ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಪ್ರಮುಖವಾಗಿ ಕಾವೇರಿ ಬಿಕ್ಕಟ್ಟಿನ ಬಗ್ಗೆ ಚರ್ಚೆಯಾಗಲಿದೆ. ವಿಧಾನಸೌಧದಲ್ಲಿ ಸಂಜೆ 6 ಗಂಟೆಗೆ ಸಭೆ ನಡೆಯಲಿದೆ. ಸುಪ್ರೀಂ ಕೋರ್ಟ್ ತಮಿಳುನಾಡಿಗೆ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ನಿರ್ದೇಶನ ನೀಡಿದೆ. ಇತ್ತ ಕೆಆರ್ಎಸ್ ಜಲಾಶಯ ಬತ್ತಿ ಹೋಗಿದ್ದು, ಕುಡಿಯುವ ನೀರಿಗೂ ಸಂಚಕಾರ ಉಂಟಾಗುವ ಆತಂಕವಿದೆ. ಕೋರ್ಟ್ ಆದೇಶದಿಂದ ರೊಚ್ಚಿಗೆದ್ದಿರುವ ರೈತರು, ಕನ್ನಡಪರ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ಕೋರ್ಟ್ ಆದೇಶದಿಂದ ತೀವ್ರ ಇಕ್ಕಟ್ಟಿಗೆ ಸಿಲುಕಿರುವ ರಾಜ್ಯ ಸರ್ಕಾರ ಮುಂದಿನ ನಡೆ ಏನು ಎಂಬ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಿದೆ. ಮುಂದಿನ ಕಾನೂನು ಹೋರಾಟ, ಆಯ್ಕೆಗಳು, ಸುಪ್ರೀಂ ಆದೇಶ ಪಾಲಿಸುವ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಸರ್ಕಾರ ಒಂದು ತೀರ್ಮಾನಕ್ಕೆ ಬರಲಿದೆ. ರೈತರು ಬೀದಿಗಿಳಿದು ಹೋರಾಟ ತೀವ್ರಗೊಳಿಸಿದ್ದು, ಯಾವ ರೀತಿ ರೈತರನ್ನು ಸಮಾಧಾನಪಡಿಸುವುದು ಎಂಬ ಬಗ್ಗೆಯೂ ಚರ್ಚಿಸುವ ಸಾಧ್ಯತೆ ಇದೆ.
ಉಳಿದಂತೆ, ಬರದ ಬಗ್ಗೆಯೂ ಪ್ರಸ್ತಾಪವಾಗಲಿದೆ. ಕುಡಿಯುವ ನೀರು ಸರಬರಾಜು, ಪರಿಹಾರ ಕಾರ್ಯ, ಕೇಂದ್ರ ಸರ್ಕಾರಕ್ಕೆ ಪರಿಹಾರ ಕೋರಿ ಮೆಮೊರಾಂಡಮ್ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಬರ ನಿರ್ವಹಣೆಯ ಬಗ್ಗೆಯೂ ಮಾತುಕತೆ ನಡೆಯಲಿದೆ. ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸುವ ಬಗೆಗೂ ಸಂಪುಟ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸುವ ಸಂಭವ ಇದೆ.
ಪ್ರಾಧಿಕಾರದ ಆದೇಶದಲ್ಲಿ ಮಧ್ಯ ಪ್ರವೇಶಿಸಲ್ಲ ಎಂದ ಕೋರ್ಟ್: ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಇತ್ತೀಚೆಗೆ ಸೂಚಿಸಿತ್ತು. ಈ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿ ಹಿಡಿದಿತ್ತು. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ, ಆದೇಶವನ್ನು ಪುನರ್ ಪರಿಶೀಲಿಸಬೇಕೆಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಗುರುವಾರ ವಿಚಾರಣೆ ನಡೆಸಿದ ಕೋರ್ಟ್, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶಿಸಲ್ಲ ಎಂದು ತಿಳಿಸಿದೆ. ಇದೇ ವೇಳೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ಹಾಗೂ ಹೆಚ್ಚುವರಿ ನೀರು ಬಿಡುಗಡೆ ಕೋರಿ ಸಲ್ಲಿಸಿದ್ದ ತಮಿಳುನಾಡಿನ ಅರ್ಜಿಯನ್ನೂ ತಿರಸ್ಕರಿಸಿತು.
ಕೇಂದ್ರ ಜಲ ಶಕ್ತಿ ಸಚಿವರಿಗೆ ಮನವಿ: ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದ ನಿಯೋಗವು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಈ ವೇಳೆ ಕಾವೇರಿ ನೀರು ಹಂಚಿಕೆ ಬಿಕ್ಕಟ್ಟು ಪರಿಹರಿಸಲು ಅವರು ಕೇಂದ್ರ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಸಿಎಂ ನವದೆಹಲಿಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಕಾವೇರಿ ವಿವಾದ: ಕೇಂದ್ರ ಜಲಶಕ್ತಿ ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ- ಸಿಎಂ ಸಿದ್ದರಾಮಯ್ಯ