ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮೊದಲ ದಿನವೇ ನಿರೀಕ್ಷೆಗೂ ಮೀರಿ 7.6 ಲಕ್ಷ ಕೋಟಿ ರೂ. ಬಂಡವಾಳವನ್ನು ರಾಜ್ಯದಲ್ಲಿ ಹೂಡಿಕೆ ಮಾಡಲು ವಿವಿಧ ಕೈಗಾರಿಕೋದ್ಯಮಿಗಳು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಸಮಾವೇಶ ಮುಕ್ತಾಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇದರಿಂದ 8 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಈ ಬಾರಿ 5 ಲಕ್ಷ ಕೋಟಿ ರೂ. ಬಂಡವಾಳ ನಿರೀಕ್ಷಿಸಿದ್ದೆವು. ಆದರೆ, ಇದಕ್ಕೂ ಮೀರಿದ ಹೂಡಿಕೆಗೆ ಒಪ್ಪಂದಗಳು ಮೊದಲ ದಿನವೇ ಏರ್ಪಟ್ಟಿವೆ ಎಂದರು.
ಈ ಹಿಂದೆ 2010 ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ನಾವು ಜಾಗತಿಕ ಹೂಡಿಕೆದಾರರ ಸಮಾವೇಶ ಮಾಡಿದ್ದೆವು. ಆಗ 3.8 ಲಕ್ಷ ಕೋಟಿ ರೂ.ನಷ್ಟು ಹೂಡಿಕೆಯ ಒಪ್ಪಂದಗಳಿಗೆ ಸಹಿ ಆಗಿತ್ತು. ನಂತರ 2012 ರಲ್ಲಿ ಮತ್ತೊಂದು ಜಿಮ್ ನಡೆಸಿದಾಗ ವಿವಿಧ ಕೈಗಾರಿಕೆಗಳೊಂದಿಗೆ 7.6 ಲಕ್ಷ ಕೋಟಿ ರೂ. ಹೂಡಿಕೆ ಒಪ್ಪಂದಗಳಿಗೆ ನಾವು ಸಹಿ ಮಾಡಿದ್ದೆವು ಎಂದು ಮಾಹಿಚಿ ನೀಡಿದರು.
ಜಿಮ್‌ಗೆ ವಿವಿಧ ರಾಜ್ಯ, ವಿದೇಶಗಳಲ್ಲಿ ರೋಡ್ ಶೋ ಹಾಗೂ ಖುದ್ದು ಭೇಟಿಯಾಗಿ ಆಹ್ವಾನಿಸಿದ್ದ ಎಲ್ಲ ಉದ್ಯಮಿಗಳೂ ಬಂದಿದ್ದಾರೆ. ಮೊದಲ ದಿನದ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಮುಗಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿತ ಸಮಯಕ್ಕೆ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ. ಪ್ರತಿಯೊಬ್ಬರೂ ಕರ್ನಾಟಕದ ಬಗ್ಗೆ ಮತ್ತು ರಾಜ್ಯ ಸರ್ಕಾರದ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇದು ನಮಗೆ ಅತ್ಯಂತ ಸಂತೋಷ ಎಂದು ಹೇಳಿದರು.
ಈ ಬಾರಿ ಬಂದಿರುವ ಬಂಡವಾಳ ಹೆಚ್ಚಾಗಿ ಬೆಂಗಳೂರಿನ ಹೊರಭಾಗದಲ್ಲಿಯೇ ಹೂಡಿಕೆಯಾಗಲಿದೆ. 2 ಮತ್ತು 3 ನೇ ಹಂತದ ನಗರಗಳಲ್ಲಿ ಉತ್ತಮ ಕೈಗಾರಿಕಾಸ್ನೇಹಿ ವಾತಾವರಣ ಸೃಷ್ಟಿಗೆ ಸರ್ಕಾರ ಕ್ರಮ ವಹಿಸುತ್ತಿದೆ. ಬರುವ ಮಾರ್ಚ್‌ಗೂ ಮುನ್ನ ಹಾಸನ, ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮೂರು ಹೊಸ ವಿಮಾನ ನಿಲ್ದಾಣಗಳು ಆರಂಭವಾಗಲಿವೆ. ನಂತರ ದಾವಣಗೆರೆ, ಬಾದಾಮಿ, ಕೊಪ್ಪಳ, ರಾಯಚೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಕ್ಕೆ ಭೂಮಿಯನ್ನು ಗುರುತಿಸುವ ಕೆಲಸ ಆಗುತ್ತಿದೆ. ರಸ್ತೆ, ರೈಲ್ವೆ, ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಗಮನ ಹರಿಸುತ್ತಿದೆ ಎಂದು ಸಚಿವರು ತಿಳಿಸಿದರು.
ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
ಇದನ್ನೂ ಓದಿ: 2025 ರಲ್ಲಿ ಮತ್ತೆ ಹೂಡಿಕೆದಾರರ ಸಮಾವೇಶ: ಸಿಎಂ ಬೊಮ್ಮಾಯಿ ಘೋಷಣೆ