ಬೆಂಗಳೂರು : ವಿಧಾನ ಸಭೆಯಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಏಳು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ನಾಲ್ವರು, ಕಾಂಗ್ರೆಸ್ನ ಇಬ್ಬರು ಹಾಗೂ ಒಬ್ಬ ಜೆಡಿಎಸ್ ಪಕ್ಷದ ಸದಸ್ಯ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳು ಚುನಾವಣಾಧಿಕಾರಿ ಎಂ ಕೆ ವಿಶಾಲಾಕ್ಷಿಯವರಿಂದ ಪ್ರಮಾಣಪತ್ರ ಸ್ವೀಕರಿಸಿದರು.
ನಾಮಪತ್ರ ವಾಪಸ್ ಪಡೆಯಲು ಇಂದು ಮಧ್ಯಾಹ್ನ 3 ಗಂಟೆ ಡೆಡ್ಲೈನ್ ಆಗಿತ್ತು. ಒಟ್ಟು ಒಂಬತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಸೂಚಕರಿಲ್ಲದೆ ನಾಮಪತ್ರ ಸಲ್ಲಿಸಿದ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿತ್ತು. ಈ ಹಿನ್ನೆಲೆ 7 ಮಂದಿ ಸದಸ್ಯರು ವಿಧಾನಪರಿಷತ್ಗೆ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ ಕೆ ವಿಶಾಲಾಕ್ಷಿ ಘೋಷಿಸಿದ್ದಾರೆ.
ಕಾಂಗ್ರೆಸ್ನಿಂದ ಬಿ ಕೆ ಹರಿಪ್ರಸಾದ್, ನಜೀರ್ ಅಹಮ್ಮದ್, ಬಿಜೆಪಿಯಿಂದ ಎಂಟಿಬಿ ನಾಗರಾಜ್, ಆರ್ ಶಂಕರ್, ಸುನೀಲ್ ವಲ್ಯಾಪುರೆ, ಪ್ರತಾಪ್ ಸಿಂಹ ನಾಯಕ್ ಮತ್ತು ಜೆಡಿಎಸ್ನಿಂದ ಗೋವಿಂದರಾಜು ಅವಿರೋಧವಾಗಿ ಮೇಲ್ಮನೆ ಪ್ರವೇಶ ಮಾಡಿದ್ದಾರೆ.