ಬೆಂಗಳೂರು : ರಾಜ್ಯದ ಜನತೆಗೆ ನೀಡಿದ ಐದು ಗ್ಯಾರಂಟಿ ಯೋಜನೆಗಳ ಈಡೇರಿಕೆಗೆ ಹಣ ಹೊಂದಿಸುವ, ಶಿಕ್ಷಣ, ಕೃಷಿ, ನೀರಾವರಿ ಮತ್ತು ಇಂಧನ ಕ್ಷೇತ್ರಗಳಿಗೆ ಆದ್ಯತೆ ನೀಡುವುದು ಸೇರಿ 3.27 ಲಕ್ಷ ಕೋಟಿ ರೂ. ಗಾತ್ರದ 2023-34ನೇ ಸಾಲಿನ ಪರಿಷ್ಕೃತ ಬಜೆಟ್ ಅನ್ನು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಇಂದು ಮಂಡಿಸಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಈ ಹಿಂದಿನ ರಾಜ್ಯ ಸರ್ಕಾರಗಳ ಆರ್ಥಿಕ ನೀತಿ, ಆ ಸರ್ಕಾರಗಳ ಆರ್ಥಿಕ ವೈಫಲ್ಯಗಳನ್ನು ನೇರವಾಗಿಯೇ ಆರೋಪ ಮಾಡಿರುವ ಸಿದ್ದರಾಮಯ್ಯ, ರಾಜ್ಯದ ಅಭಿವೃದ್ಧಿಗೆ ಪೂರಕವಾದ 8,133 ಕೋಟಿ ರೂ.ಗಳ ಕೊರತೆ ಬಜೆಟ್ ಅನ್ನು ಮಂಡಿಸಿದ್ದಾರೆ.
3 ಲಕ್ಷ 27 ಸಾವಿರದ 747 ಕೋಟಿ ರೂ. ಗಾತ್ರದ ಬಜೆಟ್ಗೆ ಆರ್ಥಿಕ ಸಂಪನ್ಮೂಲವನ್ನು ಹೊಂದಿಸಲು ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಮತ್ತು ಮೋಟಾರು ವಾಹನ ತೆರಿಗೆಗಳ ಬಾಬ್ತಿನಿಂದ ಹೆಚ್ಚಿನ ನಿರೀಕ್ಷೆ ಮಾಡಿರುವ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ಈ ವರ್ಷ 85,818 ಕೋಟಿ ರೂಪಾಯಿ ಸಾಲ ಪಡೆಯುವ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಮತ್ತು 228 ಕೋಟಿ ರೂ.ಗಳ ಸಾಲ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆಯ ಗುರಿ 1,01,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಅಬಕಾರಿಯಿಂದ 36 ಸಾವಿರ ಕೋಟಿ ರೂಪಾಯಿ, ನೋಂದಣಿ ಮತ್ತು ಮುದ್ರಾಂಕದ ಬಾಬ್ತಿನಿಂದ 25 ಸಾವಿರ ಕೋಟಿ ರೂಪಾಯಿ, ಮೋಟಾರು ವಾಹನ ತೆರಿಗೆಗಳಿಂದ 11,500 ಕೋಟಿ ರೂಪಾಯಿಗಳ ಆದಾಯ ನಿರೀಕ್ಷಿಸಲಾಗಿದೆ.
ಮದ್ಯಪ್ರಿಯರಿಗೆ, ಹೊಸ ವಾಹನ ಖರೀದಿಸುವವರೆಗೆ ಹೊರೆ : ಪರಿಣಾಮವಾಗಿ ಮದ್ಯಪ್ರಿಯರ ಮೇಲೆ, ಭೂಮಿ ಖರೀದಿ ಮಾಡುವವರ ಮೇಲೆ ಮತ್ತು ಹೊಸ ವಾಹನಗಳನ್ನು ಕೊಳ್ಳುವವರ ಮೇಲೆ ಹೆಚ್ಚಿನ ಹೊರೆ ಬೀಳುವುದು ನಿಶ್ಚಿತವಾಗಿದೆ. ಬಜೆಟ್ಗೆ ಲಭ್ಯವಾಗುವ ಹಣದ ಪೈಕಿ ಶಿಕ್ಷಣಕ್ಕೆ 37,587 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 24,166 ಕೋಟಿ, ಇಂಧನಕ್ಕೆ 22.779 ಕೋಟಿ, ನೀರಾವರಿಗೆ 19.044 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಗೆ 18.038 ಕೋಟಿ, ಒಳಾಡಳಿತ ಮತ್ತು ಸಾರಿಗೆಗೆ 16,638 ಕೋಟಿ, ಕಂದಾಯಕ್ಕೆ 16.167 ಕೋಟಿ, ಆರೋಗ್ಯಕ್ಕೆ 14950 ಕೋಟಿ, ಸಮಾಜ ಕಲ್ಯಾಣಕ್ಕೆ 11173 ಕೋಟಿ ರೂ. ನೀಡಲಾಗಿದೆ.
ಇದೇ ರೀತಿ ಆಹಾರ ಮತ್ತು ನಾಗರೀಕ ಸರಬರಾಜಿಗೆ 10,460 ಕೋಟಿ, ಲೋಕೋಪಯೋಗಿಗೆ 10143 ಕೋಟಿ, ಕೃಷಿ ಮತ್ತು ಕೈಗಾರಿಕೆಗೆ 5,860 ಕೋಟಿ, ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ 3024 ಕೋಟಿ ರೂಪಾಯಿಗಳನ್ನು ಬಜೆಟ್ನಲ್ಲಿ ನೀಡಲಾಗಿದೆ.
ಆರೋಪ ಮಾಡುತ್ತಲೇ ಬಜೆಟ್ ಮಂಡನೆ: ಈ ಹಿಂದಿನ ಸರ್ಕಾರ ಮಂಡಿಸಿದ್ದ 3.09 ಕೋಟಿ ರೂಪಾಯಿಗಳ ಬಜೆಟ್ ಅನ್ನು ಪರಿಷ್ಕರಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಬಜೆಟ್ ಗಾತ್ರವನ್ನು ಪರಿಷ್ಕರಿಸಿ 3,27,747 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದ್ದಾರೆ. ಬಜೆಟ್ನಲ್ಲಿ ಹೊಸ ಯೋಜನೆಗಳ ಜಾರಿಗೆ ಆದ್ಯತೆ ನೀಡುವ ಬದಲು, ಈಗಾಗಲೇ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪೂರ್ಣ ಮಾಡಲು ಆದ್ಯತೆ ನೀಡಲಾಗಿದ್ದು, ಇದು ಕೇಂದ್ರ ಮತ್ತು ಈ ಹಿಂದಿನ ರಾಜ್ಯ ಸರ್ಕಾರದ ಆರ್ಥಿಕ ವೈಫಲ್ಯದ ಪರಿಣಾಮ ಎಂದು ಹೇಳಿದ್ದಾರೆ. ಪ್ರತಿ ಇಲಾಖೆಯ ಯೋಜನೆಗಳ ಬಗ್ಗೆ ಓದುವಾಗಲೂ ಕೇಂದ್ರ ಹಾಗೂ ಹಿಂದಿನ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಲೇ ಬಜೆಟ್ ಪುಸ್ತಕವನ್ನು ಓದಿದರು.
ಆರು ಲಕ್ಷ ಕೋಟಿ ಸಾಲ: ಇದೇ ರೀತಿ ಈ ವರ್ಷ ಸರ್ಕಾರ ಮಾಡಲಿರುವ ಸಾಲದ ಪ್ರಮಾಣ ಈ ಹಿಂದೆ ಆಗಿರುವ ಒಟ್ಟಾರೆ ಸಾಲದ ಮೊತ್ತಕ್ಕೆ ಸೇರಿದರೆ ಕರ್ನಾಟಕದ ಹೆಗಲ ಮೇಲೆ ಆರು ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಸಾಲದ ಗಂಟು ಕೂರಲಿದೆ. ಈ ನಡುವೆಯೇ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗುವಂತಹ ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಹಲವು ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ಗೃಹ ಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವ ನಿಧಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳ ಮೂಲಕ ಸಮಾಜದ ಬಹುತೇಕರಿಗೆ ಸಾಮಾಜಿಕ ನ್ಯಾಯ ದಕ್ಕುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಮನೆ ಒಡತಿಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವ ಗೃಹ ಲಕ್ಷ್ಮಿ ಯೋಜನೆಗೆ 30 ಸಾವಿರ ಕೋಟಿ ರೂಪಾಯಿಗಳು ವೆಚ್ಚವಾಗಲಿದ್ದು ದೇಶದಲ್ಲಿ ಅತ್ಯಂತ ದೊಡ್ಡ ಭದ್ರತಾ ಖಾತರಿ ಯೋಜನೆಯಾಗಲಿದೆ ಎಂದಿದ್ದಾರೆ. ಒಟ್ಟು 135 ಪುಟಗಳನ್ನು ಹೊಂದಿರುವ ಬಜೆಟ್ ಪುಸಕ್ತದಲ್ಲಿ ಸಾಮಾಜಿಕ ನ್ಯಾಯದ ಅಗತ್ಯವನ್ನು ಪ್ರಸ್ತಾಪಿಸಿರುವ ಸಿದ್ದರಾಮಯ್ಯ ಅವರು, ಇದಕ್ಕಾಗಿ ಹಲವು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವ ಮಾತನಾಡಿದ್ದಾರೆ.
2 ಗಂಟೆ 50 ನಿಮಿಷ ಬಜೆಟ್ ಮಂಡನೆ : ರೇಷ್ಮೆ ಪಂಚೆ, ಬಿಳಿ ಶರ್ಟ್, ಬಿಳಿ ರೇಷ್ಮೆ ಶಲ್ಯೆ ತೊಟ್ಟು ಸದನಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, 12.05 ಕ್ಕೆ ಬಜೆಟ್ ಪುಸ್ತಕ ಓದಲು ಆರಂಭಿಸಿ 2 ಗಂಟೆ 50 ನಿಮಿಷಕ್ಕೆ ಮುಗಿಸಿದರು. ವಾತಾವರಣ ಸರಿಯಿಲ್ಲದ ಕಾರಣ ಕೆಮ್ಮುತ್ತಲೇ ಬಜೆಟ್ ಓದಿ ಮುಗಿಸಿದ ಸಿಎಂ, ಒಮ್ಮೆ ಮಾತ್ರ ನೀರು ಕುಡಿದರು. ಕೆಮ್ಮಿದ್ದರೂ ಆಯಾಸವಾಗದಂತೆ ಬಜೆಟ್ ಪುಸ್ತಕ ಓದಿ, ಈ ಆಯವ್ಯಯದಲ್ಲಿ ಘೋಷಿಸಲಾದ ಎಲ್ಲಾ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಜಾರಿಗೆ ತರಲು ನಾನು ಶತಸಿದ್ಧನಾಗಿದ್ದೇನೆ ಎಂದು ನಗುತ್ತಲೇ ಪ್ರತಿಪಕ್ಷದ ಸದಸ್ಯರ ಕಡೆ ನೋಡಿ, ಈ ಸದನದ ಎಲ್ಲಾ ಸದಸ್ಯರ ಸಂಪೂರ್ಣ ಸಹಕಾರವನ್ನು ಕೋರುತ್ತೇನೆ ಎಂದರು.
ಇದನ್ನೂ ಓದಿ: ಸಿದ್ದು ಮಂಡಿಸಿದ್ದು ರಿವರ್ಸ್ ಗೇರ್ ಬಜೆಟ್, ಜನವಿರೋಧಿ ಎಂದ ಬಸವರಾಜ ಬೊಮ್ಮಾಯಿ..!