ಬೆಂಗಳೂರು: ರಾಜ್ಯದ ಬಹು ನಿರೀಕ್ಷಿತ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ 2021 ಇಂದು ಅನಾವರಣಗೊಂಡಿದೆ. ವಿದ್ಯುತ್ ಬೈಕ್ ಟ್ಯಾಕ್ಸಿ ಸೇವೆ ನೀಡಲು ಏನು ಮಾಡಬೇಕು, ಷರತ್ತುಗಳೇನು ಎನ್ನುವ ಕುರಿತು ಸಮಗ್ರ ವರದಿ ಇಲ್ಲಿದೆ.
ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ ಜಾರಿಗೆ ತರುತ್ತಿದ್ದು, ರಾಜ್ಯದ ಎಲ್ಲಾ ನಗರ ಪ್ರದೇಶಗಳಿಗೆ ಇದು ಅನ್ವಯವಾಗುವಂತೆ ಜಾರಿಗೊಳಿಸಲಾಗುತ್ತಿದೆ. ಸಕ್ಷಮ ಪ್ರಾಧಿಕಾರದಿಂದ ಪರವಾನಿಗೆಯನ್ನು ಪಡೆಯದ ಹೊರತು ಯಾವುದೇ ವ್ಯಕ್ತಿಯು ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ವ್ಯವಹಾರದಲ್ಲಿ ತೊಡಗಿಕೊಳ್ಳುವಂತಿಲ್ಲ. ಬೈಕ್ ಟ್ಯಾಕ್ಸಿ ಏಜೆನ್ಸಿಯನ್ನು ನಡೆಸುವಂತಿಲ್ಲ. ಈ ಯೋಜನೆ ಅಡಿಯಲ್ಲಿ ವಿದ್ಯುತ್ ಚಾಲಿತ ಬೈಕ್ಗಳಿಗೆ ಮಾತ್ರ ಪರವಾನಗಿ ನೀಡಲಾಗುತ್ತದೆ. ಒಂದು ನಿರ್ದಿಷ್ಟ ನಗರಕ್ಕೆ ಮಾತ್ರ ಈ ಪರವಾನಿಗೆ ಸಿಂಧುವಾಗಿರುತ್ತದೆ.
ಈ ಯೋಜನೆ ಅಡಿಯಲ್ಲಿ ಪರವಾನಿಗೆಯ ಮಂಜೂರಾತಿ ಹಾಗೂ ನವೀಕರಣಕ್ಕಾಗಿ ಅರ್ಜಿ ಶುಲ್ಕದೊಂದಿಗೆ ಸಕ್ರಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಪರವಾನಗಿ ಅವಧಿ ಐದು ವರ್ಷ ಇರಲಿದ್ದು, ನವೀಕರಣಕ್ಕಾಗಿ ಅರ್ಜಿಯನ್ನು ಪರವಾನಿಗೆ ಮುಕ್ತಾಯಗೊಳ್ಳುವ 30 ದಿವಸಗಳ ಮೊದಲು ಸಲ್ಲಿಸಬೇಕು.
ಪರವಾನಿಗೆ ಪಾಲಿಸಬೇಕಾದುದು:
- ಪರವಾನಿಗೆದಾರರು 5000 ರೂ.ಗಳ ನಗದು ಭದ್ರತಾ ಠೇವಣಿಯನ್ನು ಇಡಬೇಕು.
- ಬೈಕ್, ಟ್ಯಾಕ್ಸಿಗಳಿಗೆ ನಿರ್ವಹಣೆಯನ್ನು ಕಲ್ಪಿಸುವುದರ ಜೊತೆಗೆ ನಿಲುಗಡೆಗೆ ಸಾಕಷ್ಟು ವ್ಯವಸ್ಥೆಯನ್ನು ಪರವಾನಗಿಕಾರನು ಒದಗಿಸಬೇಕು.
- ಅಗತ್ಯ ವಿಮೆ ಮಾಡಿಸಬೇಕು.
- ಒಂದು ಪ್ರಯಾಣದ ಮೊದಲ ಮತ್ತು ತಲುಪಬೇಕಾದ ಸ್ಥಳದ ನಡುವಿನ ಅಂತರ ಹತ್ತು ಕಿಲೋಮೀಟರ್ಗಿಂತ ಹೆಚ್ಚು ಇರುವಂತಿಲ್ಲ.
- ಶುಲ್ಕವನ್ನು ಪ್ರಯಾಣದ ದೂರದ ಆಧಾರದ ಮೇಲೆ ವಸೂಲಿ ಮಾಡಬೇಕು.
- ಪ್ರಯಾಣದ ಅವಧಿ ಆಧಾರದ ಮೇಲೆ ವಸೂಲಿ ಮಾಡುವಂತಿಲ್ಲ.
- 5 ಕಿ.ಮೀ ಒಳಗಿನ ಹಾಗೂ ಐದು ಕಿಲೋಮೀಟರ್ ಮೇಲ್ಪಟ್ಟು ಹತ್ತು ಕಿ.ಮೀ ಒಳಗಿನ ಶುಲ್ಕವನ್ನು ರಾಜ್ಯ ಸರ್ಕಾರ ನಿರ್ದಿಷ್ಟ ಪಡಿಸುವಂತೆ ವಿಧಿಸಬೇಕು.
- ಬೈಕ್ ಟ್ಯಾಕ್ಸಿ ಸೇವೆ ಒದಗಿಸುವುದರಲ್ಲಿ ಚಾಲಕ ಮತ್ತು ಹಿಂಬದಿ ಪ್ರಯಾಣದ ಇಬ್ಬರು ಹಳದಿ ಬಣ್ಣದ ಹೆಲ್ಮೆಟ್ ಧರಿಸಬೇಕು.
- ಚಾಲಕ ವಿದ್ಯುತ್ ಬೈಕ್ ಟ್ಯಾಕ್ಸಿ ಎಂದು ಗುರುತಿಸಲಾದ ಪ್ರತಿಫಲಿಸುವ ಬಣ್ಣದ ಜಾಕೆಟ್ ಧರಿಸಬೇಕು.
- ಬೈಕ್ ಟ್ಯಾಕ್ಸಿಯನ್ನು ಕರಾರು ಸಂಚಾರ ಎಂದು ಬಳಸಬೇಕು.
ಪೊಲೀಸ್ ರಿಪೋರ್ಟ್ ಕಡ್ಡಾಯ:
ಯೋಜನೆಯಡಿ ನೇಮಕಗೊಂಡ ಎಲ್ಲಾ ಚಾಲಕರ ಪೂರ್ವ ಚರಿತ್ರೆಯನ್ನು ಸೇವಾದಾರರು ಕೂಲಂಕುಶವಾಗಿ ಪರಿಶೀಲಿಸಬೇಕು. ಚಾಲಕರ ಪೂರ್ವ ಚರಿತ್ರೆಗಳ ವರದಿಯನ್ನು ಸೇವಾಸಂಸ್ಥೆಯ ಕಚೇರಿ ಇರುವ ಪ್ರದೇಶದಲ್ಲಿನ ಅಥವಾ ಕಾರ್ಯಾಚರಣೆ ನಡೆಸುವ ನಗರದಲ್ಲಿನ ಪೊಲೀಸ್ ಠಾಣೆಗೆ ಕಳುಹಿಸಬೇಕು. ಪೊಲೀಸ್ ಠಾಣೆಯಿಂದ ಚಾಲಕರ ಪೂರ್ವ ಚರಿತ್ರೆಗಳ ಕುರಿತು ಪ್ರತಿಕೂಲ ವರದಿ ಬಂದಲ್ಲಿ ಅಂತಹ ಚಾಲಕರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು.
15 ವರ್ಷದೊಳಗಿನವರಿಗೆ ಅನುಮತಿ ಇಲ್ಲ:
ಪ್ರಯಾಣಿಕರ ಆದ್ಯತೆಯ ಪ್ರಯಾಣವನ್ನು ನೇರ ಮತ್ತು ಹತ್ತಿರದ ಮಾರ್ಗದ ಆಧಾರದಲ್ಲಿ ನೀಡಬೇಕು. 15 ವರ್ಷದ ಒಳಗಿನ ವ್ಯಕ್ತಿಯನ್ನು ಬಾಡಿಗೆದಾರನಾಗಿ ಕರೆದೊಯ್ಯಲು ಅನುಮತಿ ಇಲ್ಲ. ಒಬ್ಬರಿಗಿಂತ ಹೆಚ್ಚು ಹಿಂಬದಿ ಸವಾರರನ್ನು ಕರೆದೊಯ್ಯುವಂತಿಲ್ಲ. ಬೈಕ್ ಟ್ಯಾಕ್ಸಿ ಎಂಬ ಪದಗಳನ್ನು ಎರಡು ಬದಿಗಳ ವಾಹನಗಳ ಮೇಲೆ ಎದ್ದು ಕಾಣುವಂತೆ ಪ್ರತಿಫಲಿಸುವ ಬಣ್ಣದಲ್ಲಿ ಬರೆಯಬೇಕು.
ಪ್ರಥಮ ಚಿಕಿತ್ಸೆ ಪೆಟ್ಟಿಗೆ ಕಡ್ಡಾಯ:
ವಾಹನಗಳಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇರಬೇಕು. ಕಾಲ ಕಾಲಕ್ಕೆ ಮಾಲಿನ್ಯ ಮಾನದಂಡಗಳನ್ನು ಪೂರೈಸಬೇಕು. ಚಾಲಕನ ಹೆಸರು ದೂರವಾಣಿ ಸಂಖ್ಯೆಯನ್ನು ಬರೆದಿರಬೇಕು. ಯಾವುದೇ ಜಾಹಿರಾತನ್ನು ಪ್ರದರ್ಶಿಸುವಂತಿಲ್ಲ. 50ಕ್ಕಿಂತ ಹೆಚ್ಚು ಬೈಕ್ ಟ್ಯಾಕ್ಸಿಗಳನ್ನು ಹೊಂದಿರುವ ಸೇವಾದಾರರು ಜಿಪಿಎಸ್ ಅಳವಡಿಸಬೇಕು.
ಷರತ್ತುಗಳು ಅನ್ವಯ:
ವಿದ್ಯುತ್ ಬೈಕ್ ಟ್ಯಾಕ್ಸಿಯನ್ನು ಚಾಲನೆ ಮಾಡುವಾಗ ಚಾಲಕ ಧೂಮಪಾನ ಮಾಡುವಂತಿಲ್ಲ. ಮದ್ಯಪಾನ ಮಾಡತಕ್ಕದ್ದಲ್ಲ. ಚಾಲನೆ ಮಾಡುವಾಗಲೂ ಕುಡಿದಿರಬಾರದು, ಪ್ರಯಾಣಿಕರೊಂದಿಗೆ ಅನಾಗರಿಕತೆ ಹಾಗೂ ಅನುಚಿತ ವರ್ತನೆ ಮಾಡುವಂತಿಲ್ಲ. ವೇಗಮಿತಿ ನಿಯಮವನ್ನು ಉಲ್ಲಂಘಿಸುವಂತಿಲ್ಲ. ಅದೇ ರೀತಿ ಪ್ರಯಾಣಿಕರು ಧೂಮಪಾನ, ಮದ್ಯಪಾನ ಮಾಡುವಂತಿಲ್ಲ. ಮಧ್ಯಪಾನ ಪದಾರ್ಥಗಳನ್ನು ಬಳಸುವಂತಿಲ್ಲ. ಚಾಲಕರೊಂದಿಗೆ ಅನುಚಿತ ರೀತಿಯಲ್ಲಿ ವರ್ತಿಸುವಂತಿಲ್ಲ. ವೇಗ ಮಿತಿಯನ್ನು ಉಲ್ಲಂಘಿಸಿ ವಾಹನ ಚಾಲನೆ ಮಾಡುವಂತೆ ಚಾಲಕರನ್ನು ಒತ್ತಾಯಿಸುವಂತಿಲ್ಲ. ಸಕ್ಷಮ ಪ್ರಾಧಿಕಾರದ ನಿಯಮ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಪರವಾನಿಗೆಯನ್ನು ರದ್ದು ಪಡಿಸಲಾಗುತ್ತದೆ. ಒಮ್ಮೆ ಪರವಾನಗಿ ರದ್ದುಗೊಂಡರೆ ಆರು ತಿಂಗಳ ನಂತರವೇ ಮತ್ತೆ ಪರವಾನಗಿ ಪಡೆಯಕು ಅರ್ಜಿ ಸಲ್ಲಿಸಬೇಕಿದೆ.
ಇದನ್ನೂ ಓದಿ: ‘ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ’ ಯೋಜನೆಗೆ ಸಿಎಂ ಯಡಿಯೂರಪ್ಪ ಚಾಲನೆ
ಮೇಲ್ಮನವಿಗೆ ಅವಕಾಶ:
ಅಮಾನತು, ವಜಾ ಇತ್ಯಾದಿ ದಂಡನೆಗೆ ಗುರಿಯಾದ ವ್ಯಕ್ತಿಯೂ ಆದೇಶವನ್ನು ಸ್ವೀಕರಿಸಿದ 30 ದಿನಗಳ ಒಳಗಾಗಿ ಕರ್ನಾಟಕ ಟ್ರಾನ್ಸ್ಪೋರ್ಟಷನ್ ಟೆಕ್ನಾಲಜಿ ಅಗ್ರಿಗೇಟರ್ 2016ರ ನಿಯಮ 12ರ ಅಡಿಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.