ಬೆಂಗಳೂರು: ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಬಿಜೆಪಿ ಸರ್ಕಾರ ತೀರ್ಮಾನ ಕೈಗೊಂಡಿದೆ. ಒಟ್ಟು ಮೀಸಲಾತಿಯನ್ನು ಶೇ. 50 ಮಿತಿಯೊಳಗಿಡಲು ಇತರರ ಮೀಸಲಾತಿ ಕಡಿತ ಮಾಡಲಾಗುತ್ತಾ ಎಂಬ ಕುತೂಹಲ ಹುಟ್ಟು ಹಾಕಿದೆ. ಇತ್ತ ಕೆಲ ಬಿಜೆಪಿ ಮುಖಂಡರು ಮುಸ್ಲಿಂ ಮೀಸಲಾತಿ ರದ್ದುಪಡಿಸಲು ಒತ್ತಾಯಿಸುತ್ತಿದ್ದಾರೆ. ಅಷ್ಟಕ್ಕೂ ಬಿಜೆಪಿ ಪಾಳೆಯಕ್ಕೆ ಮುಸ್ಲಿಂ ಮೀಸಲಾತಿ ಮೇಲೆ ಕಣ್ಣು ಬಿದ್ದಿರುವುದು ಏಕೆ?. ಏನಿದು ಮುಸ್ಲಿಂ ಮೀಸಲಾತಿ ಲೆಕ್ಕಾಚಾರ ಈ ಬಗ್ಗೆ ವರದಿ ಇಲ್ಲಿದೆ.
ಬಿಜೆಪಿ ಸರ್ಕಾರ ಎಸ್ಸಿ ಹಾಗೂ ಎಸ್ಟಿಗೆ ಮೀಸಲಾತಿ ಹೆಚ್ಚಿಸಲು ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ಸಭೆ ಸಮ್ಮತಿ ಸೂಚಿಸಿದೆ. ಎಸ್ಸಿ ಮೀಸಲಾತಿಯನ್ನು ಶೇ.15 ರಿಂದ ಶೇ.17ಕ್ಕೆ ಹಾಗೂ ಎಸ್ಟಿ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದರಿಂದ ಸುಪ್ರೀಂಕೋರ್ಟ್ ಹೇರಿರುವ ಶೇ.50 ಮೀಸಲಾತಿ ಮಿತಿ ದಾಟಲಿದೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳವನ್ನು ಶೇ.50 ಮಿತಿ ಮೀರಿ ಮಾಡುವುದೋ ಅಥವಾ ಇತರರ ಮೀಸಲಾತಿ ಕಡಿತ ಮಾಡಿ ಶೇ. 50 ಮಿತಿಯೊಳಗೆ ಇರಿಸುವುದೋ ಎಂಬ ಗೊಂದಲ ಸರ್ಕಾರದ್ದಾಗಿದೆ.
ಮುಸ್ಲಿಂ ಮೀಸಲಾತಿ ರದ್ದತಿಗೆ ಬಿಜೆಪಿಗರ ಒತ್ತಾಯ: ಇತ್ತ ಬಿಜೆಪಿ ಶಾಸಕರಾದ ಬೆಲ್ಲದ್ ಹಾಗೂ ಯತ್ನಾಳ್ ಮುಸ್ಲಿಂ ಮೀಸಲಾತಿ ರದ್ದುಗೊಳಿಸಿ, ಅದರ ಜಾಗದಲ್ಲಿ ಇತರರಿಗೆ ಮೀಸಲಾತಿ ನೀಡಿ ಎಂದು ಒತ್ತಾಯಿಸಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಮಾತ್ರ 2Bಯಡಿ ಮೀಸಲಾತಿ ಕಲ್ಪಿಸಲಾಗುತ್ತಿದೆ. ಈ ಸಮುದಾಯ 17 ಉಪಜಾತಿಗಳನ್ನು ಹೊಂದಿದೆ. ಹೀಗಾಗಿ ಮುಸ್ಲಿಂಮರಿಗೆ ಶಿಕ್ಷಣದಲ್ಲಿ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಜೊತೆಗೆ ಶೇ.20 ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೀಸಲಾತಿ ನೀಡಲಾಗುತ್ತಿದೆ.
ಮುಸ್ಲಿಂ ಉಪಜಾತಿಗಳು ಕೆಟಗರಿ 1, 2 ಮತ್ತು 2Aದಲ್ಲೂ ಮೀಸಲಾತಿ ಪಡೆಯುತ್ತಿವೆ. ಎಲ್ಲ ಕೆಟಗರಿಯಲ್ಲಿ ಮುಸ್ಲಿಂ ಮೀಸಲಾತಿ ಅನುಕೂಲ ಪಡೆಯುತ್ತಿದ್ದು, ಅವುಗಳನ್ನು ರದ್ದುಮಾಡಿ, ಅದರ ಬದಲಿಗೆ ಇತರ ಸಮುದಾಯಕ್ಕೆ ಮೀಸಲಾತಿ ನೀಡಿ ಎಂಬುದು ಬಿಜೆಪಿ ನಾಯಕರ ವಾದ.
ಇದನ್ನೂ ಓದಿ: ಎಸ್ಸಿ, ಎಸ್ಟಿ ಮೀಸಲು ಹೆಚ್ಚಳದ ಸುಗ್ರೀವಾಜ್ಞೆಗೆ ಸಚಿವ ಸಂಪುಟ ಅಸ್ತು
ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ಇತಿಹಾಸ ಏನು?: ರಾಜ್ಯದಲ್ಲಿ ಮೊದಲಿಗೆ ನಾಗನಗೌಡ ಆಯೋಗ 1961ರಲ್ಲಿ ಮುಸ್ಲಿಂರನ್ನು ಒಬಿಸಿಯಡಿ ತರುವಂತೆ ವರದಿ ಸಲ್ಲಿಸಿತ್ತು. ಆಗ 10ಕ್ಕೂ ಹೆಚ್ಚು ಮುಸ್ಲಿಂ ಉಪಜಾತಿಗಳನ್ನು ಪತ್ತೆ ಹಚ್ಚಲಾಗಿತ್ತು. 1962ರಲ್ಲಿ ಈ ಸಂಬಂಧ ಆದೇಶ ಹೊರಡಿಸಲಾಯಿತು. ಆದರೆ, ಇದನ್ನು ಕೋರ್ಟ್ನಲ್ಲಿ ಪ್ರಶ್ನಿಸಲಾಯಿತು. ಹೀಗಾಗಿ ಅದನ್ನು 1962-1973 ವರೆಗೆ ಅಮಾನತಿನಲ್ಲಿ ಇರಿಸಲಾಯಿತು.
- 1975ರಲ್ಲಿ ದೇವರಾಜ ಅರಸು ಸಿಎಂ ಆಗಿದ್ದಾಗ ಮುಸ್ಲಿಂ ಮೀಸಲಾತಿಗೆ ಜೀವ ಬಂತು. ಅದಕ್ಕಾಗಿ ಹಾವನೂರು ಆಯೋಗ ರಚಿಸಿದರು. ಅದರಂತೆ ಒಬಿಸಿಯಡಿ ಮುಸ್ಲಿಂರಿಗೆ 1977ರಲ್ಲಿ ಮೀಸಲಾತಿ ನೀಡುವಂತೆ ಆದೇಶ ಹೊರಡಿಸಿದರು.
- 1983ರಲ್ಲಿ ಮತ್ತೊಂದು ಆಯೋಗ ರಚಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು.
- 1984ರಲ್ಲಿ ವೆಂಕಟಸ್ವಾಮಿ ಆಯೋಗ ಒಕ್ಕಲಿಗ, ಕೆಲ ಲಿಂಗಾಯತರನ್ನು ಒಬಿಸಿ ಪಟ್ಟಿಯಿಂದ ಕೈ ಬಿಡುವಂತೆ ಶಿಫಾರಸು ಮಾಡಿತು. ಜೊತೆಗೆ ಮುಸ್ಲಿಮರಿಗೆ ಮೀಸಲಾತಿ ನೀಡುವಂತೆ ವರದಿ ನೀಡಿತು. ಆಯೋಗದ ವರದಿ ವಿರೋಧಿಸಿ ಒಕ್ಕಲಿಗರ ಪ್ರತಿಭಟನೆ ಹೆಚ್ಚಾದ ಕಾರಣ ವರದಿಗೆ ಒಪ್ಪಿಗೆ ನೀಡಿರಲಿಲ್ಲ.
- 1990ರಲ್ಲಿ ಚಿನ್ನಪ್ಪ ರೆಡ್ಡಿ ನೇತೃತ್ವದಲ್ಲಿ ಮತ್ತೊಂದು ಆಯೋಗ ರಚಿಸಲಾಯಿತು. ಆ ಆಯೋಗ ಮತ್ತೆ ಮುಸಲ್ಮಾನರು ಹಿಂದುಳಿದ ವರ್ಗ ಎಂದಿತು. ಅದರಂತೆ 1994ರಲ್ಲಿ ಸರ್ಕಾರ ಮುಸ್ಲಿಂರಿಗೆ ಕೆಟಗರಿ 2ರಲ್ಲಿ ಮೀಸಲಾತಿ ನೀಡುವಂತೆ ಆದೇಶಿಸಿತು. ಮತ್ತೊಂದು ಆದೇಶ ಹೊರಡಿಸಿ, ಮುಸ್ಲಿಂ ಮೀಸಲಾತಿಯನ್ನು ಕೆಟಗರಿ 2ರಲ್ಲಿ ಶೇ.6ಕ್ಕೆ ನಿಗದಿಗೊಳಿಸಲಾಯಿತು.
- ಅದೇ ವರ್ಷ ಮಂಡಲ್ ಪ್ರಕರಣದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ.50 ಇರಿಸುವುದು ಅನಿವಾರ್ಯವಾಯಿತು. ಅದಕ್ಕಾಗಿ ಎಲ್ಲಾ ಮೀಸಲಾತಿಗಳನ್ನು ಕಡಿತಗೊಳಿಸಲಾಯಿತು. ಹಾಗಾಗಿ ಮುಸ್ಲಿಂ ಮೀಸಲಾತಿಯನ್ನು 2Bಯಡಿ ಶೇ.4ಕ್ಕೆ ಸೀಮಿತ ಮಾಡಲಾಯಿತು. ಆ ಬಗ್ಗೆ 1995 ಸರ್ಕಾರಿ ಆದೇಶ ಹೊರಡಿಸಲಾಯಿತು. ಅಲ್ಲಿಂದೀಚೆಗೆ ಅದು ಹಾಗೇ ಮುಂದುವರಿದಿದೆ.
ಇದನ್ನೂ ಓದಿ: ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ನಿರ್ಧಾರ
ಮುಸ್ಲಿಂ ಮೀಸಲಾತಿ ಹೆಚ್ಚಿಸಲು ಒತ್ತಾಯ: ಅತ್ತ ಕೆಲ ಬಿಜೆಪಿಗರು ಮುಸ್ಲಿಂ ಮೀಸಲಾತಿ ಕಡಿತ ಮಾಡುವಂತೆ ಒತ್ತಾಯಿಸಿದರೆ, ಇತ್ತ ಮುಸ್ಲಿಂ ಸಮುದಾಯ ತಮ್ಮ ಮೀಸಲಾತಿಯನ್ನು ಶೇ.7ಕ್ಕೆ ಏರಿಸುವಂತೆ ಒತ್ತಾಯಿಸುತ್ತಿದ್ದಾರೆ. ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ.15 ರಷ್ಟು ಮುಸ್ಲಿಂರಿದ್ದು, ಹೀಗಾಗಿ ಮೀಸಲಾತಿ ಹೆಚ್ಚಿಸುವಂತೆ ಸಮುದಾಯದವರು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ರಾಜ್ಯ ಅಲ್ಪಸಂಖ್ಯಾತರ ಆಯೋಗ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದೆ.
ಇದನ್ನೂ ಓದಿ: ಎಸ್ಸಿ - ಎಸ್ಟಿ ಮೀಸಲು ಹೆಚ್ಚಳದಿಂದ ಜನರಲ್ ಕೆಟಗರಿ ಕೋಟಾಕ್ಕೆ ಕತ್ತರಿ!