ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಾರಿ ಪಂಚ ಗ್ಯಾರಂಟಿ ಹೊರೆ ಮತ್ತು ಬರದ ಬರೆಯ ಮಧ್ಯೆ ಹಣಕಾಸು ನಿರ್ವಹಣೆ ಮಾಡಬೇಕಾಗಿದೆ. ತೆರಿಗೆ ಸಂಗ್ರಹ ನಿರೀಕ್ಷಿತ ಗುರಿ ಮುಟ್ಟದ ಕಾರಣ ಬಜೆಟ್ನಲ್ಲಿ ಅಂದಾಜಿಸಿದಂತೆ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಪಂಚ ಗ್ಯಾರಂಟಿ ಕೇಂದ್ರೀಕೃತ ಆಡಳಿತಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಇದಕ್ಕಾಗಿ 2023-24 ಸಾಲಿನಲ್ಲಿ ಸುಮಾರು 40,000 ಕೋಟಿ ರೂ. ವೆಚ್ಚವಾಗಲಿದ್ದು, ಗರಿಷ್ಠ ಆದಾಯ ಸಂಗ್ರಹಕ್ಕೆ ಒತ್ತು ನೀಡಿದೆ. ಇದರ ಮಧ್ಯೆ 223 ತಾಲೂಕುಗಳಲ್ಲಿ ತೀವ್ರ ಬರ ಉಂಟಾಗಿರುವುದು ಸರ್ಕಾರದ ಹಣಕಾಸು ನಿರ್ವಹಣೆಯ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ. ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗದೇ ಇರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೇ ಡಿಸೆಂಬರ್ನಲ್ಲಿ ಮೊದಲ ವಾರದಲ್ಲಿ ಮುಖ್ಯಮಂತ್ರಿ ಎಲ್ಲ ತೆರಿಗೆ ಸಂಗ್ರಹದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಆದಾಯ ಸಂಗ್ರಹ ಹೆಚ್ಚಿಸುವಂತೆ ತಾಕೀತು ಮಾಡಿದ್ದಾರೆ.
2023-24ರ ಸಾಲಿಗೆ ಸರ್ಕಾರ 1.82 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಿದೆ. ವಾಣಿಜ್ಯ ತೆರಿಗೆ - 98,650 ಕೋಟಿ ರೂ., ಅಬಕಾರಿ - 36,000 ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕ - 25,000 ಕೋಟಿ ರೂ., ಸಾರಿಗೆ - 11,500 ಕೋಟಿ ರೂ. ಮತ್ತು ಗಣಿ ಹಾಗೂ ಭೂವಿಜ್ಞಾನ ಇಲಾಖೆಯಿಂದ 9,000 ಕೋಟಿ ರೂ. ತೆರಿಗೆ ಸಂಗ್ರಹದ ನಿರೀಕ್ಷೆ ಹೊಂದಿದೆ. ಆದರೆ, ಈವರೆಗೆ ಒಟ್ಟು 1.10 ಲಕ್ಷ ಕೋಟಿ ಮಾತ್ರ ಸಂಗ್ರಹಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೇವಲ 12,000 ಕೋಟಿ ಮಾತ್ರ ಹೆಚ್ಚು ಆದಾಯ ಬಂದಿದೆ. ಬರದ ಹಿನ್ನೆಲೆ ಪ್ರಮುಖ ತೆರಿಗೆಗಳು ನಿಗದಿತ ಗುರಿ ಮುಟ್ಟುವಲ್ಲಿ ವಿಫಲವಾಗಿದೆ ಎನ್ನುತ್ತಾರೆ ಆರ್ಥಿಕ ಇಲಾಖೆ ಅಧಿಕಾರಿಗಳು.
ಮುಕ್ತ ಮಾರುಕಟ್ಟೆ ಮೂಲಕ ಸಾಲ ಶುರು: ಸರ್ಕಾರ ಪಂಚ ಗ್ಯಾರಂಟಿ ಹಾಗೂ ಬರ ನಿರ್ವಹಣೆಗಾಗಿ ಹೆಚ್ಚಿನ ಹಣ ಹೊಂದಿಸುವ ಅನಿವಾರ್ಯತೆಕ್ಕೊಳಗಾಗಿದೆ. ಹೀಗಾಗಿ ಗರಿಷ್ಠ ಆದಾಯ ಸಂಗ್ರಹದ ಜೊತೆಗೆ ಅಧಿಕ ಸಾಲದ ಮೊರೆ ಹೋಗುವುದು ಪರಿಸ್ಥಿತಿ ಉದ್ಭವಿಸಿದೆ. ಜುಲೈನಲ್ಲಿ ಮಂಡಿಸಿದ ಬಜೆಟ್ನಲ್ಲಿ 2023-24 ಸಾಲಿನಲ್ಲಿ ಒಟ್ಟು ಅಂದಾಜು 85,818 ಕೋಟಿ ಸಾಲ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದಿಂದ 6,254 ಕೋಟಿ ರೂ. ಸಾಲ ಮಾಡಲು ಅಂದಾಜಿದೆ. ಬಹಿರಂಗ ಮಾರುಕಟ್ಟೆ ಮೂಲಕ 78,363 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ಬಜೆಟ್ನಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 17ರಿಂದ ಆರ್ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ ಮುಕ್ತ ಮಾರುಕಟ್ಟೆಯಿಂದ ಸರ್ಕಾರ ಸಾಲದ ಎತ್ತುವಳಿ ಆರಂಭಿಸಿದೆ. ಕಳೆದ ಎರಡು ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಆರ್ಬಿಐ ಮೂಲಕ ಯಾವುದೇ ಸಾಲವನ್ನು ಎತ್ತುವಳಿ ಮಾಡಿಲ್ಲ. ಎರಡನೇ ತ್ರೈಮಾಸಿಕದಲ್ಲಿ ಸಾಲ ಮಾಡುವುದಾಗಿ ಆರ್ಬಿಐಗೆ ಮಾಹಿತಿ ನೀಡಿದ್ದರೂ, ಯಾವುದೇ ಸಾಲದ ಎತ್ತುವಳಿ ಮಾಡಿರಲಿಲ್ಲ. ಆದರೆ, ಪ್ರಸಕ್ತ ತ್ರೈಮಾಸಿಕದಲ್ಲಿ ಬಹಿರಂಗ ಮಾರುಕಟ್ಟೆಯಲ್ಲಿ ಸಾಲ ಎತ್ತುವಳಿ ಮಾಡಲು ಶುರು ಮಾಡಿದೆ.
17,000 ಕೋಟಿ ರೂ. ಸಾಲ: ಆರ್ಬಿಐ ಮೂಲಕ ಬಹಿರಂಗ ಮಾರುಕಟ್ಟೆಯಲ್ಲಿ ಡಿಸೆಂಬರ್ 12ರವರೆಗೆ ಸರ್ಕಾರ 17,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಪ್ರಸಕ್ತ ಮೂರನೇ ತ್ರೈಮಾಸಿಕ ಅಂದರೆ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ಸುಮಾರು 30,000 ಕೋಟಿ ಸಾಲ ಮಾಡಲು ಮುಂದಾಗಿದೆ. ಅದರಂತೆ ಬಹಿರಂಗ ಮಾರುಕಟ್ಟೆಯಲ್ಲಿ ಅ.17ರಂದು 1,000 ಕೋಟಿ ರೂ., ಅ.23 ರಂದು 2,000 ಕೋಟಿ ರೂ., ಅ.31ರಂದು 2,000 ಕೋಟಿ ರೂ., ನ.1ರಂದು 3,000 ಕೋಟಿ ರೂ., ನ.21ರಂದು 1,000 ಕೋಟಿ ರೂ., ಡಿ.5ರಂದು 4,000 ಕೋಟಿ ರೂ., ಡಿ.12ರಂದು 4,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಾಗಿದೆ.
ಇತ್ತ, ಆರ್ಥಿಕ ಇಲಾಖೆ ನೀಡಿರುವ ಅಂಕಿ - ಅಂಶದ ಪ್ರಕಾರ, ಕಳೆದ ಏಳು ತಿಂಗಳಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕ ಸಾಲದ ಮೂಲಕ ಸುಮಾರು 7,399.60 ಕೋಟಿ ರೂ. ಸಾಲ ಮಾಡಿದೆ. ಸಾರ್ವಜನಿಕ ಸಾಲವಾಗಿ ಏಪ್ರಿಲ್ನಲ್ಲಿ 262.40 ಕೋಟಿ ರೂ. ಸಾಲ ಮಾಡಿತ್ತು. ಮೇ ತಿಂಗಳಲ್ಲಿ 181.42 ಕೋಟಿ ರೂ. ಸಾಲ ಮಾಡಿದ್ದರೆ, ಜೂನ್ನಲ್ಲಿ 158.47 ಕೋಟಿ ರೂ. ಸಾಲ ಮಾಡಲಾಗಿದೆ. ಜುಲೈನಲ್ಲಿ 40.73 ಕೋಟಿ ರೂ. ಮಾತ್ರ ಸಾರ್ವಜನಿಕ ಸಾಲ ಪಡೆಯಲಾಗಿದೆ. ಆಗಸ್ಟ್ನಲ್ಲಿ 228.02 ಕೋಟಿ ರೂ. ಸಾಲ ಮಾಡಿದ್ದರೆ, ಸೆಪ್ಟೆಂಬರ್ನಲ್ಲಿ ಸುಮಾರು 235 ಕೋಟಿ ರೂ. ಸಾಲ ಮತ್ತು ಅಕ್ಟೋಬರ್ನಲ್ಲಿ 6,208 ಸಾರ್ವಜನಿಕ ಸಾಲ ಮಾಡಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ನಡೆ.. 5ನೇ ಗ್ಯಾರಂಟಿ ಯುವ ನಿಧಿ ಅನುಷ್ಠಾನದ ಕಡೆಗೆ: ರಣದೀಪ್ ಸಿಂಗ್ ಸುರ್ಜೇವಾಲ