ಬೆಂಗಳೂರು: ಜಾಗತಿಕ ಭದ್ರತೆ ಮತ್ತು ಏರೋಸ್ಪೇಸ್ ಸಂಸ್ಥೆಯಾದ ಲಾಕ್‍ಹೀಡ್ ಮಾರ್ಟಿನ್ ಕಂಪನಿ ಶೀಘ್ರದಲ್ಲಿಯೇ ಬೆಂಗಳೂರಿಗೆ ಭೇಟಿ ನೀಡಿ ಕರ್ನಾಟಕದಲ್ಲಿ ಹೂಡಿಕೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಸಾಧ್ಯತೆಗಳನ್ನು ಪರಿಶೀಲಿಸುವ ಭರವಸೆ ನೀಡಿದೆ.
ದಾವೋಸ್ನಲ್ಲಿ ನಡೆಯುತ್ತಿರುವ ಆರ್ಥಿಕ ಶೃಂಗದ ಕರ್ನಾಟಕ ಪೆವಿಲಿಯನ್‍ಗೆ, ಲಾಕ್‍ಹೀಡ್ ಮಾರ್ಟಿನ್ ಕಂಪನಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಿಚರ್ಡ್ ಅಂಬ್ರೋಸ್ ಭೇಟಿ ನೀಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದಾರೆ.
ಈ ವೇಳೆ ಕರ್ನಾಟಕದಲ್ಲಿ ಏರೋಸ್ಪೇಸ್ ಮತ್ತು ಜಾಗತಿಕ ಭದ್ರತಾ ವ್ಯವಸ್ಥೆಯ ಕುರಿತು ವಿವರಿಸಿದ ಮುಖ್ಯಮಂತ್ರಿಗಳು, ಫಾರ್ಚೂನ್ 500 ಕಂಪನಿಗಳ ಪೈಕಿ 400 ಕಂಪನಿಗಳು ಕರ್ನಾಟಕದಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದು, ಕರ್ನಾಟಕದಲ್ಲಿ ಲಾಕ್‍ಹೀಡ್ ಮಾರ್ಟಿನ್ ಕಂಪನಿ ಹೂಡಿಕೆ ಮಾಡಲು ಸೂಕ್ತ ವಾತಾವರಣ ಇರುವುದಾಗಿ ಮನವರಿಕೆ ಮಾಡಿದ್ದಾರೆ.
ಇದಕ್ಕೆ ಧ್ವನಿಗೂಡಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ ಭಾಸ್ಕರ್, ಏರೋಸ್ಪೇಸ್ ಕೈಗಾರಿಕೆಗಳು ಮತ್ತು ಮಲ್ಟಿಕೋರ್ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಅತ್ಯುತ್ತಮ ಪರಿಸರವನ್ನು ಕರ್ನಾಟಕ ಹೊಂದಿದೆ. ರಾಜ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಲಾಕ್‍ಹೀಡ್ ಮಾರ್ಟಿನ್ ಕಂಪನಿ ರಾಜ್ಯದಲ್ಲಿನ ಕೈಗಾರಿಕಾ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ನಂತರ ಜಾಗತಿಕ ಆಟೋಮೇಟಿವ್ ಭಾಗಗಳ ತಯಾರಕ ಕಂಪನಿ ಡೆನ್ಸೊ, ಕರ್ನಾಟಕದ ನಿಯೋಗದೊಂದಿಗೆ ಚರ್ಚಿಸಿದೆ. ದೆಹಲಿಯಲ್ಲಿ ತಮ್ಮ ಕಂಪನಿಯು ಶ್ರೇಷ್ಠತಾ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ್ದು, ಶೀಘ್ರದಲ್ಲಿಯೇ ಬೆಂಗಳೂರಿಗೆ ಭೇಟಿ ನೀಡಿ ದಕ್ಷಿಣ ಭಾರತದಲ್ಲಿ ತಮ್ಮ ಸಂಸ್ಥೆಯನ್ನು ವಿಸ್ತರಿಸುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಸಂಸ್ಥೆಯ ಉಪಾಧ್ಯಕ್ಷ ಹಿರೋಯುಕಿ ವಕಬಾಸ್ಯಿ ತಿಳಿಸಿದ್ದಾರೆ. ಈಗಾಗಲೇ ಡೆನ್ಸೊ ಸಂಸ್ಥೆಯು ಕಿರ್ಲೋಸ್ಕರ್ ಸಹಯೋಗದೊಂದಿಗೆ ನೆಲಮಂಗಲದಲ್ಲಿ 429 ನೌಕರರುಳ್ಳ ಘಟಕವನ್ನು ಹೊಂದಿದೆ.