ಬೆಂಗಳೂರು: ಸರ್ಕಾರದ ದೊಡ್ಡ ಮೊತ್ತವನ್ನು ದುರ್ಬಳಕೆ ಮಾಡಿಕೊಂಡು ತಪ್ಪೆಸಗಿದ ಅಧಿಕಾರಿಗಳಿಂದ ಕೇವಲ ದುರುಪಯೋಗಪಡಿಸಿಕೊಂಡ ಹಣವನ್ನು ಮಾತ್ರ ಜಮೆ ಮಾಡಿಸಿಕೊಂಡು, ಅಂತವರ ಮೇಲೆ ಶಿಸ್ತುಕ್ರಮ ಕೈಗೊಳ್ಳದಿರುವುದರ ಬಗ್ಗೆ ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ 33ನೇ ವರದಿಯನ್ನು ಅಧ್ಯಕ್ಷ ಸೋಮಶೇಖರ್ ರೆಡ್ಡಿ ಇಂದು ವಿಧಾನಸಭೆಯಲ್ಲಿ ಮಂಡಿಸಿದರು. ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು 2013ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೇಲಿನ ಕಾರ್ಯನಿರ್ವಹಣೆಯ ಕುರಿತಂತೆ ಸಲ್ಲಿಸಿರುವ ವಿಶೇಷ ವರದಿಯಲ್ಲಿನ ಆಡಿಟ್ ಆಕ್ಷೇಪಣೆಗಳ ಕುರಿತು ಸಮಿತಿ ಪರಿಶೀಲಿಸಿದ ಅಂಶಗಳ ಆಧಾರದ ಮೇರೆಗೆ ಈ ವರದಿಯನ್ನು ತಯಾರಿಸಲಾಗಿದೆ. ಈ ವರದಿಯಲ್ಲಿ ಕೆಲ ಆಕ್ಷೇಪಗಳನ್ನು ವ್ಯಕ್ತಪಡಿಸಲಾಗಿದೆ.
ಇನ್ನು ಮುಂದೆ ಯಾವುದೇ ರೀತಿಯ ಹಣ ದುರುಪಯೋಗದ ಪ್ರಕರಣ ಬೆಳಕಿಗೆ ಬಂದ ಆರು ತಿಂಗಳಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿಯಮಾವಳಿ ರೀತಿ ಶಿಕ್ಷೆಯನ್ನು ವಿಧಿಸಲು ತ್ವರಿತಗತಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಮಿತಿ ಶಿಫಾರಸು ಮಾಡಿದೆ.
ಓದಿ : ಅಭಿವೃದ್ದಿ ವಿಚಾರದಲ್ಲಿ ಕಲ್ಯಾಣ ಕರ್ನಾಟಕದ ಬಗ್ಗೆ ತಾರತಮ್ಯ : ಬಸವರಾಜ ಪಾಟೀಲ್ ಇಟಗಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾರ್ಯನಿರ್ವಹಣಾ ವರದಿಯಲ್ಲಿನ ಹಲವಾರು ಆಕ್ಷೇಪಣೆಗಳ ಕುರಿತು ವಿಚಾರಣೆ ನಡೆಸಲು ಲೋಕಾಯುಕ್ತಗೆ ವಹಿಸಲಾಗಿದೆ. ಇಂಥ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 5-6 ವರ್ಷಗಳು ಕಳೆದರೂ ವಿಚಾರಣೆ ಪೂರ್ಣಗೊಳ್ಳದೇ ಇರುವುದರಿಂದ ತಪ್ಪಿತಸ್ಥ ಅಧಿಕಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತಹ ಸನ್ನಿವೇಶ ನಿರ್ಮಾಣಗೊಂಡಿದೆ. ಹಾಗಾಗಿ ಲೋಕಾಯುಕ್ತದಲ್ಲಿರುವ ಎಲ್ಲಾ ತನಿಖೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ದಿಸೆಯಲ್ಲಿ ಸರ್ಕಾರ ಗಂಭೀರ ಪ್ರಯತ್ನ ಮಾಡಬೇಕೆಂದು ಸಮಿತಿ ಶಿಫಾರಸು ಮಾಡಿದೆ.
ಲೋಕಾಯುಕ್ತರಿಂದ ವರದಿ ಬಂದ ಕೂಡಲೇ ತಪ್ಪಿತಸ್ಥ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡ ಹಣವನ್ನು ಬ್ಯಾಂಕ್ ಬಡ್ಡಿ ಸಹಿತ ವಸೂಲಿ ಮಾಡುವುದರ ಜೊತೆಗೆ, ಅವರು ಭವಿಷ್ಯದಲ್ಲಿ ತಪ್ಪೆಸಗದಂತೆ ನಿಯಮಾನುಸಾರ ಶಿಕ್ಷೆ ವಿಧಿಸಲು ಕ್ರಮಕೈಗೊಳ್ಳಬೇಕೆಂದು ಸಮಿತಿ ಸೂಚಿಸಿದೆ.