ಬೆಂಗಳೂರು: ಹಲವು ವರ್ಷಗಳಿಂದ ಕನಿಷ್ಟ ಗೌರವ ಧನಕ್ಕೆ ಹೋರಾಟ ನಡೆಸುತ್ತಿರುವ ರಾಜ್ಯದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ರಾಜ್ಯ ಸರ್ಕಾರದ 2022-23ನೇ ಸಾಲಿನ ಬಜೆಟ್‌ನಲ್ಲಾದರೂ ತಮ್ಮ ಬೇಡಿಕೆಗಳು ಈಡೇರುತ್ತವಾ? ಎಂಬ ನಿರೀಕ್ಷೆಯಲ್ಲಿದ್ದಾರೆ.
ಈ ಕುರಿತಂತೆ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಅಧ್ಯಕ್ಷ ಸೋಮಶೇಖರ ಯಾದಗಿರಿ ಹಾಗೂ ಆಶಾ ಕಾರ್ಯಕರ್ತೆಯ ಸಂಘಟನೆಯ ಮುಖ್ಯಸ್ಥೆ ನಾಗಲಕ್ಷ್ಮಿ ಈಟಿವಿ ಭಾರತದೊಂದಿಗೆ ತಮ್ಮ ಬೇಡಿಕೆಗಳ ಕುರಿತು ಮಾಹಿತಿ ಹಂಚಿಕೊಂಡರು.
ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು: ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುತ್ತಿರುವ 10 ಸಾವಿರ ರೂಪಾಯಿಯನ್ನು ಗೌರವಧನವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ಈ ಕುರಿತಂತೆ ಇಲಾಖೆ ಸಚಿವರು ಹಾಗೂ ಕಾರ್ಯದರ್ಶಿ ಜತೆ ಮಾತುಕತೆ ನಡೆಸಿದ್ದೇವೆ. ಈ ಬಾರಿ ಪರಿಗಣಿಸುವ ಭರವಸೆ ನೀಡಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಸೋಮಶೇಖರ ಯಾದಗಿರಿ ತಿಳಿಸಿದ್ದಾರೆ.
ಕಾರ್ಯಕರ್ತೆಯರಿಗೆ ಎಲ್ಲರಿಗೂ ಒಂದೇ ರೀತಿಯ ಗೌರವಧನ ನೀಡಲಾಗುತ್ತಿದೆ. ಹೀಗಾಗಿ ಸೇವಾ ಹಿರಿತನದ ಆಧಾರದ ಮೇಲೆ 5 ವರ್ಷಕ್ಕೆ 500 ಹೆಚ್ಚಿಸುವಂತೆ ಕೋರಿದ್ದೇವೆ. ಅಂಗನವಾಡಿ ಕಾರ್ಯಕರ್ತೆಯರು ನಿವೃತ್ತಿ ಹೊಂದಿದಾಗ ಅವರಿಗೆ ಯಾವುದೇ ನಿವೃತ್ತಿ ಸೌಲಭ್ಯಗಳಿರುವುದಿಲ್ಲ. ಇಡಗಂಟು ಸೌಲಭ್ಯವನ್ನು ಪುನರ್ ಪ್ರಾರಂಭಿಸುವಂತೆ ಮನವಿ ಒತ್ತಾಯಿಸಲಾಗಿದೆ.
ಗಂಭೀರ ಸ್ವರೂಪದ ಕಾಯಿಲೆಗಳಿಗೆ ನೀಡುವ ಚಿಕಿತ್ಸಾ ವೆಚ್ಚ ಮರುಪಾವತಿಯನ್ನು 50 ಸಾವಿರದಿಂದ 1 ಲಕ್ಷಕ್ಕೆ ಏರಿಕೆ ಮಾಡುವಂತೆ ಹಾಗೂ ಪ್ರಯಾಣ ಭತ್ಯೆ ಮತ್ತು ದಿನಭತ್ಯೆಗಳನ್ನು ಹೆಚ್ಚಿಸುವಂತೆ ಕೋರಿದ್ದೇವೆ ಎನ್ನುತ್ತಾರೆ.
ಆಶಾ ಕಾರ್ಯಕರ್ತೆಯರ ಒತ್ತಾಯವೇನು?: ಆಶಾ ಕಾರ್ಯಕರ್ತೆಯರಿಗೆ ನೀಡುವ ಗೌರವಧನ ಹೆಚ್ಚಿಸುವಂತೆ, ಆರೋಗ್ಯ ಸೌಲಭ್ಯಗಳನ್ನು ನೀಡುವಂತೆ, ಪ್ರೋತ್ಸಾಹಧನವನ್ನು ನಿಗದಿತವಾಗಿ ನೀಡುವಂತೆ ಹಾಗೂ ಈವರೆಗೆ ಬಾಕಿ ಉಳಿಸಿಕೊಂಡಿರುವ ಗೌರವ ಧನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೇವೆ. ಅಲ್ಲದೇ, ಆಶಾ ಕಾರ್ಯಕರ್ತೆಯ ಕೆಲಸದ ಸ್ವರೂಪ ಬದಲಾಗಿದ್ದು, ಶ್ರಮಕ್ಕೆ ತಕ್ಕಂತೆ ಸೂಕ್ತ ಗೌರವಧನ ನೀಡುವಂತೆ ಹಾಗೂ ಮಾಸಿಕ 12 ಸಾವಿರ ನೀಡುವಂತೆ ಒತ್ತಾಯಿಸಿದ್ದೇವೆ.
ಈ ನಿಟ್ಟಿನಲ್ಲಿ ಆರೋಗ್ಯ ಸಚಿವರು ಹಾಗೂ ಇಲಾಖೆ ಆಯುಕ್ತರ ಜತೆಗೆ ಸಭೆ ನಡೆಸಿ ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದೇವೆ. ಬಜೆಟ್ನಲ್ಲಿ ಅವುಗಳನ್ನು ಪರಿಗಣಿಸುವ ನಿರೀಕ್ಷೆ ಹೊಂದಿದ್ದೇವೆ ಎನ್ನುತ್ತಾರೆ ಆಶಾ ಕಾರ್ಯಕರ್ತೆಯರ ಸಂಘಟನೆ ಮುಖ್ಯಸ್ಥೆ ನಾಗಲಕ್ಷ್ಮಿ.
ಇದನ್ನೂ ಓದಿ: ಸರ್ಕಾರಿ ಪದವಿ ಕಾಲೇಜಿಗೆ ನ್ಯಾಕ್ 'ಬಿ+' ಶ್ರೇಣಿ: ಸಂತಸ ವ್ಯಕ್ತಪಡಿಸಿದ ಸಚಿವ ಅಶ್ವತ್ಥನಾರಾಯಣ