ಬೆಂಗಳೂರು: ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಹಿನ್ನೆಲೆ ಕಳೆದ ವರ್ಷದ ಆಯವ್ಯಯದ ಗುರಿಯನ್ನು ತಲುಪಲು ಕಷ್ಟವಾಗಿದ್ದು, ಇದೇ ಕಾರಣಕ್ಕಾಗಿ ಈ ವರ್ಷ ಸರ್ಕಾರದ ಬಹುತೇಕ ಇಲಾಖೆಗಳ ಅನುದಾನವನ್ನು ಕಡಿತಗೊಳಿಸಲಾಗಿದೆ. ಆದರೆ, ಕೆಲವೊಂದು ಇಲಾಖೆಗಳಿಗೆ ಸ್ವಲ್ಪಮಟ್ಟಿಗೆ ಅನುದಾನ ಹೆಚ್ಚಿಸಲಾಗಿದೆ.
15 ನೇ ಹಣಕಾಸು ಆಯೋಗವು ಸಲ್ಲಿಸಿದ ವರದಿಯ ಪ್ರಕಾರ 2020-21ನೇ ಸಾಲಿಗೆ ನಿಗದಿ ಪಡಿಸಿದ ತೆರಿಗೆಯ ಪಾಲಿನಲ್ಲಿ ಶೇ 3.64 ರಷ್ಟು ಕುಸಿತವಾಗಿದ್ದು, ಈ ಕಾರಣದಿಂದ ರಾಜ್ಯಕ್ಕೆ 11,215 ಕೋಟಿ ರೂ. ಕಡಿತವಾಗಲಿದೆ. ಈ ಬಾರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೃಷಿಗೆ ಅಗ್ರಸ್ಥಾನ ನೀಡಿದ್ದು, ಅದೇ ಕಾಲಕ್ಕೆ ಹಿಂದಿನ ಸರ್ಕಾರಗಳ ಹಲವು ಯೋಜನೆಗಳನ್ನು ಯಥಾವತ್ತಾಗಿ ಮುಂದುವರಿಸಲಾಗಿದೆ. ಯಾವುದೇ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡದೇ ಲೆಕ್ಕಾಚಾರ ಹಾಕಿಯೇ ಇಲಾಖೆಗಳಿಗೆ ಅನದಾನ ಹಂಚಿಕೆ ಮಾಡಿದ್ದಾರೆ.
ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ : ಈ ಬಾರಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 7,889 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. 2019-20 ನೇ ಸಾಲಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 7,042 ಕೋಟಿ ರೂ. ಇಟ್ಟಿತ್ತು. 2020-21 ನೇ ಸಾಲಿನಲ್ಲಿಈ ಇಲಾಖೆಗಳಿಗೆ 847 ಕೋಟಿ ರೂ. ನಷ್ಟು ಹೆಚ್ಚು ಅನುದಾನ ನೀಡಿದೆ. ರೇಷ್ಮೆ ಇಲಾಖೆಗೆ 10 ಕೋಟಿ ರೂ. ಮೀಸಲಿಡಲಾಗಿದೆ. ರೈತ ಸಿರಿ ಸೇರಿದಂತೆ ಕೆಲವೊಂದು ಹಿಂದಿನ ಸರ್ಕಾರದ ಯೋಜನೆಗಳನ್ನೇ ಮುಂದುವರಿಸಲಾಗಿದೆ. ಹೊಸದಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೇಂದ್ರ ಸರ್ಕಾರದ 6 ಸಾವಿರ ರೂ. ಜೊತೆಗೆ ರಾಜ್ಯ ಸರ್ಕಾರ 4 ಸಾವಿರ ರೂ. ಹೆಚ್ಚುವರಿ ನೆರವನ್ನು ಘೋಷಿಸಿದೆ. ಈ ಯೋಜನೆಗೆ 2020-21 ನೇ ಸಾಲಿನಲ್ಲಿ 2,600 ಕೋಟಿ ರೂ. ಒದಗಿಸಿದೆ. ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಈ ಬಾರಿ ಅರಂಭಿಸಲು ಉದ್ದೇಶಿಸಲಾಗಿದೆ.
ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆ: ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಗೆ 2020-21 ನೇ ಸಾಲಿನಲ್ಲಿ 21,308 ಕೋಟಿ ರೂ. ಒದಗಿಸಿದೆ. 2019-20 ನೇ ಸಾಲಿನಲ್ಲಿ 19,270 ಕೋಟಿ ರೂ. ಮೀಸಲಿಟ್ಟಿತ್ತು. ಈ ಬಾರಿ 2,038 ಕೋಟಿ ರೂ. ಹೆಚ್ಚಾಗಿ ಅನುದಾನ ನೀಡಲಾಗಿದೆ. ಮಹದಾಯಿ ಯೋಜನೆಯಡಿ ಕಳಸಾ ಮತ್ತು ಬಂಡೂರಿ ನಾಲಾಗಳ ಕಾಮಗಾರಿ ಕೈಗೆತ್ತಿಕೊಳ್ಳಲು 500 ಕೋಟಿ ರೂ. ಒದಗಿಸಿರುವುದು ಮತ್ತೊಂದು ವಿಶೇಷ. ಅದೇ ರೀತಿ ಎತ್ತಿನಹೊಳೆ ಯೋಜನೆಗೆ ಆದ್ಯತೆ ನೀಡಿರುವ ಸರ್ಕಾರ 1,500 ಕೋಟಿ ರೂ. ಒದಗಿಸಿದೆ. ಬಜೆಟ್ ಮಂಡಿಸಿದ ಮರುದಿನ ಸಿಎಂ ಬಿ.ಎಸ್.ಯಡಿಯೂರಪ್ಪನವರು ಮತ್ತೆ ನೀರಾವರಿಗೆ 10 ಸಾವಿರ ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಈ ಬಾರಿ 15,595 ಕೋಟಿ ರೂ. ಅನುದಾನ ಕೊಡಲಾಗಿದೆ. 2019-20 ನೇ ಸಾಲಿನಲ್ಲಿ 14,899 ಕೋಟಿ ರೂ.ಗಳನ್ನು ಒದಗಿಸಿತ್ತು. 2020-21 ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 696 ಕೋಟಿ ರೂ.ಗಳನ್ನು ನೀಡಲಾಗಿದೆ. ಹೊಸದಾಗಿ ‘ಗ್ರಾಮೀಣ ಸುಮಾರ್ಗ ಯೋಜನೆ’ ಯನ್ನು ಜಾರಿಗೆ ತರಲು ಈ ಬಜೆಟ್ ನಲ್ಲಿ ಘೋಷಿಸಲಾಗಿದೆ. ಅದೇ ರೀತಿ ಜಲ ಜೀವನ್ ಮಿಷನ್ ಹಾಗೂ ‘ಮನೆ ಮನೆಗೆ ಗಂಗೆ’ ಎಂಬ ನೂತನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹತ್ತು ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಸಹಕಾರ ಇಲಾಖೆ : ರೈತರ ಬೆಳೆ ಸಾಲ ಮನ್ನಾ ಯೋಜನೆಗೆ 2019-20 ನೇ ಸಾಲಿನಲ್ಲಿ 12,650 ಕೋಟಿ ರೂ. ಅನುದಾನ ಬಜೆಟ್ ಮೀಸಲಿಡಲಾಗಿತ್ತು. ಆದರೆ, ಈ ಬಾರಿ ಬಜೆಟ್ನಲ್ಲಿ ಸಹಕಾರ ಕ್ಷೇತ್ರದ ಪಾರ್ಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ) ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ರೈತರಿಗೆ ಟ್ರ್ಯಾಕ್ಟರ್, ಟಿಲ್ಲರ್ ಇತ್ಯಾದಿ ಕೃಷಿ ಯಂತ್ರೋಪಕರಣಗಳ ಖರೀದಿಗೆ ನೀಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳ ಮರುಪಾವತಿ ಅತ್ಯಂತ ಕಡಿಮೆಯಾಗಿದೆ. ಈ ಕಾರಣದಿಂದಾಗಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಿದೆ. ಇದಕ್ಕಾಗಿ 2020-21 ನೇ ಸಾಲಿನಲ್ಲಿ 466 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಒದಗಿಸಿದೆ. ಆವರ್ತ ನಿಧಿಯ ಮೊತ್ತವನ್ನು ಅವಶ್ಯಕತೆಗೆ ಅನುಗುಣವಾಗಿ ಈ ಬಾರಿ 2,000 ಕೋಟಿ ರೂ. ಗಳವರೆಗೆ ಹೆಚ್ಚಿಸಲಾಗಿದೆ. 2020-21 ಸಾಲಿನಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆಯಾಗಿ 32,259 ಕೋಟಿ ರೂ. ಒದಗಿಸಲಾಗಿದೆ.