ಬೆಂಗಳೂರು : ರೈತ ಸಂಘಟನೆಗಳು ಕರೆ ನೀಡಿದ ಬಂದ್‌ಗೆ ಇವತ್ತು ಬೀದಿ ಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು ಸಂಪೂರ್ಣ ಬೆಂಬಲ ನೀಡಿದ್ರು. ಆದರೆ, ಅವರು ಒಂದಿಷ್ಟು ಕಷ್ಟಗಳನ್ನ ಹೇಳಿಕೊಂಡಿದ್ದಾರೆ.
ಪ್ರಮುಖವಾಗಿ ಪ್ರತಿಭಟನೆಗಳು ನಡೆಯಬಹುದಾದ ಸರ್ಕಲ್, ಮೆರವಣಿಗೆಗಳು ಹೋಗುವ ರಸ್ತೆಯ ಅಂಗಡಿಗಳು ಮುಚ್ಚಿಯೇ ಇದ್ದವು. ಕಾಂಗ್ರೆಸ್ ಕಚೇರಿ, ಮೌರ್ಯ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಕಾರ್ಪೊರೇಷನ್ ಸರ್ಕಲ್ ಸುತ್ತಮುತ್ತ ಮಳಿಗೆಗಳು ಬಂದ್ ಆಗಿದ್ದವು. ಉಳಿದಂತೆ ಕೆಆರ್‌ಮಾರುಕಟ್ಟೆ, ಬೆಂಗಳೂರು ದಕ್ಷಿಣ, ಪಶ್ಚಿಮ, ಉತ್ತರ ವಲಯಗಳಲ್ಲಿ ಎಂದಿನಂತೆ ವ್ಯಾಪಾರ, ವಹಿವಾಟು ನಡೆದವು.
ಬಿಬಿಎಂಪಿ ಕೂಡ ಇಂದು ಎಂದಿನಂತೆ ಕಾರ್ಯ ಚಟುವಟಿಕೆ ನಡೆಸುತ್ತಿತ್ತು. ಎಲ್ಲಾ ಸಿಬ್ಬಂದಿ ಹಾಜರಾಗಿದ್ದರು. ಜೊತೆಗೆ ಮಾರುಕಟ್ಟೆಗಳನ್ನು ಬಲವಂತವಾಗಿ ಮುಚ್ಚಿಸಲು ಮುಂದಾದ್ರೆ ಕ್ರಿಮಿನಲ್ ಕೇಸ್ ಹಾಕಿವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಸಿದ್ರು.
ಈ ಬಗ್ಗೆ ಬೀದಿ ಬದಿ ವ್ಯಾಪಾರಿಗಳು ಮಾತನಾಡಿ, ರೈತರನ್ನು ಕಷ್ಟಕ್ಕೆ ದೂಡುವ ಯಾವುದೇ ಕಾಯ್ದೆ ಅಥವಾ ನಿಯಮಕ್ಕೆ ನಮ್ಮ ವಿರೋಧವಿದೆ. ರೈತರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ರೈತರಿಗೆ ಸಂಕಷ್ಟ ಎದುರಾದ್ರೆ ನಾವೂ ಜೊತೆಗೆ ನಿಲ್ಲುತ್ತೇವೆ. ಆದರೆ, ಬಂದ್ ಮಾಡುವುದು ಇದಕ್ಕೆಲ್ಲ ಪರಿಹಾರವಲ್ಲ ಎಂದರು.