ಬೆಂಗಳೂರು: ಹೊಸ ವರ್ಷದ ನಿಮಿತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಶುಭಾಶಯ ಕೋರಿದರು. ಹೊಸ ವರ್ಷದಲ್ಲಿ ಆಡಳಿತಕ್ಕೆ ಇನ್ನಷ್ಟು ಚುರುಕು ಮುಟ್ಟಿಸಿ, ಜನಪರ ಆಡಳಿತ ನೀಡಲು ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಯಾವುದೇ ರೀತಿಯಲ್ಲೂ ಚಿಂತೆಗೀಡಾಗದೇ ಕೆಲಸ ಮಾಡಿ. ನಿಮ್ಮ ಕರ್ತವ್ಯದಲ್ಲಿ ನಾನು ಯಾವುದೇ ರೀತಿಯಲ್ಲೂ ಮಧ್ಯ ಪ್ರವೇಶಿಸಲ್ಲ. ಜನರ ಪರವಾದ ಆಡಳಿತ ನಡೆಸಿ, ನಿಮ್ಮ ಜೊತೆ ನಾನಿದ್ದೇನೆ. ನೀವೆಲ್ಲರೂ ಆಡಳಿತದಲ್ಲಿ ಅಪಾರ ಅನುಭವ ಹೊಂದಿದವರಾಗಿದ್ದೀರಿ. ನಿಮ್ಮ ಉದ್ದೇಶ ಸರಿ ಇರಲಿ, ಯಾವುದೇ ಒತ್ತಡಕ್ಕೆ ಒಳಗಾಗದೇ ನಿರ್ಭಯವಾಗಿ ಕೆಲಸ ಮಾಡಿ. ಎಲ್ಲ ಒಳ್ಳೆಯದಾಗಲಿ ಎಂದು ಸಂದೇಶ ನೀಡಿದರು.
ಮಕ್ಕಳಿಗೆ ಲಸಿಕೆ:
15ರಿಂದ 18 ವರ್ಷದವರಿಗೆ ಲಸಿಕೆ ನೀಡುವ ವಿಚಾರವಾಗಿ ಮಾತನಾಡಿದ ಸಿಎಂ, ನಾಡಿದ್ದು ಲಸಿಕೆ ಅಭಿಯಾನ ಪ್ರಾರಂಭ ಆಗುತ್ತಿದೆ. ನಾವೆಲ್ಲರೂ ಅಭಿಯಾನದಲ್ಲಿ ಭಾಗವಹಿಸುತ್ತಿದ್ದು, ಯಶಸ್ವಿಯಾಗಿ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿ ಹಾಗೂ ಕೋವಿಡ್ ಜಿಲ್ಲಾ ಉಸ್ತುವಾರಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ. ಅವರು ಕೂಡ ಆಯಾ ಜಿಲ್ಲೆಯಲ್ಲೇ ಲಸಿಕೆ ಅಭಿಯಾನದಲ್ಲಿ ಭಾಗವಹಿಸುತ್ತಾರೆ ಎಂದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ರಾಜ್ಯ ಪೊಲೀಸ ಮಹಾ ನಿರ್ದೇಶಕ ಪ್ರವೀಣ ಸೂದ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ತಿಮ್ಮಪ್ಪನ ದರ್ಶನ ಪಡೆದ ಸಿಎಂ:
ಹೊಸ ವರ್ಷದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಿಎಂ ಬೊಮ್ಮಾಯಿ ವೈಯಾಲಿಕಾವಲ್ ಬಡಾವಣೆಯಲ್ಲಿರುವ ತಿರುಪತಿ ತಿಮ್ಮಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಮುನಿರತ್ನ, ಟಿಟಿಡಿ ನಿರ್ದೇಶಕ ಶಶಿಧರ ಉಪಸ್ಥಿತರಿದ್ದರು. ಈ ವೇಳೆ, ನಾಡಿನ ಜನರ ಸುಖ ಸಮೃದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸಿಕೊಂಡರು.
ಮಾಜಿ ಸಿಎಂ ಬಿಎಸ್ವೈಗೆ ಶುಭಾಶಯ:
ಬಳಿಕ ಸಿಎಂ ಬೊಮ್ಮಾಯಿ ಕಾವೇರಿ ನಿವಾಸಕ್ಕೆ ತೆರಳಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದರು. ಹೂಗುಚ್ಛ ನೀಡಿ ಬಿಎಸ್ವೈಗೆ ಹೊಸ ವರ್ಷದ ಶುಭಾಶಯ ತಿಳಿಸಿದರು. ಕೆಲ ಸಮಯ ಬಿಎಸ್ವೈ ಜೊತೆ ಸಿಎಂ ಕುಶಲೋಪರಿ ವಿಚಾರಿಸಿದರು. ಈ ವೇಳೆ ಸಚಿವ ಗೋವಿಂದ ಕಾರಜೋಳ ಸಹ ಇದ್ದರು.
ಇದನ್ನೂ ಓದಿ: ಬೆಳಗಾವಿ ಕಮಿಷನರ್ ತ್ಯಾಗರಾಜನ್ ತಲೆದಂಡ.. ನೂತನ ಆಯುಕ್ತರಾಗಿ ಡಾ.ಬೋರಲಿಂಗಯ್ಯ