ಬೆಂಗಳೂರು: ನವೆಂಬರ್ 18 ಮತ್ತು 19ರಂದು ನಡೆಯಲಿರುವ ನಿಗಮ ಮಂಡಳಿ ಹುದ್ದೆಗಳ ಪರೀಕ್ಷೆಗೆ ಶಿರವಸ್ತ್ರ ಧರಿಸಿ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 28 ಮತ್ತು 29ರಂದು ನಡೆದಿದ್ದ ವಿವಿಧ ನಿಗಮ ಮಂಡಳಿಗಳ ಪರೀಕ್ಷೆಗೆ ಶಿರವಸ್ತ್ರ ಧರಿಸಿ ಹಾಜರಾಗಲು ನೀಡಿದ್ದ ಷರತ್ತುಬದ್ಧ ಅನುಮತಿಯನ್ನು ನಿಗಮ ಮಂಡಳಿ ಹುದ್ದೆಗಳ ಪರೀಕ್ಷೆಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದುವರೆಸಿದೆ. ಹೀಗಾಗಿ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗಬಹುದಾಗಿದೆ.
ನಿಗಮ ಮಂಡಳಿಗಳ ಪರೀಕ್ಷೆಗೆ ವಸ್ತ್ರಸಂಹಿತ ಜಾರಿಗೊಳಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶಿರವಸ್ತ್ರ ವಿಚಾರದಲ್ಲಿ ಪ್ರತ್ಯೇಕವಾಗಿ ಪ್ರಕಟಣೆ ಹೊರಡಿಸಿ ಸ್ಪಷ್ಟೀಕರಣ ನೀಡಿದೆ. ಅಕ್ಟೋಬರ್ 28 ಮತ್ತು 29ರಂದು ನಡೆದಿದ್ದ ಮೊದಲ ಹಂತದ ವಿವಿಧ ನಿಗಮ ಮಂಡಳಿಗಳ ಪರೀಕ್ಷೆಗೆ ಶಿರವಸ್ತ್ರ ಧರಿಸಿ ಪರೀಕ್ಷೆ ಬರೆಯಲು ನೀಡಿದ್ದ ಷರತ್ತುಬದ್ದ ಅನುಮತಿಯನ್ನೇ ನವಂಬರ್ 18 ಮತ್ತು 19 ರಂದು ನಡೆಯಲಿರುವ ಎರಡನೇ ಹಂತದ ಪರೀಕ್ಷೆಗೂ ಮುಂದುವರಿಕೆ ಮಾಡಿ ಆದೇಶಿಸಿದೆ.
ಇದನ್ನೂ ಓದಿ: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಸೂಚನೆಗಳೇನು?: ಶಿರವಸ್ತ್ರ ಧರಿಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಕೊಠಡಿಗೆ ಪ್ರವೇಶ ಕಲ್ಪಸಲು ಸೂಚಿಸಿದ್ದರೂ ಪರೀಕ್ಷೆ ಆರಂಭವಾಗುವುದಕ್ಕೆ ಎರಡು ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ಅವರು ಹಾಜರಿರಬೇಕು. ಅವರು ಮಹಿಳಾ ಸಿಬ್ಬಂದಿಯಿಂದ ತಪಾಸಣೆಗೆ ಒಳಪಡಬೇಕು. ತಪಾಸಣೆಗೆ ಸೂಚಿಸಿರುವ ಸಮಯ ಮೀರಿದ ನಂತರ ಆಗಮಿಸಿದರೆ ಅವರು ಶಿರವಸ್ತ್ರ ಧರಿಸಿ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ಇರುವುದಿಲ್ಲ ಎಂದು ಪರೀಕ್ಷಾ ಪ್ರಾಧಿಕಾರ ಸ್ಪಷ್ಟೀಕರಣ ನೀಡಿದೆ.
ಮಂಗಳ ಸೂತ್ರ, ಕಾಲುಂಗುರಕ್ಕೆ ಅವಕಾಶ: ಪರೀಕ್ಷೆ ಬರೆಯಲಿರುವ ಮಹಿಳಾ ಅಭ್ಯರ್ಥಿಗಳಿಗೆ ಮಂಗಳಸೂತ್ರ ಮತ್ತು ಕಾಲುಂಗುರ ಧರಿಸಲು ಅನುಮತಿಸಲಾಗಿದೆ. ಇತ್ತೀಚೆಗೆ ನಡೆದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಾಗಿದ್ದ ಗೃಹಿಣಿಯರ ಮಂಗಳಸೂತ್ರ ಹಾಗೂ ಕಾಲುಂಗುರ ತೆಗೆಸಿದ ಘಟನೆ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನವೆಂಬರ್ 18 ಮತ್ತು 19 ರಂದು ನಡೆಯಲಿರುವ ಪರೀಕ್ಷೆಗಳಿಗೆ ವಸ್ತ್ರ ಸಂಹಿತೆ ರೂಪಿಸಿದೆ. ಅದರಂತೆ ವಿವಾಹಿತ ಮಹಿಳೆಯರು ಮಾಂಗಲ್ಯ ಹಾಗೂ ಕಾಲುಂಗುರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ.
ಕೆಇಎ ನಿಯಮಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು, ಇಲ್ಲವಾದಲ್ಲಿ ನಿಯಮಾನುಸಾರ ಅಭ್ಯರ್ಥಿಗಳ ಮೇಲೆ ಕ್ರಮವನ್ನು ಜರುಗಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ತಿಳಿಸಿದ್ದಾರೆ.
ಇದನ್ನೂ ಓದಿ: ನಿಗಮ ಮಂಡಳಿ ಹುದ್ದೆಗಳ ಪರೀಕ್ಷೆಗೆ ಮಂಗಳ ಸೂತ್ರ, ಕಾಲುಂಗುರಕ್ಕೆ ಅವಕಾಶ: ಕೆಇಎಯಿಂದ ವಸ್ತ್ರಸಂಹಿತೆ ಬಿಡುಗಡೆ