ಬೆಂಗಳೂರು : ಸಿಎಂ ಬೊಮ್ಮಾಯಿ ಮಾರ್ಚ್ 4ಕ್ಕೆ ತಮ್ಮ ಚೊಚ್ಚಲ ಬಜೆಟ್ ಮಂಡಿಸಲು ನಿರ್ಧರಿಸಿದ್ದಾರೆ. ಬಜೆಟ್ ಅಧಿವೇಶನ ಮಾರ್ಚ್ 4ಕ್ಕೆ ಪ್ರಾರಂಭವಾಗಲಿದೆ. ಅಂದೇ ಸಿಎಂ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ಮಾರ್ಚ್ 4ಕ್ಕೆ ಬಜೆಟ್ ಮಂಡಿಸಲು ತೀರ್ಮಾನಿಸಿದ್ದೇನೆ. ಇದಕ್ಕೆ ಬೇಕಾದ ಪೂರ್ವ ತಯಾರಿ ನಡೆಸಲಾಗುತ್ತಿದೆ ಎಂದರು. ಕಾಂಗ್ರೆಸ್ ಅಹೋರಾತ್ರಿ ಧರಣಿ ಹಿನ್ನೆಲೆ ಜಂಟಿ ಅಧಿವೇಶನವನ್ನು ಮೊಟಕುಗೊಳಿಸಿ ಮಾರ್ಚ್ 4ಕ್ಕೆ ಮುಂದೂಡಲಾಗಿದೆ. ಆ ಮೂಲಕ ಬಜೆಟ್ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 4ರಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ.
ಕಳೆದ ಬಾರಿ ಸಂಪುಟ ಸಭೆಯಲ್ಲಿ ಬಜೆಟ್ ಅಧಿವೇಶನದ ಬಗ್ಗೆ ಚರ್ಚೆ ಆಗಿತ್ತು. ಮಾರ್ಚ್ 4 ಅಥವಾ ಮಾರ್ಚ್ 7ರಂದು ಬಜೆಟ್ ಮಂಡಿಸುವ ಬಗ್ಗೆ ಚರ್ಚೆ ನಡೆಸಿತ್ತು. ಆದರೆ, ದಿನಾಂಕ ಮಾತ್ರ ನಿಗದಿ ಮಾಡಿರಲಿಲ್ಲ. ಬಹುತೇಕ ಮಾರ್ಚ್ 4ರಂದು ಬಜೆಟ್ ಅಧಿವೇಶನ ಪ್ರಾರಂಭವಾಗುವ ಬಗ್ಗೆ ಚರ್ಚೆ ನಡೆದಿತ್ತು.
ಆದರೆ, ಇದೀಗ ಕಲಾಪವನ್ನು ಮಾರ್ಚ್ 4ಕ್ಕೆ ಮುಂದೂಡುವ ಮೂಲಕ ಬಜೆಟ್ ಅಧಿವೇಶನದ ದಿನಾಂಕ ಫಿಕ್ಸ್ ಆಗಿದೆ. ಒಟ್ಟು 15 ದಿನಗಳ ಕಾಲ ಬಜೆಟ್ ಅಧಿವೇಶನ ನಡೆಯಲಿದೆ ಎನ್ನಲಾಗಿದೆ.
ಇದನ್ನೂ ಓದಿ : ಶಿವಮೊಗ್ಗ ಹರ್ಷ ಕೊಲೆ ಪ್ರಕರಣ: ಮತ್ತೆ 12 ಜನರ ವಿಚಾರಣೆ ನಡೆಯುತ್ತಿದೆ- ಆರಗ ಜ್ಞಾನೇಂದ್ರ
ಆರ್ಥಿಕ ಇಲಾಖೆ ಮಾರ್ಚ್ 4ರಂದು ಬಜೆಟ್ ಮಂಡನೆಗೆ ಸಲಹೆ ನೀಡಿತ್ತು. ಇತ್ತ ಸಿಎಂ ಬೊಮ್ಮಾಯಿ ಮಾರ್ಚ್ 7ರಂದು ಬಜೆಟ್ ಮಂಡಿಸುವ ಇರಾದೆ ಹೊಂದಿದ್ದರು. ಆದರೆ, ಇದೀಗ ಮಾರ್ಚ್ 4ರಂದೇ ಬಜೆಟ್ ಮಂಡಿಸಲು ನಿರ್ಧರಿಸಲಾಗಿದೆ.
ಈಗಾಗಲೇ ಸಿಎಂ ಬೊಮ್ಮಾಯಿ ಬಹುತೇಕ ಎಲ್ಲಾ ಇಲಾಖೆಗಳ ಜೊತೆಗೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದ್ದಾರೆ. ಎಲ್ಲಾ ಇಲಾಖೆಗಳು ತಮ್ಮ ಬಜೆಟ್ ಬೇಡಿಕೆಗಳನ್ನು ಸಿಎಂ ಮುಂದಿಟ್ಟಿವೆ. ಇದೀಗ ಸಿಎಂ ತಮ್ಮ ಚೊಚ್ಚಲ ಬಜೆಟ್ಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.
2023ರ ವಿಧಾನಸಭೆ ಚುನಾವಣೆ ಹಿನ್ನೆಲೆ ಸಿಎಂ ಬೊಮ್ಮಾಯಿಗೆ ಈ ಬಜೆಟ್ ನಿರ್ಣಾಯಕವಾಗಿದೆ. ಜನಪ್ರಿಯ ಬಜೆಟ್ ಮಂಡನೆ ಅನಿವಾರ್ಯವಾಗಿದ್ದು, ಈ ಸಂಬಂಧ ಸಿಎಂ ಚರ್ಚೆ ನಡೆಸುತ್ತಿದ್ದಾರೆ.