ಬೆಂಗಳೂರು: 2023ರ ರಾಜ್ಯ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಇಂದು 'ವಾರ್ ರೂಂ' ತೆರೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ನಗರದ ಮಲ್ಲೇಶ್ವರದಲ್ಲಿ ಇಂದು ಪಕ್ಷದ ರಾಜ್ಯ ಮಟ್ಟದ ವಾರ್ ರೂಂ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಈ ವಾರ್ ರೂಂನಲ್ಲಿ ಮೀಡಿಯ ಸೆಂಟರ್, ಕಾಲ್ ಸೆಂಟರ್, ಸಾಮಾಜಿಕ ಜಾಲತಾಣಕ್ಕೆ ಬೇಕಾದ ಎಲ್ಲ ವ್ಯವಸ್ಥೆ, ಮಾಧ್ಯಮ ಮಿತ್ರರಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಮುಂದಿನ ಚುನಾವಣೆ ದೃಷ್ಟಿಯಿಂದ ಪೇಜ್ ಕಮಿಟಿಯಿಂದ ಆರಂಭಿಸಿ ಬೂತ್ ಸಶಕ್ತೀಕರಣ ಕಾರ್ಯವನ್ನು ಪೂರ್ಣಗೊಳಿಸಿದೆ. ಚುನಾವಣೆಗೆ ಕಾರ್ಯಕರ್ತ ಸೈನಿಕರ ಪೂರ್ಣ ಸಿದ್ಧತೆ ಆಗಿದೆ. ಮತಗಟ್ಟೆಯಲ್ಲೂ ನಮ್ಮ ವಾರ್ ರೂಂಗಳು ಆರಂಭಗೊಂಡಿವೆ ಎಂದರು.
ಇಲ್ಲಿನ ವಾರ್ ರೂಂ ಮೂಲಕ ಜಿಲ್ಲೆ, ಜಿಲ್ಲೆಯಿಂದ ಮಂಡಲ, ಮಂಡಲದಿಂದ ಮತಗಟ್ಟೆವರೆಗೆ, ಮತಗಟ್ಟೆಯಿಂದ ಕಾರ್ಯಕರ್ತ, ಅಲ್ಲಿಂದ ಮತದಾರರನ್ನು ಸಂಪರ್ಕಿಸುವ ಕಾರ್ಯಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು.
ಜನತೆ ಕಾಂಗ್ರೆಸ್ ಪಕ್ಷದ ವಿರುದ್ಧ ಇದ್ದಾರೆ: ರಾಜ್ಯದಲ್ಲೂ ಜನತೆ ಕಾಂಗ್ರೆಸ್ ಪಕ್ಷದ ವಿರುದ್ಧ ಇದ್ದಾರೆ. ಹೀಗಾಗಿ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಹಾಗೂ ಕಾಂಗ್ರೆಸ್ಸಿನ ಆಂತರಿಕ ಜಗಳವನ್ನು ಮುಚ್ಚಿ ಹಾಕಲು ಕಾಂಗ್ರೆಸ್ ರಾಜ್ಯದ ಸಿಎಂ ಬದಲಾವಣೆ ಕುರಿತಂತೆ ಟ್ವೀಟ್ ಮಾಡಿ ಗೊಂದಲ ಮೂಡಿಸಲು ಪ್ರಯತ್ನಿಸಿದೆ ಎಂದು ಕಟೀಲ್ ದೂರಿದರು.
ವಾರ್ ರೂಂ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣಾ, ರಾಜ್ಯಸಭಾ ಸದಸ್ಯ ಜಗ್ಗೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಒಬ್ಬ ನಾಯಕನಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ: ಮೋಹನ್ ಭಾಗವತ್