ಬೆಂಗಳೂರು: ಏರ್ ಇಂಡಿಯಾ ಸಂಸ್ಥೆ ಸರ್ಕಾರದ ಸ್ವತ್ತಾಗಿ ಉಳಿದುಕೊಂಡಿಲ್ಲದ ಪರಿಣಾಮ ಮಧ್ಯಪ್ರವೇಶ ಅಸಾಧ್ಯ ಎಂದಿರುವ ಹೈಕೋರ್ಟ್, ರಾಜೀನಾಮೆ ಹಿಂಪಡೆದದ್ದನ್ನು ತಿರಸ್ಕರಿಸಿದ್ದ ಏರ್ ಇಂಡಿಯಾ ಕ್ರಮ ಪ್ರಶ್ನಿಸಿ ಸಂಸ್ಥೆಯ ಕಮಾಂಡರ್ ಒಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ತಾನು ನೀಡಿದ್ದ ರಾಜೀನಾಮೆಯನ್ನು ಹಿಂಪಡೆಯಲು ಅನುಮತಿ ನೀಡದ ಏರ್ ಇಂಡಿಯಾ ಕ್ರಮವನ್ನು ಎತ್ತಿಹಿಡಿದಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಆರ್.ಎಸ್.ಮದಿರೆಡ್ಡಿ ಹಾಗೂ ಕೇಂದ್ರ ಸರ್ಕಾರದ ನಡುವೆ ಬಾಂಬೆ ಹೈಕೋರ್ಟ್ ಪೀಠದ ಆದೇಶವನ್ನು ಉಲ್ಲೇಖಿಸಿರುವ ನ್ಯಾಯಪೀಠ, ಒಂದು ಸಂಸ್ಥೆಯನ್ನು ಖಾಸಗೀಕರಣ ಮಾಡಿದ ಬಳಿಕ ಸಂವಿಧಾನದ ಪರಿಚ್ಛೇದ 12ರಲ್ಲಿ ತಿಳಿಸಿರುವಂತೆ ಅದು ಸರ್ಕಾರದ ಸ್ವತ್ತಾಗಿ ಉಳಿದುಕೊಳ್ಳುವುದಿಲ್ಲ. ಹೀಗಾಗಿ ಅಂತಹ ಸಂಸ್ಥೆಯ ಕುರಿತಂತೆ ಅರ್ಜಿಯನ್ನು ವಿಚಾರಣೆ ನಡೆಸುವುದಕ್ಕೆ ನ್ಯಾಯಪೀಠಕ್ಕೆ ಅಧಿಕಾರ ವ್ಯಾಪ್ತಿಯಿಲ್ಲ ಎಂದು ತಿಳಿಸಿದೆ. ಅಲ್ಲದೆ, ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದ್ದ ಏಕ ಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ. ಜತೆಗೆ, ಇದೊಂದು ಸಿವಿಲ್ ಪ್ರಕರಣವಾಗಿದೆ. ಅಲ್ಲದೇ, ಅರ್ಜಿದಾರರು ಏರ್ ಕಮಾಂಡ್ ಆಗಿ ಸೇವೆ ಸಲ್ಲಿಸಿದ್ದು, ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಪರಿಹಾರವನ್ನು ಕಂಡುಕೊಳ್ಳಲು ಅವಕಾಶವಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಏನಿದು ಪ್ರಕರಣ?: ಕ್ಯಾಪ್ಟನ್ ಕೃಪಾ ಸಿಧು ಎಂಬುವರು 2020ರ ಫೆಬ್ರವರಿ 5ರಂದು ಏರ್ ಇಂಡಿಯಾಗೆ ರಾಜೀನಾಮೆ ನೀಡಿದ್ದರು. 2020ರ ಮಾರ್ಚ್ 18ರಂದು ಅವರು ತನ್ನ ರಾಜೀನಾಮೆ ಹಿಂಪಡೆದು ಉದ್ಯೋಗದಲ್ಲಿ ಮುಂದುವರೆಯಲು ಇಚ್ಚಿಸಿ ಪತ್ರ ಬರೆದಿದ್ದರು. ಆದರೆ, ಏರ್ ಇಂಡಿಯಾ ಸಂಸ್ಥೆ ಆಗಸ್ಟ್ 13ರಂದು ರಾಜೀನಾಮೆಯನ್ನು ಅಂಗೀಕರಿಸುವ ಪತ್ರವನ್ನು ರವಾನಿಸಿ ಸೇವೆಯಿಂದ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಏಕಸದಸ್ಯ ಪೀಠ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಂಸ್ಥೆಯನ್ನು ಖಾಸಗೀಕರಣ ಮಾಡಿದ್ದರೂ, ನ್ಯಾಯಾಲಯ ನಿರ್ದೇಶನ ನೀಡಬಹುದು ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ: ದಸರಾ ಬಳಿಕ ಮುರುಘಾ ಮಠದ ಶಿವಮೂರ್ತಿ ಶರಣರ ಜಾಮೀನು ಅರ್ಜಿ ವಿಚಾರಣೆ