ಬೆಂಗಳೂರು: ಧರ್ಮೇಗೌಡ ನಿಧನದಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕಾಗಿ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಇಂದು ನಾಮಪತ್ರ ಸಲ್ಲಿಸಿದರು.
ವಿಧಾನಸೌಧದಲ್ಲಿ ಚುನಾವಾಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಗೋಪಾಲಯ್ಯ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಧರ್ಮೇಗೌಡ ನಿಧನದಿಂದ ತೆರವಾದ ಸ್ಥಾನಕ್ಕೆ ತುಳಸಿ ಮುನಿರಾಜು ಸ್ಪರ್ಧಿಸುತ್ತಿದ್ದಾರೆ. ಅವರು ಬಿಜೆಪಿ ಸರ್ವಸಮ್ಮತ ಅಭ್ಯರ್ಥಿಯಾಗಿದ್ದಾರೆ. ಎಲ್ಲ ಹಿರಿಯರ ಅಪೇಕ್ಷೆಯಂತೆ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಮುನಿರಾಜು ಅವರು ಮತಗಟ್ಟೆ ಕಾರ್ಯಕರ್ತರಾಗಿ, ಯುವ ಮೋರ್ಚಾ ಅಧ್ಯಕ್ಷರಾಗಿ ಕೆಲಸ ಮಾಡಿದವರು. ನಗರ ಪಾಲಿಕೆ ಚುನಾವಣೆಯಿಂದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ರಾಜ್ಯದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಒಬ್ಬ ಸಮರ್ಥ ನಾಯಕ ಎಂದು ತಿಳಿಸಿದರು.
ಓದಿ: ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡಗೆ ಬಿ ಫಾರಂ ನೀಡಿದ ಕಟೀಲ್
ಇದೇ ವೇಳೆ ಮಾತನಾಡಿದ ಅಭ್ಯರ್ಥಿ ತುಳಸಿ ಮುನಿರಾಜು, ಸಾಮಾನ್ಯ ಕಾರ್ಯರ್ತನಿಗೆ ಪರಿಷತ್ ಸದಸ್ಯನಾಗಲು ಅವಕಾಶ ನೀಡಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸುವ ಬಹು ದೊಡ್ಡ ಕೆಲಸವನ್ನು ಹಿರಿಯರು ಮಾಡಿದ್ದಾರೆ. ಈ ರೀತಿ ವಾತಾವರಣ ಇರುವುದು ಬಿಜೆಪಿಯಲ್ಲಿ ಮಾತ್ರ. ಮುಂದಿನ ದಿನಗಳಲ್ಲಿ ಸಮಾಜಮುಖಿ ಚಿಂತನೆ, ಕೆಲಸಗಳನ್ನು ಮಾಡಲು ಅವಕಾಶ ಸಿಕ್ಕಿದೆ. ಎಲ್ಲಿ ಅವಕಾಶ ಸಿಗುತ್ತೋ ಅಲ್ಲಿ ಕೆಲಸ ಮಾಡುತ್ತೇನೆ ಎಂದರು.