ಬೆಂಗಳೂರು: ರಾಜ್ಯದ ಸಂಚಿತ ನಿಧಿಯಿಂದ 2021-22 ನೇ ಸಾಲಿನ ಹಣಕಾಸು ವರ್ಷಕ್ಕಾಗಿ 2,52,397.86 ಕೋಟಿ ರೂ.ಗಳಿಗೆ ಹೆಚ್ಚಾಗದಷ್ಟು ಮೊಬಲಗನ್ನು ಸಂದಾಯ ಮಾಡಲು ಅವಕಾಶ ನೀಡುವ ಕರ್ನಾಟಕ ಧನ ವಿನಿಯೋಗ ವಿಧೇಯಕ ಸಂಖ್ಯೆ 1ಕ್ಕೆ ವಿಧಾನಸಭೆಯಲ್ಲಿ ಇಂದು ಒಪ್ಪಿಗೆ ನೀಡಲಾಯಿತು.
ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2021-22 ನೇ ಹಣಕಾಸು ವರ್ಷದ ಸೇವೆಗಳಿಗಾಗಿ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಕೆಲವು ಮೊತ್ತ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡಲು ಈ ವಿಧೇಯಕ ಮಂಡಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು. ಪ್ರಸಕ್ತ ಸಾಲಿನ ಬಜೆಟ್‍ಗೆ ಸದನ ಅನುಮೋದನೆ ನೀಡಬೇಕೆಂದು ಸಿಎಂ ನಿರ್ಣಯ ಮಂಡಿಸಿದರು.
ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕೋವಿಡ್ ಸಂಕಷ್ಟ, ಪ್ರವಾಹದ ಪರಿಸ್ಥಿತಿ ವಿವರಗಳನ್ನು ನೀಡಿ ಧನ ವಿನಿಯೋಗಕ್ಕೆ ಅನುಮೋದನೆ ನೀಡಬೇಕೆಂದು ಕೋರಿದರು. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಗದ್ದಲದ ನಡುವೆಯೇ ಈ ವಿಧೇಯಕಕ್ಕೆ ಸದನ ಧ್ವನಿಮತದಿಂದ ಅಂಗೀಕಾರ ನೀಡಿತು.
ಓದಿ:ಕಲಾಪದಲ್ಲಿ ಪಟ್ಟುಬಿಡದ ವಿಪಕ್ಷ: ತಜ್ಞರ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ಹಣಿದ ಸಿಎಂ - VIDEO
ಇದೇ ವೇಳೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ತಿದ್ದುಪಡಿ ವಿಧೇಯಕ-2021, ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ-2021, ಪೂರಕ ಅಂದಾಜುಗಳ ಮೂರನೆ ಅಂತಿಮ ಬೇಡಿಕೆ ಪ್ರಸ್ತಾವನೆಗಳು-2020-21 ವಿಧೇಯಕಗಳನ್ನೂ ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು.