ಪ್ರವಾಹ, ಕೊರೊನಾ ಕಾರಣ ಇಡೀ ರಾಜ್ಯ ತಲ್ಲಣಗೊಂಡಿತ್ತು. ಲಾಕ್ಡೌನ್ನಿಂದ ಆರ್ಥಿಕ ಚಟುವಟಿಕೆ ನಡೆಯದೇ ಆದಾಯ ಸಂಗ್ರಹಣೆಗೂ ದೊಡ್ಡ ಪೆಟ್ಟು ಬಿದ್ದಿದೆ. 2020-21 ನೇ ಸಾಲಿನ ಆರ್ಥಿಕ ಸಾಧನೆ ಮಾರ್ಚ್ ಕೊನೆಯವರೆಗೆ ಅಂದಾಜು ಶೇ. 94 ರಷ್ಟಾಗುತ್ತೆ. ನಮ್ಮ ನಿರೀಕ್ಷೆ ಶೇ 80 ಇದೆ. ಆರ್ಥಿ ಇಲಾಖೆ ಪ್ರಕಾರ ಶೇ 94 ಎಂದಿದೆ. ವಿತ್ತೀಯ ಶಿಸ್ತಿನ ಜತೆ ಆರ್ಥಿಕ ಸ್ಥಿತಿ ಕಳೆದ ತ್ರೈ ಮಾಸಿಕದಲ್ಲಿ ಸುಧಾರಿಸಿದೆ. ಸಂಕಷ್ಟದ ಸವಾಲುಗಳಿಗೆ ಪರಿಹಾರವಾಗಬಲ್ಲ ಸಮತೋಲಿತ ಬಜೆಟ್ ಇದಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಪ್ರತಿಕೂಲ ಸ್ಥಿತಿಯಲ್ಲೂ ಸರ್ವ ವ್ಯಾಪಿ, ಸರ್ವ ಸ್ವರೂಪಿ ಬಜೆಟ್ ನಿರ್ಮಿಸಲು ಪ್ರಯತ್ನಿಸಿದೆ. ಈ ವರ್ಷದ ಬಜೆಟ್ ಗಾತ್ರ ಶೇ.3 ಕ್ಕಿಂತ ಹೆಚ್ಚಳವಾಗಿದೆ. ಇದೊಂದು ಜನಸ್ನೇಹಿ ಬಜೆಟ್. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಪೈಸೆಯೂ ಹೆಚ್ಚುವರಿ ತೆರಿಗೆ ಹಾಕದೆ ಬಜೆಟ್ ಮಂಡಿಸಿದ್ದೇವೆ. ಎಲ್ಲ ವಲಯ, ಜಿಲ್ಲೆಗಳಿಗೆ ವಿಶೇಷ ಕಾರ್ಯಕ್ರಮ ನೀಡಿ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದ್ದೇನೆ. ಯಾರಿಗೂ ಹೊರೆಯಾಗದ ಜನಸ್ನೇಹಿ ಬಜೆಟ್ ಇದಾಗಿದೆ ಎಂದು ತಿಳಿಸಿದರು.
ಮಹಿಳಾ ದಿನದಂದು ಮಂಡಿಸಲಾಗದ ಬಜೆಟ್‌ನಲ್ಲಿ ಅವರ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ ಕಲ್ಪಿಸಿದ್ದೇವೆ. ದೇಶ ಕಟ್ಟುವ ಕಾಯಕಕ್ಕೆ ಈ ಮೂಲಕ ಸಾಥ್ ನೀಡಿದ್ದೇವೆ. ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ರಿಯಾಯಿತಿ ಬಸ್ ಪಾಸ್, ಮಹಿಳಾ ಉದ್ಯಮಿಗಳಿಗೆ ಶೇ. 4ರ ಬಡ್ಡಿದರದಲ್ಲಿ ಸಾಲ ಮತ್ತು ಕಷ್ಟದ ಸಮಯದಲ್ಲೂ ಸಂಬಳ, ಪಿಂಚಣಿ, ಸಬ್ಸಿಡಿ ಸಕಾಲದಲ್ಲಿ ನಿರ್ವಹಿಸಲಾಗಿದೆ ಎಂದು ಹೇಳಿದರು.