ಬೆಂಗಳೂರು: ಹೈಕಮಾಂಡ್ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತು ಪಕ್ಷ ಸಂಘಟನೆ ಮತ್ತು ಕಾರ್ಯತಂತ್ರ ರೂಪಿಸುವ ಸಲುವಾಗಿ ಬಿಜೆಪಿ ಹಿರಿಯ ನಾಯಕರ ಚಿಂತನ ಮಂಥನ ಸಭೆ ಇಂದಿನಿಂದ(ಗುರುವಾರ) ಎರಡು ದಿನ ನಡೆಯಲಿದೆ.
ಬೆಂಗಳೂರಿನ ಹೊರವಲಯದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದ ಗೌಡ, ಹಿರಿಯ ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಡಾ.ಅಶ್ವತ್ಥ ನಾರಾಯಣ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿ ಆಯ್ದ ಕೆಲವು ನಾಯಕರು ಮಾತ್ರ ಪಾಲ್ಗೊಳ್ಳಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೊರತುಪಡಿಸಿ ಅಧಿಕೃತವಾಗಿ ಮತ್ತೆ ಯಾರು ಪಾಲ್ಗೊಳ್ಳಲಿದ್ದಾರೆ ಎನ್ನುವುದನ್ನು ಗೌಪ್ಯವಾಗಿಡಲಾಗಿದೆ.
ಇಂದು ಸಂಜೆ ಎಲ್ಲ ನಾಯಕರು ಬೆಂಗಳೂರು ಹೊರ ವಲಯದ ರೆಸಾರ್ಟ್‌ಗೆ ತೆರಳಿ ಅಲ್ಲಿಯೇ ಸಭೆ ನಡೆಸಿ ವಾಸ್ತವ್ಯ ಹೂಡಲಿದ್ದು, ಶುಕ್ರವಾರ ಬೆಳಿಗ್ಗೆಯಿಂದ ಸಂಜೆವರೆಗೂ ಸುದೀರ್ಘ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ನಂದಿಬೆಟ್ಟದಲ್ಲಿ ಸಭೆ ನಡೆಯಬಹುದು.
ಈ ಚಿಂತನ ಮಂಥನ ಕಾರ್ಯಕ್ರಮದ ಸಂದರ್ಭದಲ್ಲಿ ಆರ್ಎಸ್ಎಸ್ ನಾಯಕರ ಜೊತೆಗೆ ಪ್ರತ್ಯೇಕ ಸಭೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. 2017ರಲ್ಲಿ ಚುನಾವಣೆಗೂ ವರ್ಷದ ಮೊದಲು ಬಿಜೆಪಿ ಹೈಕಮಾಂಡ್ ನಾಯಕರು, ಆರ್ಎಸ್ಎಸ್ ನಾಯಕರು, ರಾಜ್ಯ ನಾಯಕರ ಮಹತ್ವದ ಗೌಪ್ಯ ಸಭೆ ನಡೆದಿತ್ತು. ಈಗಲೂ ಅಂತಹ ಸಭೆ ಆಯೋಜನೆಗೂ ಮೊದಲು ಪೂರ್ವಭಾವಿಯಾಗಿ ಸಭೆ ನಡೆಯಲಿದೆ.
ಚಿಂತನ ಮಂಥನ ಸಭೆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ನೇತೃತ್ವದಲ್ಲಿ ಸಚಿವರ ಸಭೆ ನಡೆಯಲಿದೆ. ವರ್ಷದ ಸಾಧನೆಯ ಪರಾಮರ್ಶೆ ನಡೆಸಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ಇಂಗ್ಲೆಂಡ್ ಪ್ರಧಾನಿ ಆಯ್ಕೆ: 1ನೇ ಸುತ್ತಿನಲ್ಲಿ ರಿಷಿ ಸುನಕ್ಗೆ ಹೆಚ್ಚಿನ ಮತ.. ಪ್ರಧಾನಿ ರೇಸ್ನಲ್ಲಿ ಮುನ್ನಡೆ