ಬೆಂಗಳೂರು: 6ನೇ ವೇತನ ಆಯೋಗ ಜಾರಿ ಸೇರಿದಂತೆ 9 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ. ಇದರಿಂದ ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಕಂಡುಬರಲಿದೆ. ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಪರ್ಯಾಯ ವ್ಯವಸ್ಥೆಯನ್ನು ಜಿಲ್ಲಾ ಹಾಗೂ ತಾಲೂಕು ಆಡಳಿತ ಕಂಡುಕೊಂಡಿದೆ.
ಎಸ್ಮಾ ಎಚ್ಚರಿಕೆ
ಸಾರಿಗೆ ಇಲಾಖೆಯ ಅಧಿಕಾರಿಗಳು ಈಗಾಗಲೇ ಖಾಸಗಿ ಬಸ್ಗಳ ಮಾಲೀಕರ ಜೊತೆ ಮಾತುಕತೆ ನಡೆಸಿದ್ದಾರೆ. ಒಂದು ವೇಳೆ ಸಾರಿಗೆ ನೌಕರರು ಕರ್ತವ್ಯಕ್ಕೆ ಬಂದಿಲ್ಲ ಅಂದ್ರೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ನೌಕರರು ಇಂದು ಹಾಜರಾಗದಿದ್ದರೆ ದಿನದ ಸಂಬಳ ಕಡಿತ ಆಗುತ್ತದೆ. ಮತ್ತೆ ಮತ್ತೆ ಸರ್ಕಾರ ನಿಯಮ ಉಲ್ಲಂಘನೆ ಮಾಡಿದರೆ ಎಸ್ಮಾ ಜಾರಿಯಾಗಲಿದೆ. ನಿನ್ನೆ ಎರಡನೇ ಪಾಳೆಯ ನೌಕರರು ಕೆಲಸಕ್ಕೆ ಹಾಜರಾಗಿಲ್ಲ ಎಂಬದು ಜಿಲ್ಲಾಡಳಿತಗಳ ಗಮನಕ್ಕೆ ಬಂದಿದೆ. ಹೀಗಾಗಿ, ತಕ್ಷಣವೇ ಪರ್ಯಾಯ ವ್ಯವಸ್ಥೆ ಕಂಡುಕೊಂಡಿದ್ದಾರೆ.
ಸಿಎಂ ಹೇಳಿದ್ದೇನು?
ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಖಾಸಗಿ ಬಸ್‌ಗಳ ಕಾರ್ಯಾಚರಣೆ ನಡೆಯಲಿದೆ ಎಂದು ಮುಖ್ಯಮಂತ್ರಿಗಳು ಚುನಾವಣೆ ಪ್ರಚಾರದ ವೇಳೆ ಹೇಳಿದ್ದಾರೆ.
ಶಿವಮೊಗ್ಗ, ದಕ್ಷಿಣಕನ್ನಡ, ಚಿಕ್ಕಮಗಳೂರು, ಉಡುಪಿ, ದಾವಣಗೆರೆ, ತುಮಕೂರು, ಚಿತ್ರದುರ್ಗ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಮಡಿಕೇರಿ, ರಾಮನಗರ, ಕೋಲಾರ, ಬಳ್ಳಾರಿ ಜಿಲ್ಲೆಗಳಲ್ಲಿ ಹೆಚ್ಚುವರಿ ಖಾಸಗಿ ಬಸ್ ಓಡಾಡಲಿವೆ. ಖಾಸಗಿ ಬಸ್ ದರ ಹೆಚ್ಚಳ ಇರುವುದಲ್ಲಿ. ಈಗಿರುವ ದರದಲ್ಲೇ ಸೇವೆ ನೀಡಲು ಖಾಸಗಿ ಬಸ್ಗಳ ಒಕ್ಕೂಟ ಒಪ್ಪಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಕೆಲ ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆ ಹೀಗಿದೆ:
ರಾಮನಗರ
ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಖಾಸಗಿ ಬಸ್ ಹಾಗೂ ಮ್ಯಾಕ್ಸಿ ಕ್ಯಾಬ್‌ಗಳಿಗೆ ಎಲ್ಲಾ ರೂಟ್‌ಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ತಿಳಿಸಿದರು.
![ರಾಮನಗರ ಡಿಸಿ](https://etvbharatimages.akamaized.net/etvbharat/prod-images/r-kn-rmn-03-06042021-dc-meeting-protest-ka10051_06042021205658_0604f_1617722818_396.jpg)
ಮುಷ್ಕರ ನಿರತ ನೌಕರರು ಸಾರ್ವಜನಿಕರು, ಸಾರ್ವಜನಿಕ ಆಸ್ತಿ, ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡುವ ಖಾಸಗಿ ಬಸ್ ಹಾಗೂ ಕ್ಯಾಬ್‌ಗಳಿಗೆ ಯಾವುದೇ ತೊಂದರೆ ಮಾಡಬಾರದು. ತೊಂದರೆ ಮಾಡುವ ಪ್ರಕರಣ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಹೇಳಿದರು.
ಖಾಸಗಿ ಬಸ್ ಹಾಗೂ ಕ್ಯಾಬ್‌ಗಳು ಸಾರ್ವಜನಿಕರಿಗೆ ತುಂಬ ದುಬಾರಿ ದರ ವಿಧಿಸಬಾರದು. ನ್ಯಾಯಸಮ್ಮತವಾದ ದರ ವಿಧಿಸಲಿ ಇದನ್ನು ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬಳ್ಳಾರಿ
ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ಪರ್ಯಾಯ ಕ್ರಮ ಕೈಗೊಳ್ಳಲು ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಪ್ರಾದೇಶಿಕ ಸಾರಿಗೆ, ಎನ್ಇಕೆಎಸ್ಆರ್ಟಿಸಿ ಅಧಿಕಾರಿಗಳು ಮತ್ತು ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್‍ಗಳ ಮಾಲೀಕರೊಂದಿಗೆ ಸಭೆ ನಡೆಸಿದರು.
![ಖಾಸಗಿ ವಾಹನ ಮಾಲೀಕರ ಜತೆ ಅಧಿಕಾರಿಗಳ ಸಭೆ](https://etvbharatimages.akamaized.net/etvbharat/prod-images/kn-01-bly-060421-dc-sp-meeting-news-ka10007_06042021204033_0604f_1617721833_1094.jpg)
ಜಿಲ್ಲೆಯ ಸಾರ್ವಜನಿಕರಿಗೆ ನಾನಾ ಕಡೆ ಸಂಚರಿಸುವಲ್ಲಿ ಯಾವುದೇ ರೀತಿಯಲ್ಲಿ ಸಾರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಸೂಚಿಸಿದರು.
ಬಸ್‍ಗಳ ಓಡಾಟ ಕಡಿಮೆಯಾದರೆ, ಖಾಸಗಿ ಬಸ್‍ಗಳು, ಮ್ಯಾಕ್ಸಿಕ್ಯಾಬ್‍ಗಳ ಮಾಲೀಕರೊಂದಿಗೆ ಚರ್ಚಿಸಿದಂತೆ ಅವುಗಳನ್ನು ಪಡೆದುಕೊಂಡು ನಿಗದಿತ ಮಾರ್ಗದ ಕಡೆಗಳಲ್ಲಿ ಸಂಚರಿಸಬೇಕು. ಎಲ್ಲಾ ಖಾಸಗಿ ವಾಹನಗಳು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದಲೇ ಕಾರ್ಯಾರಂಭ ಮಾಡಬೇಕು ಎಂದರು
ಖಾಸಗಿಯವರು ಸಾರ್ವಜನಿಕರಿಂದ ನಿಗದಿಪಡಿಸಿದ ಟಿಕೆಟ್ ದರಕ್ಕಿಂತ ಹೆಚ್ಚಿನ ಹಣ ಪಡೆಯುವಂತಿಲ್ಲ. ಅಂತಹ ನಡೆ ಕಂಡುಬಂದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಖಾಸಗಿ ವಾಹನಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಕೊಪ್ಪಳದಲ್ಲಿ ನಿಷೇಧಾಜ್ಞೆ
ಜಿಲ್ಲೆಯಲ್ಲಿನ ಬಸ್ ಡಿಪೋ ಹಾಗೂ ನಿಲ್ದಾಣಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಆದೇಶ ಹೊರಡಿಸಿದ್ದಾರೆ.
![ಜಿಲ್ಲಾಧಿಕಾರಿ](https://etvbharatimages.akamaized.net/etvbharat/prod-images/kn-kpl-07-06-nishedhagne-jaari-photo-ka10041_06042021212332_0604f_1617724412_721.jpg)
ಏಪ್ರಿಲ್ 7ರಂದು ಬೆಳಗ್ಗೆ 5 ಗಂಟೆಯಿಂದ ಏಪ್ರಿಲ್ 10ರ ಬೆಳಗ್ಗೆ 5 ಗಂಟೆಯವರೆಗೆ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಸ್ ನಿಲ್ದಾಣ ಹಾಗೂ ಡಿಪೋ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಗುಂಪು ಸೇರುವಂತಿಲ್ಲ. ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ತೊಂದರೆ ಆಗಬಾರದು. ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣದೊಳಗೆ ಬರುವ ಖಾಸಗಿ ವಾಹನಗಳಿಗೆ ಅಡ್ಡಿಪಡಿಸಬಾರದು. ಪ್ರತಿಕೃತಿ ಸುಡುವುದು, ಪ್ರತಿಮೆಗಳ ಪದರ್ಶನ, ನಿಲ್ದಾಣಗಳಲ್ಲಿ ಘೋಷಣೆ ಕೂಗುವುದು, ಧರಣಿ ನಡೆಸುವುದು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
![ಸುತ್ತೋಲೆ](https://etvbharatimages.akamaized.net/etvbharat/prod-images/kn-kpl-07-06-nishedhagne-jaari-photo-ka10041_06042021212332_0604f_1617724412_318.jpg)
ಗದಗನಲ್ಲಿ ರಸ್ತೆಗಿಳಿದ ಡಕೋಟಾ ಎಕ್ಸ್ಪ್ರೆಸ್ ಬಸ್ಗಳು:
ಗದಗನಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಕೆಲವು ಮಾರ್ಗಗಳಲ್ಲಿ ಬಸ್ ಸಂಚಾರ ಸ್ಥಗಿತವಾಗಿತ್ತು. ಇದರಿಂದ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಸಾರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು, ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಜನರ ಒತ್ತಡಕ್ಕೆ ಮಣಿದು ಹಳೆಯ ಎಕ್ಸ್ಪ್ರೆಸ್ ಬಸ್ಗಳನ್ನು ರಸ್ತೆಗಿಳಿಸಿದರು. 'ತಳ್ಳು ತಳ್ಳು ಐಸಾ... ಇನ್ನು ತಳ್ಳು ಐಸಾ' ಎನ್ನುತ್ತಾ ಸಾರಿಗೆ ಸಿಬ್ಬಂದಿ, ಸಾರ್ವಜನಿಕರು ಬಸ್ ತಳ್ಳಿ ವಾಹನ ಸ್ಟಾರ್ಟ್ ಮಾಡಿದ್ದು ಸಾಮಾನ್ಯವಾಗಿತ್ತು.
ಒಂದಡೆ ಬಸ್ಗಾಗಿ ಕಾದು ಕುಳಿತು ಸುಸ್ತಾದರೆ ಮತ್ತೊಂದೆಡೆ ಬಂದ ಬಸ್ ತಳ್ಳಿ ಸುಸ್ತಾಗಬೇಕಾಯಿತು. ಚಾಲಕ ನಿರ್ವಾಹಕರು ಸೆಕೆಂಡ್ ಸ್ವಿಫ್ಟ್ ಬಾರದಕ್ಕೆ ಮೊದಲು ಸ್ವಿಫ್ಟ್ ಬಂದಂತಹ ಸಿಬ್ಬಂದಿ ಕೈಗೆ ಇಂತಹ ಡಕೋಟಾ ಬಸ್ ಕೊಟ್ಟು ರಸ್ತೆಗಿಳಿಸಿದ್ದಾರೆ. ದುರಸ್ತಿ ಬಸ್ ರಸ್ತೆಗಿಳಿಸಿರುವುದು ಎಷ್ಟು ಸರಿ? ಡಕೋಟಾ ಬಸ್ ಪ್ರಯಾಣ ಎಷ್ಟರ ಮಟ್ಟಿಗೆ ಸುರಕ್ಷಿತ ಎಂದು ಸಿಬ್ಬಂದಿಯನ್ನು ಪ್ರಯಾಣಿಕರು ಪ್ರಶ್ನಿಸಿದರು.
ಬೆಳಗಾವಿಯಲ್ಲಿ ತಾತ್ಕಾಲಿಕ ಪರವಾನಿಗೆ:
ಸಾರ್ವಜನಿಕರಿಗೆ ಸಂಚಾರದ ಸಮಸ್ಯೆ ಆಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರಿಗೆ ಸೌಲಭ್ಯ ಒದಗಿಸಲು ಮುಂದಾಗುವ ಎಲ್ಲ ಖಾಸಗಿ ಬಸ್ ಪ್ರವರ್ತಕರಿಗೆ ಅಗತ್ಯಬಿದ್ದರೆ ತಾತ್ಕಾಲಿಕ ಪರವಾನಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಸಾರಿಗೆ ಸಂಸ್ಥೆಯ ಸಂಚಾರ ಮಾರ್ಗಗಳಲ್ಲಿ ಬಸ್ ಸೌಲಭ್ಯ ಕಲ್ಪಿಸಲು ಬಯಸುವವರಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗುವುದು. ಮುಷ್ಕರದ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಪೊಲೀಸ್ ಭದ್ರತೆಗೆ ಕ್ರಮ: ನಿಗದಿತ ಸಾರಿಗೆ ಮಾರ್ಗಗಳಲ್ಲಿ ಸಂಚರಿಸಲು ಮುಂದಾಗುವ ಸಾರಿಗೆ ಸಂಸ್ಥೆಯ ಬಸ್ ಮತ್ತು ಖಾಸಗಿ ಬಸ್‌ಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗುವುದು. ಎಲ್ಲಾ ರೀತಿಯ ಪರ್ಯಾಯ ವ್ಯವಸ್ಥೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ. ವಿನಾಕಾರಣ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಬಾರದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಿಸಬೇಕು ಎಂದು ಮನವಿ ಮಾಡಿಕೊಂಡರು.
ಚಿಕ್ಕೋಡಿ ಸಿಬ್ಬಂದಿಗೆ ವಾಸ್ತವ ಮನವರಿಕೆ:
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ 6ನೇ ವೇತನ ಬಗ್ಗೆ ಚರ್ಚೆ ಮಾಡಲು ಆಗುವುದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಈಗಾಗಲೇ ಈ ವಿಚಾರವನ್ನು ಚಿಕ್ಕೋಡಿ ಉಪವಿಭಾಗದ ಸಾರಿಗೆ ನೌಕರರ ಗಮನಕ್ಕೆ ತರಲಾಗಿದೆ. ಇಂದು ಚಿಕ್ಕೋಡಿ ಉಪವಿಭಾಗದ ಬಸ್‌ಗಳು ಸಂಚರಿಸಲಿವೆ ಎಂದು ಚಿಕ್ಕೋಡಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಂ.ಶಶಿಧರ ಈಟಿವಿ ಭಾರತಗೆ ಮಾಹಿತಿ ನೀಡಿದರು.
ಈಗಾಗಲೇ ಸಿಬ್ಬಂದಿ ಜೊತೆ ಚರ್ಚಿಸಲಾಗಿದೆ. ಚಿಕ್ಕೋಡಿ ಉಪವಿಭಾಗದ ಅಥಣಿ, ರಾಯಬಾಗ, ಸಂಕೇಶ್ವರ, ಗೋಕಾಕ್, ರಾಯಬಾಗ ಸೇರಿದಂತೆ ವಿವಿಧ ಡಿಪೋಗಳಿಗೆ ತೆರಳಿ ಸಿಬ್ಬಂದಿ ಮಾತನಾಡಿದ್ದೇವೆ. ಇಂದು ಬಹುತೇಕ ಬಸ್‌ಗಳು ಚಿಕ್ಕೋಡಿ ಉಪವಿಭಾಗದಲ್ಲಿ ಸಂಚರಿಸುತ್ತವೆ ಎಂದರು.
ಒಂದು ವೇಳೆ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾದರೆ ಖಾಸಗಿ ವಾಹನಗಳ ಮೂಲಕ ಜನರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಖಾಸಗಿ ನಿರ್ವಾಹಕರನ್ನು ನೇಮಿಸುವುದನ್ನು ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಮುಷ್ಕರ ತೊರೆದು ಕರ್ತವ್ಯಕ್ಕೆ ಹಾಜರಾದವರಿಗೆ ಪೊಲೀಸ್ ರಕ್ಷಣೆ:
ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯದಲ್ಲಿ ವ್ಯತ್ಯಯ ಆಗುವುದನ್ನು ಮನಗಂಡು ಎನ್ಡಬ್ಲ್ಯಕೆಆರ್ಟಿಸಿ ಸಂಸ್ಥೆಯ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿಗಳಿಗೆ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಮುಷ್ಕರದಲ್ಲಿ ಭಾಗವಹಿಸದೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಲಾಗುವುದು. ಹುಬ್ಬಳ್ಳಿ ಮತ್ತು ಧಾರವಾಡ ಬಸ್ ನಿಲ್ದಾಣಗಳಿಂದ ನಿತ್ಯ 896 ಸರ್ಕಾರಿ ಬಸ್‍ಗಳು ಸಂಚರಿಸುತ್ತವೆ. ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕರಿಗೆ ಖಾಸಗಿ ಪ್ರಯಾಣಿಕ ವಾಹನಗಳ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಮ್ಯಾಕ್ಸಿಕ್ಯಾಬ್, ಖಾಸಗಿ ಪ್ರಯಾಣಿಕ ವಾಹನಗಳು, ಶಾಲಾ ವಾಹನಗಳು, ಒಪ್ಪಂದ ವಾಹನಗಳು, ಅಖಿಲ ಭಾರತ ಪ್ರವಾಸಿ ವಾಹನಗಳು ಮತ್ತು ಖಾಸಗಿ ಮಜಲು ವಾಹನಗಳು ಸೇರಿ 1,311 ವಾಹನಗಳು ಲಭ್ಯ ಇವೆ. ಈ ಪೈಕಿ 408 ಖಾಸಗಿ ವಾಹನಗಳ ಪ್ರವರ್ತಕರು ವಾಹನಗಳನ್ನು ಒದಗಿಸಲು ಸಿದ್ಧರಿದ್ದಾರೆ. ಈ ವಾಹನಗಳಿಗೆ ತಾತ್ಕಾಲಿಕ ರಹದಾರಿ ನೀಡಲು ಜಿಲ್ಲಾಡಳಿತ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಖಾಸಗಿ ಪ್ರಯಾಣಿಕ ವಾಹನಗಳು ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಿಂದ ಹಾಗೂ ಧಾರವಾಡ ಹೊಸ ಬಸ್ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಯಿಂದ ಲಭ್ಯವಾಗಲಿವೆ ಎಂದರು.