ಬೆಂಗಳೂರು: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯ 6ನೇ ವೇತನ ಆಯೋಗ ಶಿಫಾರಸಿನಂತೆ ಈ ತಿಂಗಳಿಂದ ಜಾರಿಗೆ ಬರುವಂತೆ ವೇತನ ಹಾಗೂ ಭತ್ಯೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ 6ನೇ ವೇತನ ಆಯೋಗ 2018ರಲ್ಲಿ ಕೆಲ ನಿರ್ದಿಷ್ಟ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳನ್ನು ಮೇಲ್ದರ್ಜೆಗೇರಿಸುವಂತೆ ಶಿಫಾರಸು ಮಾಡಿತ್ತು.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶಿಫಾರಸು ಜಾರಿ ಸಂಬಂಧ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ವರದಿಯನ್ನು ನೀಡಿದ್ದು, ಅದರಂತೆ ಇದೀಗ ರಾಜ್ಯ ಸರ್ಕಾರ ವೇತನ ಪರಿಷ್ಕರಣೆ ಆದೇಶ ಹೊರಡಿಸಿದೆ. ಆಗಸ್ಟ್ 1ರಿಂದ ಈ ಪರಿಷ್ಕೃತ ವೇತನ, ಭತ್ಯೆ ಆದೇಶ ಜಾರಿಗೆ ಬರಲಿದೆ.
ಯಾರಿಗೆಲ್ಲಾ ವೇತನ ಪರಿಷ್ಕರಣೆ?: ಪುರಾತತ್ವ ಹಾಗೂ ಮ್ಯೂಸಿಯಂ ಇಲಾಖೆಯ ಸಹಾಯಕ ಕ್ಯುರೇಟರ್ ಮತ್ತು ಸರ್ವೇಯರ್, ಸಹಾಯಕ ಪುರಾತತ್ವ ಅಧಿಕಾರಿ, ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕರುಗಳ ವೇತನವನ್ನು ಪರಿಷ್ಕರಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಮ ಶಾಲಾ ಉಪನ್ಯಾಸಕರ ವೇತನ ಪರಿಷ್ಕರಣೆ ಮಾಡಲಾಗಿದೆ. ಅಬಕಾರಿ ಇಲಾಖೆಯ ಉಪ ಅಧೀಕ್ಷಕರು, ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ಸ್, ಉಪ ವಲಯ ಅರಣ್ಯಾಧಿಕಾರಿಗಳು, ಮಾವುತರು, ಕಾವಾಡಿಗಳು, ಜಮೇದಾರರ ವೇತನ ಪರಿಷ್ಕರಿಸಲಾಗಿದೆ.
ವಿಧಿ ವಿಜ್ಞಾನ ಪ್ರಯೋಗಾಲಯದ ಲ್ಯಾಬ್ ಸಹಾಯಕರು, ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿಗಳು, ಕಾನೂನು ಮಾಪನ ಶಾಸ್ತ್ರದ ಸಹಾಯಕ ನಿಯಂತ್ರಣಾಧಿಕಾರಿಗಳು, ಮುದ್ರಣ ಹಾಗೂ ಪ್ರಕಾಶನ ಇಲಾಖೆಯ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಯ ಉಪನ್ಯಾಸಕರು, ಎಸ್ ಟಿ ಕಲ್ಯಾಣ ಇಲಾಖೆಯ ಆಶ್ರಮ ಶಾಲೆ ಉಪನ್ಯಾಸಕರು, ಸರ್ವೆ, ಇತ್ಯರ್ಥ ಹಾಗೂ ಭೂ ದಾಖಲೆ ಇಲಾಖೆಯ ಸಹಾಯಕ ನಿರ್ದೇಶಕರುಗಳ ವೇತನವನ್ನು ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಉಳಿದ ಇತರೆ ಶ್ರೇಣಿಯ ಸರ್ಕಾರಿ ನೌಕರರ ವೇತನ ಹಾಗೂ ವಿಶೇಷ ಭತ್ಯೆಗಳನ್ನು ಮೇಲ್ದರ್ಜಗೇರಿಸುವ ಆರನೇ ವೇತನ ಆಯೋಗದ ಶಿಫಾರಸನ್ನು ರಾಜ್ಯ ಸರ್ಕಾರ ಒಪ್ಪಿಲ್ಲ.
ಇದನ್ನೂ ಓದಿ: ರಾಹುಲ್ ಗಾಂಧಿ ಕೈಸನ್ನೆ ಸೂಚನೆ.. ಸಿದ್ದರಾಮಯ್ಯರನ್ನು ಅಪ್ಪಿಕೊಂಡ ಡಿಕೆಶಿ: ವಿಡಿಯೋ ನೋಡಿ