ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಹಬ್ಬದ ಕರಿಛಾಯೆ ಇದೀಗ ವಿಘ್ನ ವಿನಾಶಕ ಗಣೇಶ ಹಬ್ಬಕ್ಕೂ ತಟ್ಟಿದ್ದು, ಸಾರ್ವಜನಿಕ ಗಣೇಶೋತ್ಸವಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗಿದೆ.
74ನೇ ಸ್ವಾತಂತ್ರ್ಯೋತ್ಸವ ಸರಳವಾಗಿ ಆಚರಣೆ ಮಾಡುವ ರೀತಿಯಲ್ಲೇ ದೇವಸ್ಥಾನ, ಮನೆಯೊಳಗೆ ಮಾತ್ರ ಗಣೇಶ ಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಲಾಗಿದೆ. ಅದಕ್ಕಾಗಿ ನೂತನ ಮಾರ್ಗಸೂಚಿ ಹೊರಡಿಸಲಾಗಿದೆ.
ಗಣೇಶ ಹಬ್ಬವನ್ನು ಸರಳವಾಗಿ ಭಕ್ತಿ ಪೂರ್ವಕವಾಗಿ ದೇವಸ್ಥಾನದೊಳಗೆ ಅಥವಾ ಮನೆಯಲ್ಲಿ ಆಚರಿಸಬೇಕು ಎಂದು ತಿಳಿಸಲಾಗಿದೆ. ರಸ್ತೆ, ಓಣಿ, ಮೈದಾನ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪಣೆ ಮಾಡುವಂತಿಲ್ಲ. ಸಾರ್ವಜನಿಕ ನದಿ, ಕೆರೆ, ಕೊಳವೆ ಬಾವಿ ಮತ್ತು ಕಲ್ಯಾಣಿಯಲ್ಲಿ ಮೂರ್ತಿ ವಿಸರ್ಜನೆ ಮಾಡುವಂತಿಲ್ಲ. ಗಣೇಶ ತರುವಾಗ ಹಾಗೂ ವಿಸರ್ಜಣೆ ಮಾಡುವಾಗ ಮೆರವಣಿಗೆ ಮಾಡುವುದು ನಿಷೇಧಿಸಲಾಗಿದೆ.
ಮನೆಯಲ್ಲಿ ಪ್ರತಿಷ್ಠಾಪಿಸಿದ ಮೂರ್ತಿ ಮನೆಯಲ್ಲಿಯೇ ವಿಸರ್ಜಿಸಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಿದೆ .ಗಣೇಶ ಹಬ್ಬ ಆಚರಿಸುವ ದೇವಸ್ಥಾನ ಪ್ರತಿನಿತ್ಯ ಸ್ಯಾನಿಟೈಸ್ ಮಾಡಬೇಕು. ಭಕ್ತಾಧಿಗಳಿಗೆ ಥರ್ಮಲ್ ಸ್ಕ್ರೀನಿಂಗ್ , ಸ್ಯಾನಿಟೈಸ್ ಕಡ್ಡಾಯ ಮಾಡಿದೆ. ಭಕ್ತರಿಗೆ ಮಾಸ್ಕ್ ಧರಿಸುವುದು ಹಾಗೂ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿಸಿದೆ. ಈ ಹಿಂದೆಯೇ ಬಿಬಿಎಂಪಿಯೂ ಇದೇ ಪ್ರಕಾರವಾಗಿ ನಿಯಮಗಳನ್ನು ರೂಪಿಸಿದ್ದು, ರಾಜ್ಯ ಸರ್ಕಾರ ಮತ್ತೊಮ್ಮೆ ಇದನ್ನ ತಿಳಿಸಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಿಸದಂತೆ ತಿಳಿಸಿದ್ದು, ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದೆ.