ಬೆಂಗಳೂರು: ಪೊಲೀಸ್ ಠಾಣೆಗಳಿಗೆ ಆಧುನಿಕ ಸ್ಪರ್ಶ ನೀಡಲು ರಾಜ್ಯದಲ್ಲಿ 240 ಕೋಟಿ ರೂ. ವೆಚ್ಚದಲ್ಲಿ 116 ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಿಸಿ ಸರ್ಕಾರ ದಾಖಲೆ ಮಾಡಿದೆ. ಉಳಿದ ಪೊಲೀಸ್ ಠಾಣೆಗಳ ಕಟ್ಟಡ ನಿರ್ಮಾಣ ಕಾರ್ಯವನ್ನು ಮುಂದುವರೆಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಂಡಿಸಿದ ಬಜೆಟ್‍ನಲ್ಲಿ ಘೋಷಿಸಿದ್ದಾರೆ.
2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಹೊಸ ಪೊಲೀಸ್ ಕಚೇರಿಗಳು, ಪೊಲೀಸ್ ಠಾಣೆ ನಿರ್ಮಾಣ, ಉನ್ನತೀಕರಣ ಮತ್ತು ಆಧುನೀಕರಣಕ್ಕೆ 348 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಅದೇ ರೀತಿ 410 ಕೋಟಿ ರೂ. ವೆಚ್ಚದಲ್ಲಿ ಕಾರಾಗೃಹಗಳ ನಿರ್ಮಾಣ ಮತ್ತು 51 ಕೋಟಿ ರೂ. ವೆಚ್ಚದಲ್ಲಿ ಕಾರಾಗೃಹ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಹೆಚ್ಚಿನ ಸಿಬ್ಬಂದಿ, ಪೊಲೀಸ್ ಠಾಣೆಗಳ ಉನ್ನತೀಕರಣ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಇನ್ನೂ ಎರಡು ಎಫ್‌ಎಸ್‌ಎಲ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. ಬೆಂಗಳೂರು ಪೊಲೀಸರನ್ನು ಬಲಪಡಿಸಲು ವಿವಿಧ ಹಂತಗಳಲ್ಲಿ 2 ಸಾವಿರ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು ಹಾಗೂ ಹೊಸ ವಾಹನ ಖರೀದಿಗೆ 50 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
2022-23ರಲ್ಲಿ ಪೊಲೀಸ್ ಠಾಣೆಗಳು ಮತ್ತು ಕಚೇರಿಗಳ ನಿರ್ಮಾಣ ಮತ್ತು ಉನ್ನತೀಕರಣ ಮತ್ತು ಆಧುನೀಕರಣಕ್ಕಾಗಿ 348 ಕೋಟಿ ರೂ.ಖರ್ಚು ಮಾಡಲಾಗಿದೆ. ಹೊಸ ಬಜೆಟ್‌ನಲ್ಲಿ ಕಾರಾಗೃಹಗಳ ನಿರ್ಮಾಣಕ್ಕೆ 410 ಕೋಟಿ ರೂ. ಹಾಗೂ ಮೇಲ್ದರ್ಜೆಗೇರಿಸಲು 51 ಕೋಟಿ ರೂ. ಬಳಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಪ್ರಾಣಿ ದಾಳಿ ಪರಿಹಾರದ ಮೊತ್ತ ಏರಿಕೆ: ಈವರೆಗೆ ಮಾನವ ಮತ್ತು ವನ್ಯ ಜೀವಿ ಸಂಘರ್ಷಕ್ಕೆ ಒಳಗಾಗಿ ಪ್ರಾಣ ತೆತ್ತವರಿಗೆ ಸರ್ಕಾರದಿಂದ 7.5 ಕೋಟಿ ರೂ.ಪರಿಹಾರ ನೀಡಲಾಗುತ್ತಿತ್ತು. ಈ ಬಾರಿ ಬಜೆಟ್‌ನಲ್ಲಿ ಈ ಪರಿಹಾರದ ಮೊತ್ತವನ್ನು 7.5 ಲಕ್ಷ ರೂ,ನಿಂದ 15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಮುಧೋಳ ಹೌಂಡ್ ತಳಿ ಅಭಿವೃದ್ಧಿಗೆ 5 ಕೋಟಿ ರೂ: ಪ್ರಾಣಿಗಳ ಮೇಲಿನ ಹಿಂಸೆ ತಡೆಯಲು ಹಾಗೂ ಪ್ರಾಣಿಗಳ ಕಲ್ಯಾಣಕ್ಕಾಗಿ ಪ್ರಾಣಿ ಕಲ್ಯಾಣ ಮಂಡಳಿಗೆ 5 ಕೋಟಿ ರೂ. ಅನುದಾನ ನೀಡಲಾಗುವುದು. ಪ್ರಾಣಿ ಕಲ್ಯಾಣ ಮಂಡಳಿಯ ವತಿಯಿಂದ ಬೆಂಗಳೂರಿನಲ್ಲಿ ನಿರ್ಲಕ್ಷಿತ ಪ್ರಾಣಿಗಳ ಸೂಕ್ತ ಚಿಕಿತ್ಸೆ ನೀಡಲು ಚಿಕಿತ್ಸಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಅಲ್ಲದೇ ರಾಷ್ಟ್ರೀಯ ಪ್ರಾಣಿ ತಳಿ ಸಂಪನ್ಮೂಲ ಬ್ಯೂರೋದಿಂದ ಭಾರತೀಯ ದೇಶಿ ಶ್ವಾನ ತಳಿ ಎಂದು ಮಾನ್ಯತೆ ಪಡೆದ ಮುಧೋಳ ಹೌಂಡ್ ಶ್ವಾನ ತಳಿ ಅಭಿವೃದ್ಧಿಗಾಗಿ 5 ಕೋಟಿ ರೂ.ಅನುದಾನ ನೀಡಲಾಗುವುದು ಎಂದು ಸಿಎಂ ಹೇಳಿದರು.
ಇನ್ನು ಜಿಎಸ್‌ಟಿ ಬಾಕಿ, ದಂಡವನ್ನು ಮನ್ನಾ ಮಾಡಲು ಸಿಎಂ ಯೋಜನೆ ಪ್ರಕಟಿಸಿದ್ದಾರೆ. ಅಲ್ಲದೇ ಬಜೆಟ್ನಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ದೇವಾಲಯಗಳು ಮತ್ತು ಮಠಗಳ ಜೀರ್ಣೋದ್ಧಾರಕ್ಕೆ 425 ಕೋಟಿ ರೂ. ಮೀಸಲಿರಿಸಲಾಗಿದೆ.
ಜನಸೇವಕ ಎಂದು ಮರುನಾಮಕರಣ: ಗ್ರಾಮ ಸಹಾಯಕರ ಹುದ್ದೆಯನ್ನು ಜನಸೇವಕ ಎಂದು ಮರುನಾಮಕರಣ ಮಾಡಲಾಗಿದೆ. ಗ್ರಾಮ ಸಹಾಯಕರ ಮಾಸಿಕ ಗೌರವ ಧನ 13,000 ರೂ. ಗಳಿಂದ 14,000 ರೂ. ಗಳಿಗೆ ಹೆಚ್ಚಿಸಲಾಗಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಹಾಯಧನ 1000 ರೂ.ನಿಂದ 1500 ರೂ.ಗೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ: ಬೊಮ್ಮಾಯಿ ಬಜೆಟ್: 2023-24 ಸಾಲಿನಲ್ಲಿ ಬರೋಬ್ಬರಿ 77,750 ಕೋಟಿ ಸಾಲದ ಹೊರೆ