ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮಂಡಿಸಿದ 2020- 21 ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಕೃಷಿ ವಲಯಕ್ಕೆ 32,259 ಕೋಟಿ ರೂಗಳ ನೆರವು ಒದಗಿಸಲಾಗಿದೆ.
ಪ್ರಸಕ್ತ ಸಾಲಿನ ಬಜೆಟ್ ಅನ್ನು ಆರು ವಲಯಗಳಾಗಿ ವಿಂಗಡಿಸಿರುವ ಹಣಕಾಸು ಸಚಿವರು ಆಗಿರುವ ಬಿಎಸ್ ವೈ ಕೃಷಿ ವಲಯಕ್ಕೆ ಸಾಕಷ್ಟು ಒತು ಕೊಟ್ಟಿದ್ದು, ವಲಯದ ಪ್ರಗತಿಗೆ ಈ ಕೆಳಗಿನ ವಿಭಾಗವಾರು ಅನುದಾನ ಬಿಡುಗಡೆ ಮಾಡಿದ್ದಾರೆ.
![Karnataka budget](https://etvbharatimages.akamaized.net/etvbharat/prod-images/6302348_297_6302348_1583392098893.png)
- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ರೈತರಿಗೂ ರಾಜ್ಯದ ಪಾಲಿನ ರೂಪದಲ್ಲಿ ತಲಾ 4000 ರೂ. ನಂತೆ ಈವರೆಗೆ ಸುಮಾರು 41 ಲಕ್ಷ ಬ್ಯಾಂಕ್ ಖಾತೆಗಳಿಗೆ 825 ಕೋಟಿ ರೂಗಳ ನೆರವು ವರ್ಗಾವಣೆ.
- ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ವಾರ್ಷಿಕ 10 ಸಾವಿರ ರೂ ನೆರವಿನ ಜೊತೆಗೆ ಪ್ರತಿ ರೈತರು ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಿಕೆ.
- ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಈವರೆಗೆ 900 ಕೋಟಿ ರೂ ಬಿಡುಗಡೆ.
- ರೈತ ಸಿರಿ ಯೋಜನೆ ಅಡಿ ಸಿರಿಧಾನ್ಯ ಬೆಳೆಯಲು ಪ್ರತಿ ಹೆಕ್ಟೇರಿಗೆ 10,000 ರೂ ಗಳಂತೆ ಗರಿಷ್ಠ 20 ಸಾವಿರ ರೂ ಪ್ರೋತ್ಸಾಹಧನ ನೀಡಿಕೆ.
- ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ರು ನೀಡಿಕೆ
- ವಿಶ್ವ ಬ್ಯಾಂಕ್ ಪ್ರಾಯೋಜಿತ ಸುಜಲ -3 ಯೋಜನೆಯ ಪ್ರಸಾರಕ್ಕಾಗಿ 10 ಕೋಟಿ ರೂಗಳ ವೆಚ್ಚದಲ್ಲಿ 2500 ಗ್ರಾಮಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಮಳೆ ಆಶ್ರಿತ ಕೃಷಿಕರಿಗೆ ಭೂ ಸಂಪನ್ಮೂಲ ಯಾದಿಯ ತರಬೇತಿ.
- 2012ನೇ ಸಾಲಿನಲ್ಲಿ ಸ್ಥಾಪಿಸಲಾದ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕಾಮಗಾರಿಗಾಗಿ 155 ಕೋಟಿ ಹಂಚಿಕೆ. 2020 21 ರಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ.
- ತೋಟಗಾರಿಕಾ ಬೆಳೆಗಳ ಕೊಯ್ಲೋತ್ತರ ನಿರ್ವಹಣೆ ಹಾಗೂ ಇತರ ಶೀತಲಗೃಹಗಳ ನಿರ್ಮಾಣಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಗಳಲ್ಲಿ 5 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ 10 ಶೀತಲ ಗ್ರಹಗಳನ್ನು 75 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ.
- ಹೊಸದಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಂಡರೆ ಪ್ರತಿ ಹೆಕ್ಟೇರಿಗೆ 5000 ರಿಂದ 10 ಸಾವಿರ ರೂ ಪ್ರೋತ್ಸಾಹಧನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ.
- ಕೃಷಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಯೋಜನೆಗಳ ಅಡಿಯಲ್ಲಿ ಶೇ.90 ರಷ್ಟು ಸಹಾಯಧನ ನೀಡಿದೆ. 2019 20 ನೇ ಸಾಲಿನಲ್ಲಿ 1,46,000 ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ವ್ಯವಸ್ಥೆ. 7225 ಎಕರೆ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಸಾಗುವಳಿ ಮತ್ತು ಉನ್ನತ ಮೌಲ್ಯದ ಬೆಳೆಗಳಿಗೆ ನೆರವು ಒದಗಿಸಲು 2020 -21 ನೇ ಸಾಲಿನಲ್ಲಿ 627 ಕೋಟಿ ರೂಗಳ ನೀಡಿಕೆ.
- ಅಟಲ್ ಭೂಜಲ ಯೋಜನೆ ಅಡಿ ಕೇಂದ್ರ ಸರ್ಕಾರದಿಂದ ಸಿಗುವ 1202 ಕೋಟಿ ರೂಗಳ ಅನುದಾನ ಬಳಸಿಕೊಂಡು ರಾಜ್ಯದ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕ್ರಮ.
- 2020 21 ನೇ ಸಾಲಿನಲ್ಲಿ ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಜಲಸಂಪನ್ಮೂಲ ಇಲಾಖೆ ಮೂಲಕ ಕಲ್ಪಿಸಲು ಕ್ರಮ.
- ಮಹದಾಯಿ ಯೋಜನೆ ಅಡಿ ಕಳಸಾ ಮತ್ತು ಬಂಡೂರಿ ನಾಲಾ ಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 2020- 21 ನೇ ಸಾಲಿನಲ್ಲಿ 500 ಕೋಟಿ ರೂ ನೆರವು.
- ಎತ್ತಿನಹೊಳೆ ಯೋಜನೆಗೆ 2020- 21 ನೇ ಸಾಲಿನಲ್ಲಿ 1500 ಕೋಟಿ ನೆರವು.
- ತುಂಗಭದ್ರಾ ಜಲಾಶಯ ನೀರಿನ ಸಂಗ್ರಹಣಾ ಸಾಮರ್ಥ್ಯ ಕೊರತೆ ನೀಗಿಸಲು ವಿಸ್ತೃತ ಯೋಜನಾ ವರದಿ ತಯಾರಿಕೆಗೆ 20 ಕೋಟಿ ರೂ ಅನುದಾನ.
- ಹೊಸ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು 5000 ಕೋಟಿ ರೂ ವೆಚ್ಚದಲ್ಲಿ ಯೋಜನೆ ಅನುಷ್ಠಾನ.
- ಸಮಗ್ರ ವರಾಹ ಅಭಿವೃದ್ಧಿ ಯೋಜನೆಯಡಿ 5 ಕೋಟಿ ರೂ ವೆಚ್ಚದಲ್ಲಿ ಯೋಜನೆ.
- ಹೈನು ರಾಸುಗಳ ಕೃತಕ ಗರ್ಭಧಾರಣೆ ಮೂಲಕ ಹೆಣ್ಣು ಕರುಗಳ ಜನನ ಯೋಜನೆಗೆ 2 ಕೋಟಿ ರು ಅನುದಾನ.
- ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ ಜಾರಿಗೆ 2020 -21 ನೇ ಸಾಲಿನಲ್ಲಿ 1.5 ಕೋಟಿ ರೂ ನೆರವು.
- ಮಹಿಳಾ ಮೀನುಗಾರ ಸಬಲೀಕರಣ ಯೋಜನೆ ಅಡಿ ದ್ವಿಚಕ್ರ ವಾಹನಗಳನ್ನು ನೀಡಲು 5 ಕೋಟಿ ರೂ ವೆಚ್ಚದಲ್ಲಿ ನೂತನ ಯೋಜನೆ ಅನುಷ್ಠಾನ.
- ಕರಾವಳಿ ಹಿನ್ನೀರು ಜಲಕೃಷಿ ಅಭಿವೃದ್ಧಿಗೆ ಮುಲ್ಕಿಯಲ್ಲಿ ಹಿನ್ನೀರು ಮೀನುಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ ನೆರವು.
- ಮಂಗಳೂರು ತಾಲೂಕು ಕುಳಾಯಿಯಲ್ಲಿ ನಿರ್ಮಿಸುತ್ತಿರುವ ಮೀನುಗಾರಿಕೆ ಬಂದರು ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 12.5 ಕೋಟಿ ರೂಗಳ ನೆರವು.
- ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ 181 ಕೋಟಿ ರೂ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ.
- ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರನ್ನು 130 ಕೋಟಿ ರು ವೆಚ್ಚದಲ್ಲಿ ಅಭಿವೃದ್ಧಿಗೆ ನೆರವು.
- ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ 4 ಕೋಟಿ ರೂ ನೆರವು.
- ಉತ್ತರಕನ್ನಡ ಜಿಲ್ಲೆ ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತುವ ಕಾಮಗಾರಿಗೆ 5 ಕೋಟಿ ರೂ ನೆರವು.
- ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಮರವಂತೆಯಲ್ಲಿ ನಿರ್ಮಿಸುತ್ತಿರುವ ಹೊರಬಂದರಿನ ಎರಡನೇ ಹಂತದ ಕಾಮಗಾರಿಗೆ 85 ಕೋಟಿ ರೂ ನೆರವು.
- ಉಡುಪಿ ಜಿಲ್ಲೆ ಕೊಡೆರಿ ಮೀನುಗಾರಿಕೆ ಬಂದರು ಅಭಿವೃದ್ಧಿಗೆ 2 ಕೋಟಿ ರೂ ನೆರವು.
ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾಗೆ ಸರ್ಕಾರ ನಿರ್ಧರಿಸಿದ್ದು, ಈ ಉದ್ದೇಶಕ್ಕಾಗಿ 2020- 21 ನೇ ಸಾಲಿನಲ್ಲಿ 466 ಕೋಟಿ ರೂ. ಮೀಸಲಿಟ್ಟಿದೆ. ಇದರಿಂದ 92,000 ರೈತರಿಗೆ ಪ್ರಯೋಜನವಾಗಲಿದೆ. ಕನಿಷ್ಠ ಬೆಂಬಲ ಬೆಲೆ ನೀಡಿಕೆಗೆ ಆವರ್ತನಿಧಿ ಮತವನ್ನು ಅವಶ್ಯಕತೆಗೆ ಅನುಗುಣವಾಗಿ ಅನುದಾನ ಹೆಚ್ಚಳಕ್ಕೆ ಈ ಅವಧಿಯಲ್ಲಿ 2000 ಕೋಟಿ ರೂ. ಮೀಸಲಿಡಲಾಗಿದೆ.