ಬೆಂಗಳೂರು : ನಗರದ ರೆಸಾರ್ಟ್‌ಗಳಲ್ಲಿ ತಂಗಿರುವ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರ ಸಂಪರ್ಕ ಸಾಧಿಸುವ ಕುರಿತು ಕಾಂಗ್ರೆಸ್ ನಾಯಕರಲ್ಲಿ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಲು ಯತ್ನಿಸುತ್ತಿರುವ ರಾಜ್ಯದ ಘಟಾನುಘಟಿಗಳು ಹೈರಾಣಾಗಿದ್ದಾರೆ.
ಮಧ್ಯಪ್ರದೇಶದಿಂದ ಬಂದಿರುವ ಶಾಸಕರನ್ನು ಪ್ರತ್ಯೇಕ ನಾಲ್ಕು ಗುಂಪುಗಳಾಗಿ ವಿಂಗಡಿಸಿ ಬೆಂಗಳೂರಿನ ನಾಲ್ಕು ಪ್ರತ್ಯೇಕ ಹೋಟೆಲ್ಗಳಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎನ್ನಲಾಗಿದೆ. ಕೇಂದ್ರ ಬಿಜೆಪಿ ನಾಯಕರ ಸೂಚನೆಯ ಮೇರೆಗೆ ಅತ್ಯಂತ ವ್ಯವಸ್ಥಿತವಾಗಿ ರಾಜ್ಯ ಬಿಜೆಪಿ ನಾಯಕರು ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರನ್ನು ತಮ್ಮ ಸುಪರ್ದಿಯಲ್ಲಿ ಸುರಕ್ಷಿತವಾಗಿ ಇರಿಸಿಕೊಂಡಿದ್ದಾರೆ. ಇವರನ್ನು ಸಂಪರ್ಕಿಸುವುದು ಕರ್ನಾಟಕ ಕೈ ನಾಯಕರುಗಳಿಗೆ ದೊಡ್ಡ ಸವಾಲಿನ ಸಂಗತಿಯಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರ ಕೈಗೆ ಯಾವುದೇ ಕಾರಣಕ್ಕೂ ತಮ್ಮೊಂದಿಗಿರುವ ಶಾಸಕರು ಸಿಗದಂತೆ ರಾಜ್ಯ ಬಿಜೆಪಿ ನಾಯಕರಾದ ಅರವಿಂದ ಲಿಂಬಾವಳಿ, ಎಸ್ ಆರ್ ವಿಶ್ವನಾಥ್ ಹಾಗೂ ಮತ್ತಿತರ ನಾಯಕರು ವಿಶೇಷ ಮುತುವರ್ಜಿವಹಿಸಿದ್ದಾರೆ. ಗುಪ್ತವಾಗಿ ಶಾಸಕರನ್ನು ಪ್ರತ್ಯೇಕ ಸ್ಥಳದಲ್ಲಿರಿಸಿದ್ದು, ಯಾವುದೇ ಕಾರಣಕ್ಕೂ ಇವರ ಮಾಹಿತಿ ಮಾಧ್ಯಮಗಳಿಗೆ ಅಥವಾ ಕಾಂಗ್ರೆಸ್ ನಾಯಕರಿಗೆ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರು ವಿವಿಧ ಹಂತಗಳಲ್ಲಿ ಮಧ್ಯಪ್ರದೇಶ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈವರೆಗೂ ಯಾವುದೇ ನಾಯಕರಿಗೆ ಯಶ ಸಿಕ್ಕಿಲ್ಲ. ಯಾವ ಹೋಟೆಲ್, ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಗದ ಹಿನ್ನೆಲೆ ರಾಜ್ಯದ ಕೈ ಘಟಾನುಘಟಿಗಳು ಸಂಪೂರ್ಣ ಗೊಂದಲಕ್ಕೊಳಗಾಗಿದ್ದಾರೆ.
ಇದರ ನಡುವೆ ಇಂದು ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಿರುವ ಎಐಸಿಸಿ ನಾಯಕರುಗಳು ಹೇಗಾದರೂ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಲೇಬೇಕು ಎಂದು ಸೂಚಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್ ಹಾಗೂ ದಿನೇಶ್ ಗುಂಡೂರಾವ್ ಜೊತೆ ಚರ್ಚೆ ನಡೆಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್, ಇನ್ನೊಂದು ಹಂತದ ಪ್ರಯತ್ನ ಮಾಡುವಂತೆ ತಿಳಿಸಿದ್ದಾರೆ.