ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ 224, ಕಾಂಗ್ರೆಸ್ 223, ಜೆಡಿಎಸ್ 211 ಹುರಿಯಾಳುಗಳನ್ನು ಕಣಕ್ಕಿಳಿಸಿದೆ. ಇದರಲ್ಲಿ ಹಲವರು ಹೊಸಬರಾದರೆ, ಇನ್ನು ಹಲವರು 6ರಿಂದ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ವಿಧಾನಸಭೆಯ ಹಿರಿಯ ಶಾಸಕರೆಂದರೆ ಅದು ಕಾಂಗ್ರೆಸ್ನ ಆರ್ವಿ ದೇಶಪಾಂಡೆ. ಇದಕ್ಕೂ ಮೊದಲು ಮಲ್ಲಿಕಾರ್ಜುನ್ ಖರ್ಗೆ ಅವರು ಸದನದ ಹಿರಿಯ ಶಾಸಕರಾಗಿದ್ದರು. ಅವರು 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಆರ್ವಿ ದೇಶಪಾಂಡೆ - 8 ಬಾರಿ ಗೆಲುವು: ಕಾಂಗ್ರೆಸ್ ಹಿರಿಯ ನಾಯಕ ಆರ್ವಿ ದೇಶಪಾಂಡೆ ಅತ್ಯಂತ ಹೆಚ್ಚು ಬಾರಿ ಆಯ್ಕೆ ಆದ ಶಾಸಕರಾಗಿದ್ದಾರೆ. ಅವರು 8 ಬಾರಿ ಚುನಾವಣಾ ಕಣದಲ್ಲಿ ಗೆಲುವು ಸಾಧಿಸಿದ್ದಾರೆ. ಒಂದು ಬಾರಿಗೆ ಸೋಲು ಕಂಡಿದ್ದು, ಇದೀಗ 10ನೇ ಬಾರಿಗೂ ಅಖಾಡದಲ್ಲಿದ್ದು, ಸುನಿಲ್ ಹೆಗೆಡೆ ಜೊತೆ ಪೈಪೋಟಿ ನಡೆಸಿದ್ದಾರೆ. ಈ ಬಾರಿಯೂ ಗೆದ್ದರೆ 9 ಬಾರಿ ಶಾಸಕರಾಗಿ ಆಯ್ಕೆಯಾದ ಖರ್ಗೆ ದಾಖಲೆಯನ್ನು ಸರಿಗಟ್ಟಲಿದ್ದಾರೆ.
1983ರಿಂದ 1994ರವರೆಗೆ ಜನತಾ ಪರಿವಾರದಿಂದ ಸ್ಪರ್ಧಿಸಿ 4 ಬಾರಿ ಶಾಸಕರಾಗಿದ್ದರು. 1999ರಲ್ಲಿ ಕಾಂಗ್ರೆಸ್ ಸೇರಿದರು. ಬಳಿಕ 2004, 2013, 2018 ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 2008ರಲ್ಲಿ ಒಮ್ಮೆ ಮಾತ್ರ ಶಿಷ್ಯ ಸುನೀಲ್ ಹೆಗಡೆ ವಿರುದ್ಧ ಸೋಲು ಕಂಡಿದ್ದರು. 1996ರಿಂದ 1999ರವರೆಗಿನ ಜನತಾ ದಳ ಸರ್ಕಾರದ ಅವಧಿ ಮತ್ತು 1999ರಲ್ಲಿ ಎಸ್ಎಂ ಕೃಷ್ಣ ಸರ್ಕಾರದಲ್ಲೂ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅದಾದ ಬಳಿಕ ಧರ್ಮಸಿಂಗ್, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸರ್ಕಾರದಲ್ಲೂ ಕೈಗಾರಿಕಾ ಸಚಿವರಾಗಿದ್ದರು.
ಸಿದ್ದರಾಮಯ್ಯ - ಉಪ ಚುನಾವಣೆ ಸೇರಿ 8 ಬಾರಿ ಗೆಲುವು: ಮಾಜಿ ಸಿಎಂ ಸಿದ್ದರಾಮಯ್ಯ ಅವರು 10 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಉಪ ಚುನಾವಣೆ ಸೇರಿ 8 ಬಾರಿ ಗೆಲುವು ಸಾಧಿಸಿದ್ದಾರೆ. ಉಪ ಚುನಾವಣೆಯಲ್ಲಿ 253 ಮತಗಳಿಂದ ಶಿವಬಸಪ್ಪ ವಿರುದ್ಧ ಗೆಲುವು ಕಂಡಿದ್ದರು. ಇದಲ್ಲದೇ, ವಿಧಾನಸಭಾ ರಾಜಕೀಯ ಜೀವನದಲ್ಲಿ ಒಟ್ಟು ಮೂರು ಬಾರಿ ಸೋಲು (1989, 1999, 2018) ಕಂಡಿದ್ದಾರೆ.
ಕಳೆದ 2018 ಚುನಾವಣೆಯಲ್ಲಿ ಬಾದಾಮಿಯಲ್ಲಿ ಗೆದ್ದರೆ, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತಿದ್ದರು. ಸಿಎಂ ಸ್ಥಾನದಲ್ಲಿದ್ದಾಗಲೇ ತಮ್ಮ ಸ್ವ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲುಂಡಿದ್ದು ವಿಶೇಷ. ಆದರೆ, ಬಾದಾಮಿಯಲ್ಲಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಸಲ ಸಿದ್ದರಾಮಯ್ಯ ವರುಣಾದಲ್ಲಿ ಮಾತ್ರವೇ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ತುರುಸಿನ ಸ್ಪರ್ಧೆ ಒಡ್ಡಿದ್ದಾರೆ. ಇನ್ನೇನು ಅಂತಿಮ ಫಲಿತಾಂಶ ಇಂದೇ ಹೊರ ಬೀಳಲಿದೆ. ಸಿದ್ದರಾಮಯ್ಯ ಗೆಲುವು ಸಾಧಿಸಿದರೆ, ಒಟ್ಟು 9 ಬಾರಿ ಗೆದ್ದದಂತಾಗುತ್ತದೆ. ಈ ಮೂಲಕ ವಿಧಾನಸಭೆಯಲ್ಲಿ ಅತಿ ಹೆಚ್ಚು ಸೇವೆ ಸಲ್ಲಿಸಿದ ಶಾಸಕರಲ್ಲಿ ಒಬ್ಬರಾಗಲಿದ್ದಾರೆ.
ಡಿಕೆ ಶಿವಕುಮಾರ್ - 7 ಬಾರಿ ಶಾಸಕ: ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಈವರೆಗೂ 7 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. 8ನೇ ಬಾರಿಗೆ ಕಣದಲ್ಲಿದ್ದಾರೆ. 1989ರಲ್ಲಿ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. 1999 ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ 56 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. 2008ರಿಂದ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಗೆಲ್ಲುತ್ತಾ ಬಂದಿದ್ದಾರೆ. ಈ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಗೆಲುವು ಸಾಧಿಸಿದರೆ ಸತತ ಎಂಟನೇ ಬಾರಿಗೆ ವಿಧಾನಸಭೆಗೆ ಪ್ರವೇಶಿದಂತಾಗುತ್ತದೆ. ಎಸ್ ಬಂಗಾರಪ್ಪ, ಎಸ್ ಎಂ ಕೃಷ್ಣ, ಧರ್ಮಸಿಂಗ್, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಡಿಕೆಶಿ ಅವರಿಗೆ ಇದೆ.
ಜಗದೀಶ ಶೆಟ್ಟರ್ - 6 ಬಾರಿ ಗೆಲುವು: ಮಾಜಿ ಸಿಎಂ ಆಗಿರುವ ಜಗದೀಶ ಶೆಟ್ಟರ್ 6 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. 2023ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ 7ನೇ ಬಾರಿ ಆಯ್ಕೆ ಬಯಸಿ ಕಾಂಗ್ರೆಸ್ನಿಂದ ಕಣದಲ್ಲಿದ್ದಾರೆ. ಸಚಿವ, ವಿಧಾನಸಭೆ ಸ್ಪೀಕರ್, ವಿಧಾನಸಭೆ ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. 1994ರಲ್ಲಿ ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ 2008ರಲ್ಲಿ ಕ್ಷೇತ್ರ ಮರು ವಿಂಗಡನೆ ಬಳಿಕ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಈ ಬಾರಿ ಕ್ಷೇತ್ರ ಅದೇ ಆದರೆ ಪಕ್ಷ ಮಾತ್ರ ಬೇರೆ.
ಕೆಆರ್ ರಮೇಶ್ ಕುಮಾರ್ - 6 ಬಾರಿ ಶಾಸಕರು: ಮಾಜಿ ಸ್ಪೀಕರ್ ಆಗಿರುವ ಕೆಆರ್ ರಮೇಶ್ಕುಮಾರ್ 1978 ರಿಂದ ಚುನಾವಣಾ ರಾಜಕೀಯದಲ್ಲಿದ್ದಾರೆ. 1978ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. ಇದಾದ ಬಳಿಕ 1983ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಸೋತಿದ್ದರು. 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1989ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತರು. 1994ರಲ್ಲಿ ಜನತಾ ದಳದಿಂದ ಗೆದ್ದು, ಸ್ಪೀಕರ್ ಆಗಿ ಆಯ್ಕೆಯಾದರು. 1999ರಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಸೋಲು ಕಂಡರು. 2004ರಲ್ಲಿ ಮತ್ತೆ ಕಾಂಗ್ರೆಸ್ ಸೇರಿ ಸತತವಾಗಿ ಗೆಲುತ್ತಾ ಬಂದಿದ್ದಾರೆ.
ವಿಶ್ವೇಶ್ವರ ಹೆಗೆಡೆ ಕಾಗೇರಿ - 6 ಬಾರಿ ಗೆಲುವು: ವಿಧಾನಸಭೆ ಹಾಲಿ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗೆಡೆ ಕಾಗೇರಿ ಅವರು 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1994, 1999, 2004, 2008, 2013, 2018ರ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಶಿರಸಿ ವಿಧಾನಸಭಾ ಕ್ಷೇತ್ರದಿಂದ 7ನೇ ಬಾರಿಗೆ ಕಣದಲ್ಲಿದ್ದಾರೆ.
ಹೆಚ್ಡಿ ರೇವಣ್ಣ - 6 ಬಾರಿ ಗೆಲುವು: 1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹೆಚ್ಡಿ ರೇವಣ್ಣ 1999, 2004, 2008, 2013 ಮತ್ತು 2018ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಲೋಕೋಪಯೋಗಿ, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. ಇವರು ಸಹ 7 ನೇ ಬಾರಿ ಹೊಳೆನರಸೀಪುರದಿಂದಲೇ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಎಂಬಿ ಪಾಟೀಲ್ - 5 ಬಾರಿ ಗೆಲುವು: ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂಬಿ ಪಾಟೀಲ್ ಮೊದಲ ಬಾರಿಗೆ 1991ರಲ್ಲಿ ತಿಕೋಟಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿ ಶಾಸಕರಾದರು. 2004ರಲ್ಲಿ ತಿಕೋಟಾದಿಂದ ಮತ್ತೆ ವಿಧಾನಸಭೆಗೆ ಆಯ್ಕೆಯಾದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಬಬಲೇಶ್ವರ ಕ್ಷೇತ್ರದಿಂದ ಕಣಕ್ಕಿಳಿದು ಆಯ್ಕೆಗೊಂಡಿದ್ದು, 2013, 2018ರಲ್ಲಿಯೂ ಇದೇ ಕ್ಷೇತ್ರದಿಂದ ಆಯ್ಕೆ ಆಗಿ ಪ್ರಭಾವಿ ಸಚಿವರು ಹಾಗೂ ನಾಯಕರಾಗಿ ಪ್ರವರ್ಧನಮಾನಕ್ಕೆ ಬಂದಿದ್ದಾರೆ. ಇವರು ಐದು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಈ ಸಲವೂ ಕಣದಲ್ಲಿದ್ದಾರೆ.
ಸೋಮಣ್ಣ - 5 ಬಾರಿ ಶಾಸಕರು: ಬಿಜೆಪಿ ಹಿರಿಯ ನಾಯಕರಾದ ವಿ ಸೋಮಣ್ಣ 5 ಬಾರಿ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1994ರಲ್ಲಿ ಜನತಾದಳದಿಂದ ಬಿನ್ನಿಪೇಟೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. 1999ರಲ್ಲಿ ಅದೇ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಿಸಿದರು. 2004, 2008ರಲ್ಲಿ ಗೋವಿಂದರಾಜ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದು ಶಾಸಕರಾದರು. ಬದಲಾದ ರಾಜಕಾರಣದಲ್ಲಿ ಬಿಜೆಪಿ ಸೇರಿದ ಸೋಮಣ್ಣ 2010ರಿಂದ 2018 ರವರೆಗೆ ವಿಧಾನ ಪರಿಷತ್ಗೆ ಆಯ್ಕೆಯಾದರು. 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾದರು. ಇದೀಗ 6ನೇ ಬಾರಿಗೆ ಶಾಸಕತ್ವ ಬಯಸಿ ವರುಣಾ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಸುರೇಶ್ ಕುಮಾರ್ - 5 ಬಾರಿ ಶಾಸಕರು: ಬಿಜೆಪಿ ಹಿರಿಯ ನಾಯಕರಾದ ಸುರೇಶ್ ಕುಮಾರ್ 1994, 1999, 2008, 2013, 2018ರ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2004ರ ಚುನಾವಣೆಯಲ್ಲಿ ಒಂದು ಬಾರಿ ಸೋಲು ಕಂಡಿದ್ದರು. ರಾಜಾಜಿನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸುರೇಶ್ ಕುಮಾರ್ 7ನೇ ಬಾರಿಗೆ ಚುನಾವಣಾ ಕಣದಲ್ಲಿದ್ದಾರೆ.
ಜಿಎಚ್ ತಿಪ್ಪಾರೆಡ್ಡಿ - 5 ಬಾರಿ ಗೆಲುವು: ಚಿತ್ರದುರ್ಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜಿಎಚ್ ತಿಪ್ಪಾರೆಡ್ಡಿ 1994ರಲ್ಲಿ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿದು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. 2008ರ ಚುನಾವಣೆಯಲ್ಲಿ ಜೆಡಿಎಸ್ನಿಂದ ಕಣಕ್ಕಿಳಿದು ಸೋಲು ಕಂಡಿದ್ದರು. ಇದಾದ ಬಳಿಕ 2010 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 2013ರಲ್ಲಿ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದಿದ್ದರು. 2013, 2018 ಸೇರಿ 5 ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. 2 ಬಾರಿ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದರು. ಇದೀಗ 8 ನೇ ಸಲ ಅಖಾಡದಲ್ಲಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ - 4 ಬಾರಿ ಗೆಲುವು: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು 2 ಬಾರಿ ಲೋಕಸಭೆ, 4 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 1996, 2009ರ ಲೋಕಸಭೆ ಚುನಾವಣೆಯಲ್ಲಿ ಕನಕಪುರ ಮತ್ತು ಬೆಂಗಳೂರು ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ 4 ಬಾರಿ ಜಯ ಕಂಡಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಮತ್ತು ಚನನ್ನಪಟ್ಟಣ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿ ಚನನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡಿದ್ದಾರೆ.
ಉಳಿದಂತೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸಹ 1994ರಲ್ಲಿ ಸೋಮವಾರಪೇಟೆಯಿಂದ ಜಯಿಸಿದ್ದ ಇವರು 1999ರಲ್ಲೂ ಗೆಲುವು ಕಂಡಿದ್ದರು. ಆ ಬಳಿಕ 2004ರಲ್ಲಿ ಸೋಲು ಕಂಡಿದ್ದರು. ಆ ಬಳಿಕ ಮಡಿಕೇರಿಯಿಂದ 2008 ಇಲ್ಲಿವರೆಗೂ ಅಂದರೆ 2018 ರವರೆಗೂ ಮೂರು ಬಾರಿ ಹಾಗೂ ಒಟ್ಟಾರೆ ಐದು ಬಾರಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ಮಹಾತೀರ್ಪಿಗೆ ಕರುನಾಡು ಸಜ್ಜು: ಕಮಲ ಅರಳುತ್ತಾ, 'ಕೈ' ಕಮಾಲ್ ಮಾಡುತ್ತಾ?.. ಜೆಡಿಎಸ್ ಆಗಲಿದೆಯಾ ಕಿಂಗ್ ಮೇಕರ್?