ಬೆಂಗಳೂರು: ಬಹುಮತ ಬಂದಿರುವ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕೆಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಗ್ರಹಿಸಿದೆ.
ಖಾಸಗಿ ಹೋಟೆಲ್ನಲ್ಲಿ ಇಂದು ಸಂಜೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಅವರು, ಶೋಷಿತ ಸಮುದಾಯಗಳ ಒಕ್ಕೂಟ ಕಾಂಗ್ರೆಸ್ಗೆ ಬೆಂಬಲಿಸಿದೆ. ಕರ್ನಾಟಕದಲ್ಲಿ ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿರುವ ನಾಗರೀಕ ಸಮಾಜ, ಜನಪರ ಚಳವಳಿಗಳೂ ಬದಲಾವಣೆ ಬಯಿಸಿ ಆಯ್ಕೆ ಮಾಡಿದ್ದಾರೆ. ಹಾಗಾಗಿ, ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಅತಂತ್ರ ವಿಧಾನಸಭೆಯನ್ನು ತಪ್ಪಿಸಿ ಮತದಾರರು ಒಂದೇ ಪಕ್ಷವನ್ನು ಆಯ್ಕೆ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ದೇಶ ಮೆಚ್ಚುವ ರೀತಿ ಸರ್ಕಾರ ಕೊಟ್ಟಿದ್ದಾರೆ. ಅವರು ಬಡವರ, ಶೋಷಿತರ ಪಾಲಿಗೆ ಆನೇಕ ರೀತಿಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರು ಕೊಟ್ಟ ಸ್ಥಿರ ಸರ್ಕಾರ, ಆರ್ಥಿಕ ಶಿಸ್ತು, ಪರಿಶಿಷ್ಟ ಜಾತಿ, ವರ್ಗಗಳು, ಅಲ್ಪಸಂಖ್ಯಾತ ಸಮುದಾಯದ ಜನರನ್ನು ಕಾಪಾಡುವ ಆನೇಕ ಕಾರ್ಯಕ್ರಮಗಳನ್ನು ಅವರು ಕೊಟ್ಟಿದ್ದಾರೆ. ಯಾವುದೇ ರೀತಿ ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸಿದ್ದಾರೆ.
ಈಗ ಮತ್ತೊಮ್ಮೆ ಕರ್ನಾಟಕದ ಜನತೆ ಸಿದ್ದರಾಮಯ್ಯನವರ ನಾಯಕತ್ವವನ್ನು ಬಯಸುತ್ತಿದ್ದಾರೆ. ಹಾಗಾಗಿ, ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವರ ಹೆಸರನ್ನು ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ.ಎಂ. ರಾಮಚಂದ್ರಪ್ಪ, ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಇಂದೂದರ್ ಹೊನ್ನಾಪುರ, ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್, ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರೆಡ್ಡಿ ಸಮುದಾಯದ ಶಾಸಕರುಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ - ಕರ್ನಾಟಕ ರೆಡ್ಡಿ ಜನಸಂಘ: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರೆಡ್ಡಿ ಜನಾಂಗದ 12 ಜನ ಶಾಸಕರು ಆಯ್ಕೆಯಾಗಿದ್ದು, ಮುಂದಿನ ಸರ್ಕಾರದಲ್ಲಿ ರೆಡ್ಡಿ ಸಮುದಾಯದ ಶಾಸಕರುಗಳೀಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಕರ್ನಾಟಕ ರೆಡ್ಡಿ ಜನಸಂಘ ಮನವಿ ಮಾಡಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕರುಗಳಿಗೆ ಪತ್ರವನ್ನು ಬರೆದಿರುವ ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷ ಜಯರಾಂ ರೆಡ್ಡಿ, "ರೆಡ್ಡಿ ಜನಾಂಗ ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದು. ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿದ್ದ 12 ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಮಲಿಂಗಾರೆಡ್ಡಿ, ಹೆಚ್.ಕೆ ಪಾಟೀಲ್, ಎನ್. ಎಸ್ ಸುಬ್ಬಾರೆಡ್ಡಿ ಅವರಂತಹ ಹಿರಿಯ ನಾಯಕರು ಸೇರಿದಂತೆ 12 ಜನರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿರುವ ರೆಡ್ಡಿ ಜನಾಂಗದ ಶಾಸಕರುಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಮೂಲಕ ಅವರು ರಾಜ್ಯದ ಜನರಿಗೆ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿದ್ದಾರೆ.
ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪಗೆ ಸಿಎಂ ಸ್ಥಾನ ಕೊಡಿ: ಅಭಿಮಾನಿಗಳ ಆಗ್ರಹ