ಬೆಂಗಳೂರು:ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ನೀಡಲಾಗಿದ್ದ ಕರ್ನಾಟಕ ಬಂದ್ಗೆ ಬೆಂಗಳೂರು ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಷೇದಾಜ್ಞೆ ಹಿನ್ನೆಲೆಯೂ ಟೌನ್ಹಾಲ್ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮರೆವಣಿಗೆಯನ್ನು ಟೌನ್ಹಾಲ್ ಬಳಿ ತಡೆಯಲಾಯಿತು. ಈ ವೇಳೆ ಬಂದ್ ನೇತೃತ್ವದ ವಹಿಸಿದ್ದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಕನ್ನಡ ಸೇನೆ ಅಧ್ಯಕ್ಷ ಕೆ ಕುಮಾರ್, ಹೋರಾಟಗಾರ ರೂಪೇಶ್ ರಾಜಣ್ಣ ಸೇರಿದಂತೆ ಹಲವು ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.
ಫ್ರೀಡಂಪಾರ್ಕ್ ಬಳಿ ಪ್ರತಿಭಟನೆ ಮುಕ್ತಾಯ ಬಳಿಕ ಮಾತನಾಡಿದ ವಾಟಾಳ್, ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ಖಂಡಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಇಂದು ರಾಜ್ಯದಲ್ಲಿ ಯಶಸ್ವಿಯಾಗಿದೆ. ಬಂದ್ ಸಹಕರಿಸಿದ ಹಾಗೂ ಬೆಂಬಲಿಸಿದವರಿಗೆ ಧನ್ಯವಾದ ಅರ್ಪಿಸಿದರು.
ಬಂದ್ ಹಿನ್ನೆಲೆಯಲ್ಲಿ ರಾಜ್ಯದ ಕನ್ನಡಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಟೌನ್ ಹಾಲ್ನಿಂದ ಫ್ರೀಡಂ ಪಾರ್ಕ್ ವರೆಗೂ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ತಡೆಯಲು ನಗರದಲ್ಲಿ 144 ಸೆಕ್ಷನ್ ಜಾರಿ ತಂದಿದೆ. ಕಾವೇರಿ ವಿಚಾರವಾಗಿ ಕಠೋರ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಆದಾಗ್ಯೂ ಬಂದ್ ಇಂದು ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅ.5ಕ್ಕೆ ಬೆಂಗಳೂರಿನಿಂದ ಕೆಆರ್ಎಸ್ ವರೆಗೆ ಪ್ರತಿಭಟನಾ ಜಾಥಾ: ಕಾವೇರಿ ವಿಚಾರವಾಗಿ ಹೋರಾಟ ತೀವ್ರಗೊಳಿಸಲು ಅಕ್ಟೋಬರ್ 5ರಂದು ಬೆಂಗಳೂರಿನಿಂದ ಕೆಆರ್ ಎಸ್ ಜಲಾಶಯದವರೆಗೂ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ. ಕೆಂಗೇರಿ, ರಾಮನಗರ, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು ಮೂಲಕ ಕೆಆರ್ ಎಸ್ ಗೆ ಮೂಲಕ ಜಾಥಾ ಸಾಗಲಿದೆ. ಅಂದು 2 ಸಾವಿರಗಿಂತ ಹೆಚ್ಚು ನಾಲ್ಕು ಚಕ್ರದ ವಾಹನಗಳು ಹಾಗೂ 20 ಸಾವಿರ ದ್ವಿಚಕ್ರ ವಾಹನ ಸಹಿತ ಸಾವಿರಾರು ಜನರು ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನೋಟಿಸ್ ನೀಡಿದ್ದು ಸರಿಯಲ್ಲ:ನಿಷೇಧಾಜ್ಞೆ ನಡುವೆಯೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿರುವ ಬಗ್ಗೆ ಸರ್ಕಾರವು ಪೊಲೀಸರು ಮುಖಾಂತರ ಕನ್ನಡ ಪರ ಹೋರಾಟಗಾರರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸುಮಾರು 15 ಸಾವಿರಕ್ಕೂ ಹೆಚ್ಚು ಚಳವಳಿ ಮಾಡಿದ್ದೇನೆ. ನಾಡು-ನುಡಿ, ಜಲ ವಿಷಯ ಬಂದಾಗ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದೇನೆ. ಇಷ್ಟಾದರೂ ಕನ್ನಡಪರ ಹೋರಾಟಗಾರರಿಗೆ ನೋಟಿಸ್ ಜಾರಿ ಮಾಡಿದ್ದು ಸರಿಯಲ್ಲ. ತಾನೂ ನೋಟಿಸ್ ಸ್ವೀಕರಿಸಿಲ್ಲ ಎಂದು ವಾಟಾಳ್ ಸ್ಪಷ್ಟಪಡಿಸಿದರು.
ಬೈಕ್ ನಲ್ಲಿ ಬಂದ ಮೈಲಾರಿ:ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿದರು. ಕಾವೇರಿ ಹೋರಾಟಕ್ಕೆ ಬಂದ ವ್ಯಕ್ತಿಯೊಬ್ಬರು ಕುಣಿಗಲ್ ಅಮೃತೂರಿನಿಂದ ಬೈಕ್ನಲ್ಲಿ ಮೈಲಾರಿಯನ್ನು (ಮೇಕೆ) ಕೂರಿಸಿಕೊಂಡು ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು. ಈ ಬಗ್ಗೆ ರಾಜಣ್ಣ ಮಾತನಾಡಿ, ಕಾವೇರಿ, ಮೇಕೆದಾಟು ಸೇರಿದಂತೆ ಹಲವು ಕನ್ನಡಪರ ಹೋರಾಟಗಳಲ್ಲಿ ಮೈಲಾರಿ ಭಾಗಿಯಾಗಿದೆ. ರೈತರು ನೀರಿಲ್ಲದೇ ಸಂದಿಗ್ನ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಟ್ಟಿರುವುದು ಖಂಡನೀಯ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂಓದಿ:ರಾಜಕಾರಣಿಗಳು ವೋಟ್ ಪಡೆದು ರೈತರ ಕತ್ತು ಕುಯ್ಯುವ ಕೆಲಸ ಮಾಡುತ್ತಿದ್ದಾರೆ: ಚಿತ್ರನಟ ಜೋಗಿ ಪ್ರೇಮ್