ಬೆಂಗಳೂರು: ರಾಜ್ಯದ 19 ಜಿಲ್ಲೆಗಳಲ್ಲಿ ನಡೆದ 58 ನಗರ ಸ್ಥಳೀಯ ಸಂಸ್ಥೆಗಳು ಹಾಗು ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯ ಕಾರ್ಯ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ.
ಐದು ನಗರ ನಗರಸಭೆ, 58 ನಗರ ಸ್ಥಳೀಯ ಸಂಸ್ಥೆಗಳು ಹಾಗು 59 ಗ್ರಾಮ ಪಂಚಾಯಿತಿಗಳ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಕೆಲವೇ ಹೊತ್ತಲ್ಲಿ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ.
ಎಂಎಲ್ಸಿ ಚುನಾವಣೆಯ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಇದು ಮತ್ತೊಂದು ಅಗ್ನಿಪರೀಕ್ಷೆಯಾಗಿದೆ. ನಗರ ಸಂಸ್ಥೆಗಳಾದ್ದರಿಂದ ಬಿಜೆಪಿಯ ಶಕ್ತಿ ಪರೀಕ್ಷೆಯೂ ಆಗಿದೆ. 5 ನಗರಸಭೆ, 19 ಪುರಸಭೆ ಮತ್ತು 34 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 58 ನಗರ ಸಂಸ್ಥೆಗಳಿಗೆ ಸೋಮವಾರ ನಡೆದ ಚುನಾವಣೆ ನಡೆದಿದ್ದು, ಶೇ. 75ರಷ್ಟು ಮತದಾನವಾಗಿತ್ತು.
ಚುನಾವಣೆಯಾಗಿರುವ 58 ನಗರ ಸಂಸ್ಥೆಗಳಲ್ಲಿ ಬೆಳಗಾವಿಯ ಪಾಲು ಹೆಚ್ಚು. ಇಲ್ಲಿ ನಾಲ್ಕು ಪುರಸಭೆ ಮತ್ತು 11 ಪಟ್ಟಣ ಪಂಚಾಯಿತಿ ಸೇರಿ 15 ನಗರ ಸಂಸ್ಥೆಗಳಿಗೆ ಚುನಾವಣೆ ಆಗಿದೆ. ವಿಜಯಪುರದ ಐದು ಪಟ್ಟಣ ಪಂಚಾಯಿತಿಗೂ ಎಲೆಕ್ಷನ್ ನಡೆದಿದೆ. ಬೆಳಗಾವಿಯಲ್ಲಿ ಎರಡು ಪರಿಷತ್ ಸ್ಥಾನಗಳ ಚುನಾವಣೆಯಲ್ಲಿ ಸೋಲನುಭವಿಸಿದ್ದ ಬಿಜೆಪಿಗೆ ಈ ನಗರಸಂಸ್ಥೆ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಬಂಕಾಪುರ ಪುರಸಭೆ, ಗುತ್ತಲ ಪಟ್ಟಣ ಪಂಚಾಯಿತಿ ಮತ ಎಣಿಕೆಗೆ ಸಿದ್ಧತೆ ನಡೆಸಲಾಗಿದೆ. ಶಿಗ್ಗಾಂವಿ ತಹಶೀಲ್ದಾರ ಕಚೇರಿಯಲ್ಲಿ ಬಂಕಾಪುರ ಪುರಸಭೆಯ ಮತ ಎಣಿಕೆ ಕಾರ್ಯ ಮತ್ತು ಹಾವೇರಿ ತಹಶೀಲ್ದಾರ ಕಚೇರಿಯಲ್ಲಿ ಗುತ್ತಲ ಪಟ್ಟಣ ಪಂಚಾಯಿತಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
ಬಂಕಾಪುರ ಪುರಸಭೆಯ 23 ಸ್ಥಾನಗಳಿಗೆ 61 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗುತ್ತಲ ಪಟ್ಟಣ ಪಂಚಾಯಿತಿಯ 18 ಸ್ಥಾನಗಳಿಗೆ 43 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಿಎಂ ಬೊಮ್ಮಾಯಿ ತವರು ಕ್ಷೇತ್ರದ ಬಂಕಾಪುರ ಪುರಸಭೆ ಫಲಿತಾಂಶ ಕುತೂಹಲ ಕೆರಳಿಸಿದೆ.