ಬೆಂಗಳೂರು: ಇಂದು ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆ ಮುಂಜಾನೆಯಿಂದ ರೈತಪರ ಸಂಘಟನೆಗಳು ಹಾಗೂ ಇತರೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಸಿಲಿಕಾನ್ ಸಿಟಿ ಜನರಿಗೆ ಯಾವುದೇ ರೀತಿಯಾದ ತೊಂದರೆಯಾಗಬಾರದು ಅನ್ನೋ ನಿಟ್ಟಿನಲ್ಲಿ ಟ್ರಾಫಿಕ್ ಹೆಚ್ಚುಚರಿ ಆಯುಕ್ತ ರವಿಕಾಂತೇಗೌಡ ಮುಂಜಾನೆಯಿಂದ ಸಿಬ್ಬಂದಿ ನೇತೃತ್ವದಲ್ಲಿ ಎಲ್ಲೆಡೆ ಅಲರ್ಟ್ ಆಗಿದ್ದಾರೆ.
ಹೀಗಾಗಿ ರಸ್ತೆ ಉದ್ದಕ್ಕೂ ಟ್ರಾಫಿಕ್ ಪೊಲೀಸರು ಇದ್ದು, ಜನರ ಓಡಾಟಕ್ಕೆ ತೊಂದರೆಯಾಗದ ರೀತಿ ಮುಂಜಾಗ್ರತಾ ಕ್ರಮ ಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ನಗರದ ಕೆಲ ರಸ್ತೆ ಬಿಟ್ಟು ಪ್ರತಿಯೊಂದು ಕಡೆ ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ, ಆಟೋ, ಖಾಸಗಿ ಕ್ಯಾಬ್, ಬೈಕ್ ಎಂದಿನಂತೆ ಓಡಾಟ ಶುರು ಮಾಡಿವೆ.
ಇನ್ನು ಪ್ರಮುಖವಾಗಿ ಈಗಾಗಲೇ ಪೊಲೀಸರಿಗೆ ಮಾಹಿತಿ ಇರುವ ಟೌನ್ ಹಾಲ್, ಮೆಜೆಸ್ಟಿಕ್, ಮೌರ್ಯ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್ ಬಳಿಯ ರಸ್ತೆಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಜನರ ಸುಗಮ ಓಡಾಟಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಸದ್ಯ ನಗರದೆಲ್ಲೆಡೆ ಹಿರಿಯಾಧಿಕಾರಿಗಳೇ ರೌಂಡ್ಸ್ ಮಾಡಿ ಸಿಬ್ಬಂದಿ ಎಲ್ಲೆಡೆ ಅಲರ್ಟ್ ಆಗಿರುವಂತೆ ನೋಡಿಕೊಂಡಿದ್ದಾರೆ.