ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಮೈಶುಗರ್ಸ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಆರ್ಥಿಕ ಇಲಾಖೆ 50 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿರುವ ಸರ್ಕಾರಿ ಸ್ವಾಮ್ಯದ ಏಕೈಕ ಸರ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಈ ಹಿಂದೆ ಭರವಸೆ ಕೊಟ್ಟಿದ್ದರು.
ರೋಗಗ್ರಸ್ಥವಾಗಿದ್ದ ಕಾರ್ಖಾನೆಯ ಪುನಶ್ಚೇತನಕ್ಕೆ ಇದೀಗ ಸರ್ಕಾರ 15 ಕೋಟಿ ರೂ ಹಾಗೂ ಕಾರ್ಖಾನೆಯ ದುಡಿಯುವ ಬಂಡವಾಳಕ್ಕೆ 35 ಕೋಟಿ ರೂ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಕಳೆದ ವಾರ ಅನುಮೋದನೆ ನೀಡಿದ್ದರು. ಅದರಂತೆ ಇಂದು ಆರ್ಥಿಕ ಇಲಾಖೆ ಐವತ್ತು ಕೋಟಿ ರೂಪಾಯಿ ರಿಲೀಸ್ ಮಾಡಿದೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ನೇತೃತ್ವದ ಮಂಡ್ಯ ಜಿಲ್ಲಾ ಕಾಂಗ್ರೆಸ್ ಶಾಸಕರ ಮತ್ತು ಜನಪ್ರತಿನಿಧಿಗಳ ನಿಯೋಗ ಮೈ ಶುಗರ್ಸ್ ಪುನಶ್ಚೇತನಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿತ್ತು. 37 ಸಾವಿರ ಕಬ್ಬು ಬೆಳೆಗಾರ ರೈತರಿಂದ 5 ಲಕ್ಷ ಟನ್ ಕಬ್ಬು ಸರಬರಾಜು ಮಾಡುವ ಒಪ್ಪಂದವಾಗಿತ್ತು. ಈ ಒಪ್ಪಂದದಂತೆ ರೈತರಿಗೆ ಸಕಾಲದಲ್ಲಿ ಹಣ ಒದಗಿಸುವ ಅಗತ್ಯವಿದೆ ಎಂದು ನಿಯೋಗ ಮನವಿಯಲ್ಲಿ ತಿಳಿಸಿತು. ನಿಯೋಗದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಕೊಟ್ಟ ಮಾತಿನಂತೆ ತಕ್ಷಣಕ್ಕೆ 50 ಕೋಟಿ ರೂ ಬಿಡುಗಡೆ ಮಾಡಿದ್ದಾರೆ.
"ನಾವು ಅಧಿಕಾರಕ್ಕೆ ಬಂದರೆ 15 ದಿನಗಳೊಳಗೆ ಮೈಶುಗರ್ ಕಾರ್ಖಾನೆ ಪ್ರಾರಂಭ ಮಾಡುತ್ತೇವೆ ಎಂಬ ಭರವಸೆ ನೀಡಿದ್ದೆವು. ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆಯಾಗಿದೆ. ಮೊದಲ ಕ್ಯಾಬಿನೆಟ್ ನಂತರ ಸಿಎಂ ಸಿದ್ದರಾಮಯ್ಯ ಮೈಶುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಹಣ ಬಿಡುಗಡೆ ಮಾಡಿದ್ದಾರೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ" ಎಂದು ಕೃಷಿ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.
ಡಿಕೆಶಿ ನಿವಾಸದ ಇಂದಿನ ಬೆಳವಣಿಗೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾವಗಡ ಸೋಲಾರ್ ಪಾರ್ಕ್‌ನಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಜತೆ ವೈಮಾನಿಕ ವೀಕ್ಷಣೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಇಲ್ಲಿಗೆ ತೆರಳುವ ಮುನ್ನ ಹಾಗೂ ನಂತರ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಕೆಲವು ಗಣ್ಯರನ್ನು ಭೇಟಿ ಮಾಡಿದರು.
ಬೆಳಗ್ಗೆ ಮಾಜಿ ಸಚಿವ ರೇಣುಕಾಚಾರ್ಯ ಅವರು ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ, ಸಮಾಲೋಚನೆ ನಡೆಸಿದರು. ಸಂಜೆ ಕರ್ನಾಟಕ ವೈದ್ಯರ ಸಂಘದ ಪದಾಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ, ಮಾತುಕತೆ ನಡೆಸಿದರು.
ಇದನ್ನೂಓದಿ: ರಾಜ್ಯದ 8 ಕಡೆ ಸಣ್ಣ ಕೈಗಾರಿಕೆ ಹಬ್ ಸ್ಥಾಪಿಸಲು ಚಿಂತನೆ: ಸಚಿವ ಶರಣ ಬಸಪ್ಪ ದರ್ಶನಾಪೂರ್