಲೇಔಟ್, ಬಸವನಗುಡಿ, ಯಶವಂತಪುರ, ಪೀಣ್ಯದಲ್ಲಿ ಮಳೆ ಆಗಿದೆ. ಸಿಲಿಕಾನ್ ನಗರದಲ್ಲಿ ಸಂಜೆಯಿಂದ ತಣ್ಣಗಿನ ವಾತಾವರಣ ಅನುಭವವಾಗುತ್ತಿದೆ. ವರುಣನ ಆಗಮನದಿಂದ ರಾಜಧಾನಿ ಕೂಲ್ ಆಗಿದೆ. ಮಳೆಯಿಂದ, ಹಲವು ಬಡಾವಣೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಯಾಸ್ ಆರ್ಭಟ ಮುಂದುವರಿದಿದ್ದು, ತೌಕ್ತೆ ನಂತರ ಭಾರತವನ್ನು ಈ ಚಂಡಮಾರುತ ಕಾಡುತ್ತಿದೆ. 'ಯಾಸ್' ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕರಾದ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಯಾಸ್ ಸೃಷ್ಟಿಯಾಗಿದ್ದು, ನಾಳೆ ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಲಿದೆ. ರಾಜ್ಯಕ್ಕೂ ಕೂಡ ಇದು ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೇ 29 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ:
ಕರಾವಳಿಯಲ್ಲಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ನಾಳೆಯಿಂದ ಮೇ 29 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ವ್ಯಾಪಕ ಮಳೆಯಾಗಲಿದೆ , ರಾಜ್ಯದ ಒಳನಾಡಿನಲ್ಲಿ ಸಾಮಾನ್ಯ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.