ಬೆಂಗಳೂರು: ಸರ್ಕಾರ ಎಸ್ಸೆಸೆಲ್ಸಿ (SSLC) ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದು, ಕೋವಿಡ್-19 ಹಿನ್ನೆಲೆ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಸರಳೀಕರಣ ಮಾಡಲಾಗಿದೆ. 6 ವಿಷಯಗಳ ಪರೀಕ್ಷೆ ಎರಡೇ ದಿನದಲ್ಲಿ ನಡೆಸಲಾಗುತ್ತಿದೆ. 2020-21ರ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 8.76 ಲಕ್ಷ ವಿದ್ಯಾರ್ಥಿಗಳು ಎಸ್ಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.
ಕೋವಿಡ್ ಹಿನ್ನೆಲೆ ಈ ಮೊದಲಿನಂತೆ ಪರೀಕ್ಷೆ ನಡೆಸುವುದು ಅಸಾಧ್ಯವಾಗಿರುವ ಕಾರಣ ಆರು ವಿಷಯಗಳನ್ನು ಎರಡು ಭಾಗವನ್ನಾಗಿ ಮಾಡಲಾಗಿದೆ. ಮೊದಲ ಭಾಗದಲ್ಲಿ ಕೋರ್ ವಿಷಯಗಳು ಮತ್ತು ಎರಡನೇ ಭಾಗದಲ್ಲಿ ಭಾಷಾ ವಿಷಯಗಳು ಇರಲಿವೆ. ಕೋರ್ ವಿಷಯದಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ಹಾಗೂ ಎರಡನೇ ಭಾಗದಲ್ಲಿ 3 ಭಾಷಾ ವಿಷಯಗಳು ಇರಲಿವೆ. ಎರಡು ಭಾಗದ ಪರೀಕ್ಷೆಯನ್ನು ಎರಡು ದಿನದಲ್ಲಿ ಮುಗಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಪ್ರಶ್ನೆ ಪತ್ರಿಕೆ ತಯಾರಿಕೆ: ಬಹು ಆಯ್ಕೆ ಪ್ರಶ್ನೆ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಪ್ರತಿ ವಿಷಯಕ್ಕೆ 40 ಅಂಕಗಳನ್ನು ನೀಡಲಾಗುತ್ತದೆ. 3 ಕೋರ್ ವಿಷಯಗಳ 120 ಅಂಕಗಳ ಪ್ರಶ್ನೆ ಪತ್ರಿಕೆ ಇರಲಿದೆ. ಇದರಲ್ಲಿ ಭಾಗ 1- ಗಣಿತ, ಭಾಗ 2- ವಿಜ್ಞಾನ, ಭಾಗ 3 - ಸಮಾಜ ವಿಷಯಗಳ ಪ್ರಶ್ನೆಗಳಿರುತ್ತದೆ. ಪ್ರತಿ ಭಾಗಕ್ಕೆ 1 ಗಂಟೆ ಸಮಯ ನೀಡಲಾಗುತ್ತದೆ. 3 ವಿಷಯಗಳಿಗೆ 3 ಗಂಟೆಯ ಸಮಯವನ್ನು ಪರೀಕ್ಷಾರ್ಥಿಗಳಿಗೆ ನೀಡಲಾಗುತ್ತದೆ. ಪರೀಕ್ಷೆ ಸಮಯವನ್ನು ಬೆಳಗ್ಗೆ 10:30ರಿಂದ 1:30ಕ್ಕೆ ನಿಗದಿ ಮಾಡಲಾಗಿದೆ.
ಪರೀಕ್ಷಾ ಕೇಂದ್ರ: ರಾಜ್ಯದಲ್ಲಿ 5,288 ಸರ್ಕಾರಿ ಪ್ರೌಢ ಶಾಲೆಗಳು, 3,392 ಅನುದಾನಿತ ಪ್ರೌಢ ಶಾಲೆಗಳು, 6,247 ಅನುದಾನ ರಹಿತ ಪ್ರೌಢ ಶಾಲೆಗಳಿದ್ದು, ಒಟ್ಟು 14,927 ಶಾಲೆಗಳಿಂದ 8,76, 595 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 100 ವಿದ್ಯಾರ್ಥಿಗಳನ್ನು ನಿಗದಿ ಮಾಡಲಾಗಿದೆ. ಈ ಹಿಂದೆ ಇದ್ದ 3,000 ಪರೀಕ್ಷಾ ಕೇಂದ್ರಗಳನ್ನು ದ್ವಿಗುಣ ಮಾಡಿ 6,000 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
ಒಂದು ಡೆಸ್ಕ್ಗೆ ಒಬ್ಬ ವಿದ್ಯಾರ್ಥಿಯಂತೆ ಒಂದು ಕೊಠಡಿಗೆ 12 ವಿದ್ಯಾರ್ಥಿಗಳನ್ನು ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳ ನಡುವೆ ಕನಿಷ್ಠ 6 ಅಡಿ ಅಂತರ ಇರಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಸಮೀಪದ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಇದಕ್ಕಾಗಿ ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.
ಉತ್ತರ ಪತ್ರಿಕೆ ಮಾದರಿ: ಉತ್ತರ ಪತ್ರಿಕೆಯು ಒಎಂಆರ್ (OMR - Optical Mark Reader) ರೂಪದಲ್ಲಿರುತ್ತದೆ. OMR ಉತ್ತರ ಪತ್ರಿಕೆಯಲ್ಲಿರುವ ಪ್ರಶ್ನೆಗಳಿಗೆ ಶೇಡ್ ಮಾಡುವ ಮೂಲಕ ವಿದ್ಯಾರ್ಥಿಗಳು ಉತ್ತರಿಸಬೇಕು. OMR ಶೀಟ್ನ ಮುಖಪುಟದಲ್ಲಿ ವಿದ್ಯಾರ್ಥಿಯ ಭಾವಚಿತ್ರದೊಂದಿಗೆ ಸಂಪೂರ್ಣ ವಿವರ ಇರುತ್ತದೆ.
ಪರೀಕ್ಷಾ ಫಲಿತಾಂಶ: ಆರು ವಿಷಯಗಳಿಗೆ ತಲಾ 40 ಅಂಕಗಳ ಪರೀಕ್ಷೆ ನಡೆಯಲಿದ್ದು, 40 ಅಂಕಗಳನ್ನು 80 ಅಂಕಗಳಿಗೆ ಪರಿವರ್ತಿಸಲಾಗುತ್ತದೆ. ಇದರ ಜೊತೆಗೆ ಅಂತರಿಕ ಅಂಕಗಳನ್ನು ಸೇರ್ಪಡೆ ಮಾಡಿ, ಒಟ್ಟು 625 ಅಂಕಗಳಿಗೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಶೇ. 90ರಿಂದ 100 ಅಂಕಗಳಿಗೆ A+ ಶ್ರೇಣಿ, ಶೇ. 80ರಿಂದ 89 ಅಂಕಗಳಿಗೆ A ಶ್ರೇಣಿ, ಶೇ. 60ರಿಂದ 70 ಅಂಕಗಳಿಗೆ B ಶ್ರೇಣಿ, ಶೇ. 35ರಿಂದ 59 ಅಂಕಗಳಿಗೆ C ಶ್ರೇಣಿ ನೀಡಲಾಗುತ್ತದೆ.