ಬೆಂಗಳೂರು: ನಾಡು ನುಡಿಗೆ ಸೇವೆ ಸಲ್ಲಿಸಿ ಸಾಧನೆಗೈದ ಗಣ್ಯರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಅಂತಿಮಗೊಳಿಸುವ ಅಧಿಕಾರವನ್ನು ಆಯ್ಕೆ ಸಮಿತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ನೀಡಿದೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸಭೆ ನಡೆಯಿತು. 22 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರ ಪಟ್ಟಿಯನ್ನು ಪರಿಶೀಲನೆ ನಡೆಸಲಾಯಿತು. ಆದರೆ ಇಂದು ಪಟ್ಟಿಯನ್ನು ಅಂತಿಮಗೊಳಿಸಲಿಲ್ಲ.
ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಪಟ್ಟಿ ಅಂತಿಮಗೊಳಿಸುವ ಅಧಿಕಾರವನ್ನು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಕೈಗೊಂಡಿತು. ಇನ್ನೆರಡು ದಿನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳ ಜೊತೆ ಚರ್ಚಿಸಿ ಅಂತಿಮ ಪಟ್ಟಿ ಪ್ರಕಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಹೈಕೋರ್ಟ್ ಆದೇಶದಂತೆ ಈ ವರ್ಷದ ರಾಜ್ಯೋತ್ಸವದ ಲೆಕ್ಕಾಚಾರದಲ್ಲಿ 65 ಜನರಿಗೆ ಮಾತ್ರ ಪ್ರಶಸ್ತಿ ನೀಡಲಿದೆ. ಕ್ರೀಡಾ ಕ್ಷೇತ್ರವನ್ನು ಹೊರತು ಪಡೆಸಿ 60 ವರ್ಷ ಮೀರಿದವರಿಗೆ ಮಾತ್ರ ಪ್ರಶಸ್ತಿ ನೀಡುವುದು ಹಾಗೂ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ದೊರೆಯುವಂತೆ ನೋಡಿಕೊಂಡು ಪಟ್ಟಿ ಸಿದ್ದಪಡಿಸಲಾಗಿದೆ ಎನ್ನಲಾಗುತ್ತಿದೆ.