ಬೆಂಗಳೂರು: ಕಾವೇರಿ ಜಲ ವಿವಾದದ ಹಿನ್ನೆಲೆ ಹಲವು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕಾರಣ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೆ.29 ರಂದು ನಡೆಯಬೇಕಿದ್ದ 2-4 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಕಾವೇರಿ ನೀರು ವಿವಾದ ಈಗ ಮತ್ತಷ್ಟು ತೀವ್ರವಾಗಿದ್ದು, ನಾನಾ ಕನ್ನಡಪರ ಸಂಘಟನೆಗಳು ಸೆ.26 ರಂದು ಬೆಂಗಳೂರು ಬಂದ್ ನಡೆಸುವ ಮೂಲಕ ಯಶಸ್ವಿಯಾಗಿ ಹೋರಾಟ ಮಾಡಿದ್ದವು. ಕಾವೇರಿ ನೀರು ಪ್ರಾಧಿಕಾರವೂ ತಮಿಳುನಾಡಿಗೆ ಮತ್ತೆ 3 ಸಾವಿರ ಕೂಸೆಕ್ ನೀರು ಬಿಡಲು ಹೇಳಿರುವುದರಿಂದ ಕನ್ನಡಿಗರು ಮತ್ತಷ್ಟು ಆಕ್ರೋಶಗೊಂಡಿದ್ದು, ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.
ಸೆ.29 ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ 58ನೇ ವಾರ್ಷಿಕ ಘಟಿಕೋತ್ಸವ ಜೊತೆ 2 ಮತ್ತು 4 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಸೆಮಿಸ್ಟರ್ ಪರೀಕ್ಷೆಗಳನ್ನು ಸೆ.30 ಕ್ಕೆ ಮುಂದೂಡಲಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.
29ರಂದು ಕರ್ನಾಟಕ ಬಂದ್‌ಗೆ ಕರವೇ ಬೆಂಬಲವಿಲ್ಲ:ನಾರಾಯಣಗೌಡ
ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 29 ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಟಿ ಎ ನಾರಾಯಣಗೌಡ ಹೇಳಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು ಯಾವುದೇ ಹೋರಾಟ ತಾರ್ಕಿಕ ಅಂತ್ಯಕ್ಕೆ ಬರಬೇಕು. ಆರಂಭದ ಅಸ್ತ್ರವಾಗಬಾರದು. ಬಂದ್‌ಗೆ ಬೆಲೆ ಇಲ್ಲದಂತಾಗಿದೆ. ಕಾವೇರಿ ವಿಚಾರ ಇಂದು ನಿನ್ನೆಯಲ್ಲ. ಸಾವಿರಾರು ವರ್ಷದ ಇತಿಹಾಸವಿದೆ. ಹೀಗಾಗಿ ಕರ್ನಾಟಕ ಬಂದ್‌ಗೆ ರಕ್ಷಣಾ ವೇದಿಕೆಯ ಬೆಂಬಲವಿಲ್ಲ. ಎರಡೂ ರಾಜ್ಯಗಳ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಮಸ್ಯೆ ಬಗೆಹರಿಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ ರಾಜ್ಯ ರಾಜ್ಯಗಳ ನಡುವೆ ಇರುವ ಸಮಸ್ಯೆ ಬಗೆಹರಿಸಿಕೊಳ್ಳಬೇಕು ವಿಧಾನಪರಿಷತ್ ಗೆ ಕನ್ನಡ ಪರ ಹೋರಾಟಗಾರರನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬಂದ್‌ಗೆ ಧಾರವಾಡ ಜಿಲ್ಲೆ ಸಂಘಟನೆಗಳು ಬೆಂಬಲ.. ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದಕ್ಕೆ ರಾಜ್ಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕಳೆದ ಒಂದು ವಾರದಿಂದ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಹೋರಾಟ ಮಾಡುತ್ತಿವೆ. ಸೆ. 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಂದ್‌ಗೆ ಧಾರವಾಡ ಜಿಲ್ಲೆಯಿಂದ ಬೆಂಬಲ ವ್ಯಕ್ತವಾಗಿದೆ.
ಉತ್ತರ ಕರ್ನಾಟಕ ಭಾಗದ ಮಹದಾಯಿ ಹೋರಾಟಗಾರರು ಹಾಗೂ ಇತರೆ ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅಂದು ಧಾರವಾಡ ಬಂದ್ ಮಾಡಲು ನಿರ್ಧಾರ ಮಾಡಿದ್ದಾರೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 3ರ ವರೆಗೆ ಧಾರವಾಡ ಬಂದ್‌ಗೆ ನಿರ್ಧಾರ ಮಾಡಿದ್ದಾರೆ.
ಸಂಘಟನೆಗಳ ಸಭೆಯಲ್ಲಿ ಬಂದ್ ಬೆಂಬಲಿಸಲು ನಿರ್ಧಾರ ವ್ಯಕ್ತಪಡಿಸಿದ್ದು, 40ಕ್ಕೂ ಹೆಚ್ಚು ಸಂಘಟನೆಗಳು ಕೈ ಜೋಡಿಸುವ ಸಾಧ್ಯತೆಯಿದೆ. ಕಾವೇರಿ, ಮಹದಾಯಿ ಎನ್ನದೇ ರಾಜ್ಯದ ಹಿತದೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದಿಂದ ಬಂದ್‌ಗೆ ಬೆಂಬಲ ವ್ಯಕ್ತವಾಗಿದ್ದು, ಜಿಲ್ಲೆ ಸಹ ಅಂದು ಸ್ತಬ್ಧವಾಗುವ ಸಾಧ್ಯತೆಯಿದೆ.