ಬೆಂಗಳೂರು: ಇಂದು ಏಳು ಮತ್ತು ಎಂಟನೇ ಹಂತದಲ್ಲಿ 240 ಟನ್ ಆಕ್ಸಿಜನ್ ಅನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳುಹಿಸಿಕೊಟ್ಟಿದೆ.
7 ನೇ ಹಂತದಲ್ಲಿ ಆರು ಕಂಟೈನರ್ಗಳನ್ನ ಹೊತ್ತು ತಂದಿದ್ದ ರೈಲು ನಿನ್ನೆ ರಾತ್ರಿ ಬೆಂಗಳೂರಿಗೆ ತಲುಪಿತ್ತು. 8ನೇ ರೈಲು ಇಂದು ಬೆಳಗ್ಗೆ 11 ಗಂಟೆಗೆ ಕಂಟೈನರ್ಗಳಲ್ಲಿ 120 ಟನ್ ಆಕ್ಸಿಜನ್ ಹೊತ್ತು ಬೆಂಗಳೂರಿಗೆ ಬಂದಿದೆ.
ಏಳನೇ ಹಂತದ ಆಕ್ಸಿಜನ್ ಎಕ್ಸ್‌ಪ್ರೆಸ್ ಜಾರ್ಖಂಡ್ನ ಟಾಟಾ ನಗರದಿಂದ ಲೋಡ್ ಆಗಿ ಮೇ 20 ರಂದು ಪ್ರಯಾಣ ಪ್ರಾರಂಭಿಸಿತ್ತು. ಎಂಟನೇ ಹಂತದ ರೈಲು ಗುಜರಾತ್ನ ಜಮುನಾ ನಗರದಿಂದ ದಿನಾಂಕ 20 ರಂದು ಲೋಡ್ ಆಗಿ ಇಂದು ಬೆಳಗ್ಗೆ 11ಗಂಟೆಗೆ ಬಂದು ತಲುಪಿದೆ.
ಮತ್ತೆ ಇಂದು ಟಾಟಾ ನಗರದಿಂದ ಆರು ಕಂಟೈನರುಗಳ ಮೂಲಕ 120 ಟನ್ ಆಕ್ಸಿಜನ್ ಲೋಡ್ ಆಗಿ ನಾಳೆ ಬೆಂಗಳೂರಿನ ವೈಟ್ ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ಬರುತ್ತಿದೆ. ಈ ಆಕ್ಸಿಜನ್ ಎಕ್ಸ್‌ಪ್ರೆಸ್‌ನ ತ್ವರಿತ ಸಾಗಣೆಯನ್ನು ಸಕ್ರಿಯಗೊಳಿಸಲು ರೈಲ್ವೆ ಸಿಗ್ನಲ್ ಮುಕ್ತ 'ಗ್ರೀನ್ ಕಾರಿಡಾರ್' ಅನ್ನು ರಚಿಸಿ ಸಾಗಾಣಿಕೆಗೆ ಅನುವು ಮಾಡಿಕೊಟ್ಟಿದೆ.
ಇಲ್ಲಿಯವರೆಗೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 960 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ರೈಲು ಮೂಲಕ ಕಳುಹಿಸಿದೆ. ಕೇಂದ್ರ ಸರ್ಕಾರ ಆಕ್ಸಿಜನ್ ಕಳುಹಿಸಿ ಕೊಟ್ಟ ನಂತರ ಕರ್ನಾಟಕದಲ್ಲಿ ಆಕ್ಸಿಜನ್ ಸಮಸ್ಯೆ ಕಡಿಮೆಯಾಗಿ ಸಾವಿನ ಸಂಖ್ಯೆ ಕೂಡ ಕಡಿಮೆ ಆಗಿದೆ. ಕರ್ನಾಟಕಕ್ಕೆ 1200 ಟನ್ ಆಮ್ಲಜನಕವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಕೋರ್ಟ್ ತೀರ್ಪಿನಂತೆ ಇದುವರೆಗೂ 960 ಟನ್ಗಳಷ್ಟು ಆಕ್ಸಿಜನ್ ನೀಡಿದೆ.