ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿಯ ಎಸ್ಐಟಿ ತಂಡಕ್ಕೆ ತಾಂತ್ರಿಕವಾಗಿ ಪರಿಣತಿ ಪಡೆದಿರುವ ಸೈಬರ್ ಫೊರೆನ್ಸಿಕ್ ಹಾಗೂ ಕ್ರಿಪ್ಟೊ ಕರೆನ್ಸಿ ತಜ್ಞರ ತಂಡವನ್ನು ನೇಮಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ.
ಬಿಟ್ ಕಾಯಿನ್ ಪ್ರಕರಣವು ಆರ್ಥಿಕ ಸ್ವರೂಪದ ಅಪರಾಧ. ಇಂತಹ ಅಪರಾಧ ಬೇಧಿಸಬೇಕಾದರೆ ಪೊಲೀಸರು ತಾಂತ್ರಿಕವಾಗಿ ಪಳಗಬೇಕಿದೆ. ಸಿಐಡಿ ಜೊತೆಗೆ ಎಫ್ಎಸ್ಎಲ್ನ ಕೆಲವೇ ಅಧಿಕಾರಿಗಳು ಬಿಟ್ ಕಾಯಿನ್ ವ್ಯವಹಾರ ಸ್ವರೂಪದ ಬಗ್ಗೆ ಬಲ್ಲವರಾಗಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ವಂಚನೆಯನ್ನು ಬಗೆಹರಿಸಬೇಕಿದೆ.
ಹೀಗಾಗಿ ಎಸ್ಐಟಿ ತಂಡ ಸರ್ಕಾರಕ್ಕೆ ಪತ್ರ ಬರೆದು ವಿಶೇಷ ತಜ್ಞರ ತಂಡ ನಿಯೋಜಿಸುವ ಅಗತ್ಯವಿದೆ ಎಂದು ಹೇಳಿತ್ತು. ಇದನ್ನು ಮನಗಂಡ ಸರ್ಕಾರ ಕಳೆದ ಆಗಸ್ಟ್ 31ರಂದು ತಜ್ಞರ ತಂಡ ನೇಮಕಕ್ಕೆ ಒಪ್ಪಿಗೆ ನೀಡಿ ಗರಿಷ್ಠ ₹50 ಲಕ್ಷದವರೆಗೂ ಸೇವಾಶುಲ್ಕವಾಗಿ ಪಾವತಿಸಲು ಆದೇಶಿಸಿದೆ. ಈ ಆದೇಶ ಪತ್ರ ಈಟಿವಿ ಭಾರತ್‌ಗೆ ಲಭ್ಯವಾಗಿದೆ.
ಎಸ್ಐಟಿಗೆ ನೆರವಾಗುವ ತಜ್ಞರಿಗೆ ಶುಲ್ಕ ಪಾವತಿಸಲು ಸಾರ್ವಜನಿಕ ಪಾರದರ್ಶಕತೆ ಅಧಿನಿಯಮ-1999ರ ಜೆ (4)ರಡಿ ಅಧಿಕಾರ ಬಳಸಿ ಗರಿಷ್ಠ ₹50 ಲಕ್ಷದವರೆಗೆ ಅನುಮತಿ ಕೊಟ್ಟಿದೆ. ಈ ಮೂಲಕ ಬಿಟ್ ಕಾಯಿನ್ ಹಾಗೂ ಕ್ರಿಪ್ಟೊ ಕರೆನ್ಸಿ ಬಗ್ಗೆ ಅರಿತ ತಜ್ಞರನ್ನು ನೇಮಿಸಲು ಎಸ್ಐಟಿ ಮುಂದಾಗಿದೆ. ಈ ಬಗ್ಗೆ ಖಾಸಗಿ ಸಂಸ್ಥೆಗಳೊಂದಿಗೆ ತಂಡ ಸಂಪರ್ಕ ನಡೆಸುತ್ತಿದೆ. ದೇಶ-ವಿದೇಶಗಳಿಂದ ತಜ್ಞರನ್ನು ನೇಮಿಸುವ ಆಲೋಚನೆ ಎಸ್ಐಟಿಗಿದ್ದು, ಶತಾಯಗತಾಯವಾಗಿ ವಂಚನೆ ಪ್ರಕರಣ ಬೇಧಿಸಲು ಪಣ ತೊಟ್ಟಿದೆ.
ಪ್ರಕರಣವೇನು?: ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ ಜಾಲತಾಣ ಸೇರಿದಂತೆ ಹಲವು ಜಾಲತಾಣಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ದೋಷಾರೋಪ ಪಟ್ಟಿಯಲ್ಲಿ 31 ಬಿಟ್ ಕಾಯಿನ್ (ಆಗಿನ ಮೊತ್ತ 9 ಕೋಟಿ) ಕಳವಾಗಿರುವ ಬಗ್ಗೆ ಉಲ್ಲೇಖಿಸಲಿರಲಿಲ್ಲ. ಅಂದು ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಹೋರಾಟ ನಡೆಸಿತ್ತು. ಹಗರಣದ ಹಿಂದೆ ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಕಳೆದ ಜುಲೈ 12ರಂದು ಬಿಟ್ ಕಾಯಿನ್ ಪ್ರಕರಣ ಮರುತನಿಖೆ ನಡೆಸುವಂತೆ ಸಿಐಡಿಗೆ ಸೂಚಿಸಿತ್ತು.
ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದ ಎಸ್ಐಟಿ ತಂಡ ರಚಿಸಿ ತನಿಖೆ ನಡೆಸುತ್ತಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಶ್ರೀಕೃಷ್ಣ, ಸುನೀಶ್ ಹೆಗ್ಡೆ ಹಾಗೂ ಪ್ರಸಿದ್ದ್ ಶೆಟ್ಟಿ ಮನೆಗಳಿಗೆ ಸರ್ಚ್ ವಾರಂಟ್ ಪಡೆದು ಶೋಧಕಾರ್ಯ ನಡೆಸಿತ್ತು. ಈ ಹಿಂದೆ ಪ್ರಕರಣ ತನಿಖೆ ನಡೆಸುತ್ತಿದ್ದ ಅಂದಿನ ಸಿಸಿಬಿ ತನಿಖಾಧಿಕಾರಿ ಸೇರಿ ಇತರರ ವಿರುದ್ಧ ಸಾಕ್ಷ್ಯಾಧಾರ ನಾಶಪಡಿಸಿದ ಆರೋಪದಡಿ ಕಾಟನ್‌ಪೇಟೆ ಪೊಲೀಸ್ ಠಾಣೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿತ್ತು.
31 ಬಿಟ್ ಕಾಯಿನ್ ಎಲ್ಲಿ?: ಶ್ರೀಕಿಯನ್ನು ಬಂಧಿಸಿ ಆತನಿಂದ 31 ಬಿಟ್ ಕಾಯಿನ್ ವಶಪಡಿಸಿಕೊಂಡಿರುವುದಾಗಿ ಮಾಧ್ಯಮಗಳ ಮುಂದೆ ಪ್ರಸ್ತಾಪಿಸಲಾಗಿತ್ತು. ಆದರೆ ಸಿಸಿಬಿ ದೋಷಾರೋಪ ಪಟ್ಟಿ ಸಲ್ಲಿಸುವಾಗ 31 ಬಿಟ್ ಕಾಯಿನ್ ಬಗ್ಗೆ ಎಲ್ಲಿಯೂ ಉಲ್ಲೇಖಿಸಲಿರಲಿಲ್ಲ. ಆ ನಂತರ ಶ್ರೀಕಿಯಿಂದ 31 ಬಿಟ್ ಕಾಯಿನ್ ವಶಪಡಿಸಿಕೊಂಡಿರಲಿಲ್ಲ ಎಂದು ಪೊಲೀಸರೇ ಹೇಳಿದ್ದರು. ಈ ಬಗ್ಗೆ ಹೋರಾಟ ನಡೆಸಿದ್ದ ಕಾಂಗ್ರೆಸ್, ಶ್ರೀಕಿಯಿಂದ ಅಕ್ರಮವಾಗಿ ಬಿಟ್ ಕಾಯಿನ್ ವರ್ಗಾಯಿಸಿಕೊಂಡಿದ್ದು ಇದರ ಹಿಂದೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಪಾತ್ರವಿದೆ ಎಂದು ಆರೋಪಿಸಿತ್ತು.
ಇದನ್ನೂ ಓದಿ: Bitcoin case: ಸರ್ಚ್ ವಾರೆಂಟ್ ಪಡೆದು ಶ್ರೀಕಿ ಮನೆಯನ್ನು ಪರಿಶೀಲನೆ ನಡೆಸಿದ ಸಿಐಡಿ