ಬೆಂಗಳೂರು: ಜರ್ಮನಿ ದೇಶದ ಮಾದರಿಯಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಐಟಿ ಬಿಟಿ ಸಚಿವ ಸಚಿವ ಅಶ್ವತ್ಥ್ ನಾರಾಯಣ್ ತಿಳಿಸಿದರು.
ಈ ಸಂಬಂಧ ಮಾತನಾಡಿದ ಅವರು, ಜರ್ಮನಿ ಮಾದರಿಯ ಲಾಕ್‌ಡೌನ್ ಘೋಷಣೆ ಮಾಡಲು ಸರ್ಕಾರ ಚಿಂತನೆ ಮಾಡುತ್ತಿದೆ. ಈ ನಿಯಮದಡಿ, ಲಸಿಕೆ ಪಡೆಯದವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯ. ಅಂಥವರಿಗೆ ಏರ್ ಪೋರ್ಟ್, ರೈಲ್ವೆ ನಿಲ್ದಾಣ, ಮೆಟ್ರೊ, ಬಸ್‌ಗಳಲ್ಲಿ ಪ್ರವೇಶ ನಿಷೇಧ ಹೇರಲಾಗುತ್ತದೆ ಎಂದರು.
ಇದನ್ನೂ ಓದಿ: ಒಮಿಕ್ರೋನ್ ಸೋಂಕಿತ ವ್ಯಕ್ತಿಯ ಸಂಪರ್ಕಿತರ ಪತ್ತೆಗಾಗಿ ಸೂಚನೆ: ಸಿಎಂ
ಲಸಿಕೆ ಪಡೆಯದವರು ಕಚೇರಿಗೆ ಹೋಗುವಂತಿಲ್ಲ (ನೌಕರರು ಲಸಿಕೆ ಪಡೆಯದೆ ಕಚೇರಿಗೆ ಬಂದರೆ, ಸಂಸ್ಥೆಯ ಮೇಲೆ ಕಠಿಣ ಕ್ರಮ). ಪೋಷಕರಿಗೆ ಲಸಿಕೆ ಆಗಿದ್ದರೆ ಮಾತ್ರ ಶಾಲೆಗೆ ಮಕ್ಕಳನ್ನು ಕಳಿಸಬಹುದು. ಮಾಲ್ಗಳಿಗೆ, ಚಿತ್ರಮಂದಿರಗಳಿಗೆ, ಉದ್ಯಾನವನ, ಪ್ರೇಕ್ಷಣೀಯ ಸ್ಥಳಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲಾ ಕಡೆ ಎರಡು ಡೋಸ್ ಪಡೆದಿರುವ ಸರ್ಟಿಫಿಕೇಟ್ ತೋರಿಸಲೇಬೇಕು. ಹಾಗೆಯೇ, ಮದುವೆ ಸಮಾರಂಭ, ನಾಮಕರಣ, ಸಮಾರಂಭ, ಟ್ಯಾಕ್ಸಿ, ಆಟೋ ಸೇವೆ ಪಡೆಯುವುದಕ್ಕೂ ಇದು ಕಡ್ಡಾಯ. ಎಪಿಎಂಸಿ ಮಾರುಕಟ್ಟೆಯಲ್ಲಿ ವರ್ತಕರು ಮತ್ತು ರೈತರು ಸರ್ಟಿಫಿಕೇಟ್ ತೋರಿಸಿ ವ್ಯವಹಾರ ನಡೆಸಬೇಕು. ಹಾಗೆಯೇ ಬಾರ್, ಪಬ್, ರೆಸ್ಟೋರೆಂಟ್‌ಗಳಲ್ಲಿ ಕೂಡ ಇದನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಇನ್ನೂ 40 ಲಕ್ಷ ಜನರು ಎರಡನೇ ಡೋಸ್ ಪಡೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮದ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಚಿವರು ತಿಳಿಸಿದರು.