ಬೆಂಗಳೂರು: ಜಗತ್ತನ್ನು ಕಾಡಿದ ಮಹಾಮಾರಿ ಕೊರೊನಾ ಸಾಂಕ್ರಾಮಿಕ ತಂದೊಡ್ದಿದ ಕಠಿಣ ಸವಾಲು ಹಾಗೂ ಪ್ರಾಕೃತಿಕ ವಿಕೋಪದಂತಹ ಸರಣಿ ಸಮಸ್ಯೆಗಳು ಕರ್ನಾಟಕದ ಆರ್ಥಿಕತೆಯ ತಳಪಾಯ ಅಲುಗಾಡಿಸಿದವು. ಇಂತಹ ಜಟಿಲತೆಯ ನಡುವೆಯೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ 8ನೇ ರಾಜ್ಯ ಬಜೆಟ್ ಮಂಡಿಸಿದರು.
ಎದುರಾದ ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಸಾಂಕ್ರಾಮಿಕ ರೋಗ ಎದುರಿಸಲು ರಾಜ್ಯಾದ್ಯಂತ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆ. ಕೊರೊನಾ ದುಃಸ್ವಪ್ನ, ಜೀವನವಿಡೀ ನೆನಪಿಸಿಕೊಳ್ಳುವಂತದ್ದು, ಈ ಸಮರದಲ್ಲಿ ಮಾನವಕುಲ ಜಯಿಸಿದೆ.
ಭಾರತದ ಪಾತ್ರಕ್ಕೆ ಜಾಗತಿಕ ಮನ್ನಣೆ, ಕರ್ನಾಟಕದ ಪಾತ್ರ ಮಹತ್ತರದಾಗಿದೆ. ಕೊರೊನಾ ನಿಯಂತ್ರಣ, ಲಸಿಕೆ ಹಂಚಿಕೆಯಲ್ಲಿ ರಾಜ್ಯದ ಕಾರ್ಯಕ್ರಮ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಯಡಿಯೂರಪ್ಪ ಬಜೆಟ್ ಭಾಷಣದ ವೇಳೆ ಹೇಳಿದರು.
- 2021-22ನೇ ಸಾಲಿನ ಬಜೆಟ್ ಗಾತ್ರ ಎರಡೂವರೆ ಲಕ್ಷ ಕೋಟಿ ರೂ. ಆಗಿದೆ
- 35 ಲಕ್ಷದಿಂದ 45 ಲಕ್ಷ ರೂ.ಗಳವರೆಗಿನ ಫ್ಲ್ಯಾಟ್‌ಗಳ ಮುದ್ರಾಂಕ ಶುಲ್ಕ ಇಳಿಕೆ
- ಮುದ್ರಾಂಕ ಶುಲ್ಕ ಶೇ.5ರಿಂದ ಶೇ.3ಕ್ಕೆ ಇಳಿಸಿದ ಸರ್ಕಾರ
- ಕಳೆದ ಬಾರಿ ₹35 ಲಕ್ಷ ಮೌಲ್ಯದವರೆ ಶುಲ್ಕ ವಿಧಿಸಲಾಗುತ್ತಿತ್ತು, ಈಗ ಆ ಪ್ರಮಾಣ ಈಗ 45 ಲಕ್ಷ ರೂ ಗೆ ಏರಿಕೆ ಆಗಿದ್ದು, ಶುಲ್ಕ 5 ರಿಂದ 3 ಕ್ಕೆ ಇಳಿಕೆ ಮಾಡಲಾಗಿದೆ.
- ಪೆಟ್ರೋಲ್, ಡೀಸೆಲ್ ದರ ಯಥಾಸ್ಥಿತಿಯಲ್ಲಿದೆ
- ತೆರಿಗೆ ಇಳಿಸುವ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆ
ಕೋವಿಡ್ ಸಂಕಷ್ಟದ ಹಿನ್ನೆಲೆ ರಾಜ್ಯಗಳಿಗೆ ನೀಡುವ ತೆರಿಗೆ ಪಾಲು ಕಡಿಮೆ ಮಾಡಲಾಗಿದೆ. ರಾಜ್ಯದ ಜಿಎಸ್ಟಿ ಸಂಗ್ರಹಣೆ ಇಳಿಕೆ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜ್ಯ ಸರ್ಕಾರ ವಿಧಿಸುವ ವ್ಯಾಟ್ನಲ್ಲಿ ಯಾವುದೇ ಬದಲಾವಣೆ ಮಾಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.