ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಶೇ.61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬೆಂಗಳೂರಿನ ಜಯನಗರದ ಎನ್ಎಂಕೆಆರ್ವಿ ಕಾಲೇಜಿನ ವಿಜ್ಞಾನ ವಿಭಾಗದ ಸಿಮ್ರಾನ್ ಶೇಷರಾವ್ 598 ಅಂಕ ಪಡೆದಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಲ್ಲೇಶ್ವರದ ಶಿಕ್ಷಣ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶೇ.68.72 ವಿದ್ಯಾರ್ಥಿನಿಯರು, ಶೇ.55.22 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪೂರಕ ಪರೀಕ್ಷಾ ದಿನಾಂಕವನ್ನು ಈ ತಿಂಗಳಾಂತ್ಯಕ್ಕೆ ಪ್ರಕಟಿಸಲಾಗುವುದು ಎಂದರು.
14,210 ಮಕ್ಕಳು ಗಣಿತದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ಕನ್ನಡದಲ್ಲಿ 263 ಮಕ್ಕಳು 100ಕ್ಕೆ 100 ಅಂಕ ಪಡೆದಿದ್ದಾರೆ. ಉಳಿದ ಭಾಷಾ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದವರು ಅತಿ ಕಡಿಮೆ ಇದ್ದಾರೆ. ಫಲಿತಾಂಶವನ್ನು ಇಲಾಖೆಯ ವೆಬ್‌ಸೈಟ್ https://t.co/j1ntn8hcEFನಲ್ಲಿ ನೋಡಬಹುದು ಎಂದರು. 12 ಗಂಟೆಯಿಂದ ಫಲಿತಾಂಶ ನೋಡಲು ಲಭ್ಯವಾಗಿದೆ.
ಪರೀಕ್ಷೆಗೆ ಹಾಜರಾದ 5,99,797 ಮಂದಿ ಹೊಸಬರು, ತೇರ್ಗಡೆ ಹೊಂದಿದವರು 4,02,697 ಮಂದಿ, ಅಂದರೆ ಶೇ. 67.14ರಷ್ಟು ತೇರ್ಗಡೆ ಆಗಿದ್ದಾರೆ. ಪುನರಾವರ್ತಿತ 61,838 ವಿದ್ಯಾರ್ಥಿಗಳಲ್ಲಿ 14,403(ಶೇ. 23.29) ಮಂದಿ ತೇರ್ಗಡೆ ಹೊಂದಿದ್ದಾರೆ. 21,931 ಖಾಸಗಿ ಅಭ್ಯರ್ಥಿಗಳಲ್ಲಿ 5,866 ತೇರ್ಗಡೆ(26.75) ಆಗಿದ್ದು, ಒಟ್ಟಾರೆ ಶೇ.61.88ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕಳೆದ ಬಾರಿಗಿಂತ ಫಲಿತಾಂಶದಲ್ಲಿ ಶೇ.0.50ರಷ್ಟು ಪ್ರಗತಿ ಆಗಿದೆ.
ಹೆಚ್ಚು ಅಂಕ ಪಡೆದವರು: ಬೆಂಗಳೂರಿನ ಜಯನಗರದ ಎನ್ಎಂಕೆಆರ್ವಿ ಕಾಲೇಜಿನ ವಿಜ್ಞಾನ ವಿಭಾಗದ ಸಿಮ್ರಾನ್ ಶೇಷರಾವ್ 598 ಅಂಕ ಪಡೆದಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 597 ಅಂಕವನ್ನು ನಾಲ್ವರು, 8 ವಿದ್ಯಾರ್ಥಿಗಳು 596 ಅಂಕ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಬೆಂಗಳೂರಿನ ಜೈನ್ ಪಿ.ಯು. ಕಾಲೇಜ್ನ ವಾಣಿಜ್ಯ ವಿಭಾಗದ ಮಾನವ್ ವಿನಯ್ ಕೇಜ್ರಿವಾಲ್ 600ಕ್ಕೆ 596 ಅಂಕ ಪಡೆದಿದ್ದಾರೆ. ಬೆಂಗಳೂರಿನ ದಾಸನಪುರದ ಬಿಜಿಎಸ್ ಪಿಯು ಕಾಲೇಜ್ನ ನೀಲು ಸಿಂಗ್, ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಪಿಯು ಕಾಲೇಜ್ನ ಆಕಾಶ್ ದಾಸ್, ಚಿಕ್ಕಬಳ್ಳಾಪುರದ ಎಸ್ಬಿಜಿಎನ್ಎಸ್ ಕಾಲೇಜಿನ ನೇಹಾ ಕೂಡ 596 ಅಂಕ ಪಡೆದಿದ್ದಾರೆ.
ಬಳ್ಳಾರಿ ಕೊಟ್ಟೂರಿನ ಹಿಂದು ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಶ್ವೇತಾ ಬೈರಗೊಂಡ 600ಕ್ಕೆ 594ಅಂಕ, ಬಳ್ಳಾರಿಯ ಮಡಿವಾಳರ ಸಹನ ಸಹ 594 ಅಂಕ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸೂರು ಮೊರಾರ್ಜಿ ವಸತಿ ಪಿಯು ಕಾಲೇಜಿನ ರಾಹುಲ್ ದೊಡ್ಡಮನಿ 600ಕ್ಕೆ 590 ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾನೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ
ಕೋವಿಡ್ ಅನ್ನು ಎದುರಿಸಿ ಪರೀಕ್ಷೆ ಬರೆದಿದ್ದಾರೆ. ಈ ವರ್ಷ ವಿದ್ಯಾರ್ಥಿಗಳು ನಿರೀಕ್ಷೆಗಿಂತ ಚೆನ್ನಾಗಿ ಪರೀಕ್ಷೆ ಬರೆದಿದ್ದಾರೆ. ಯಾರೂ ಕೂಡ ಫಲಿತಾಂಶದಿಂದ ನಿರಾಸೆ ಆಗಬಾರದು. 22 ಏಪ್ರಿಲ್ಗೆ ಪರೀಕ್ಷೆ ಆರಂಭವಾಗಿ ಮೇ.18ಕ್ಕೆ ಮುಗಿದಿತ್ತು. ಈ ವರ್ಷ ಕಡಿಮೆ ಅವಧಿಯಲ್ಲಿ ಫಲಿತಾಂಶ ನೀಡಿದ್ದೇವೆ.
ಈ ಬಾರಿ ದಕ್ಷಿಣ ಕನ್ನಡ ಪ್ರಥಮ ಸ್ಥಾನ, ಉಡುಪಿ ದ್ವಿತೀಯ, ವಿಜಯಪುರ ತೃತೀಯ ಸ್ಥಾನ ಪಡೆದಿದ್ದು, ಕೊನೆಯ ಸ್ಥಾನ ಚಿತ್ರದುರ್ಗವಾಗಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶದ ಫಲಿತಾಂಶದಲ್ಲಿ ಗಮನಿಸಿದರೆ ನಗರ-5,20,520 ವಿದ್ಯಾರ್ಥಿಗಳಲ್ಲಿ 3,21590 ವಿದ್ಯಾರ್ಥಿಗಳು, ಗ್ರಾಮಾಂತರ-1,63,043 ವಿದ್ಯಾರ್ಥಿಗಳಲ್ಲಿ 1,01,376 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದರು.