ಬೆಂಗಳೂರು : ವಿಧಾನಸಭೆ ಅಧಿವೇಶನ ಸೆ. 26ರವರೆಗೆ ಮಾತ್ರ ನಡೆಯಲಿದ್ದು, ಸದಸ್ಯರು ಸಮಯದ ಮಿತಿ ಅರಿತು ಕಾರ್ಯಕಲಾಪಕ್ಕೆ ಸಹಕಾರ ನೀಡಬೇಕೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೋರಿದರು.
ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ನಿನ್ನೆ ನಡೆದ ಸದನದ ಕಾರ್ಯ ಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ನಿಗದಿಯಾಗಿದ್ದ ಅಧಿವೇಶನದಲ್ಲೇ ಎರಡು ದಿನ ಕಡಿತವಾಗಿದೆ. ಹೀಗಾಗಿ ಸೆ. 26ಕ್ಕೆ ಅಧಿವೇಶನ ಮುಕ್ತಾಯವಾಗಲಿದೆ ಎಂದು ತಿಳಿಸಿದರು. ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6.30ರವರೆಗೆ ಸದನ ನಡೆಸಲು ಸಭೆಯಲ್ಲಿ ನಿರ್ಣಯವಾಗಿದೆ ಎಂದರು.
ಚುಕ್ಕೆ ರಹಿತ ಪ್ರಶ್ನೋತ್ತರವನ್ನು ಸದಸ್ಯರಿಗೆ ಇ-ಮೇಲ್ ಮುಖಾಂತರ ಕಳುಹಿಸಿಕೊಡಲಾಗುವುದು. ಸದನದಲ್ಲಿ ಉತ್ತರಿಸುವ ಪ್ರಶ್ನೆಗಳ ಉತ್ತರವನ್ನು ಸದನದಲ್ಲೇ ಮಂಡನೆ ಮಾಡಲಾಗುವುದು. ಆದ್ಯತೆ ಮೇಲೆ ವಿಧೇಯಕಗಳ ಚರ್ಚೆಗೆ ಅವಕಾಶ ಮಾಡಿ ಕೊಡಲಾಗುವುದು. ಆರು ತಿಂಗಳ ನಂತರ ಸದನ ಸೇರಿದ್ದೇವೆ. ಸಮಯ ಬಹಳ ಕಡಿಮೆ ಇದೆ, ಸದಸ್ಯರು ಸಹಕರಿಸಬೇಕು ಎಂದು ಹೇಳಿದರು.
ಕೋವಿಡ್ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಅಧಿವೇಶನ ನಡೆಸುವುದೇ ಸವಾಲಾಗಿದೆ. ಪ್ರತಿಯೊಬ್ಬರೂ ವೈಯಕ್ತಿಕ ಜವಾಬ್ದಾರಿ ಅರಿತು ಶಿಸ್ತು ಬದ್ಧವಾಗಿ ಸದನ ನಡೆಸಲು ಸಹಕರಿಸಬೇಕು ಎಂದು ಕೋರಿದರು. ಕೋವಿಡ್-19 ಹಿನ್ನೆಲೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಸದನ ನಡೆಸಲಾಗುತ್ತಿದೆ. ಕೆಲವರು ಒಳಗೆ ಬಂದಾಗ ಮಾಸ್ಕ್ ತೆಗೆದು ಕುಳಿತಿರುವುದನ್ನು ಗಮನಿಸಿದ್ದೇವೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.
ಸದನದಲ್ಲಿ ಮಾತನಾಡುವಾಗ ಮಾಸ್ಕ್ ಹಾಕಿಕೊಂಡೆ ಮಾತನಾಡಬೇಕು. ಫೇಸ್ ಶೀಲ್ಡ್ ಧರಿಸಿರಬೇಕು. ನೆಗೆಟಿವ್ ಬಂದಿರುವವರಿಗೆ ನೆಗೆಟಿವ್ ಟ್ಯಾಗ್ ನೀಡಲಾಗುತ್ತದೆ. ಎಲ್ಲರೂ ಕಡ್ಡಾಯವಾಗಿ ಧರಿಸಿರಬೇಕು. ಯಾರಿಗಾದ್ರೂ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ನಿರ್ಲಕ್ಷ್ಯ ಮಾಡದೇ ತಪಾಸಣೆಗೊಳಗಾಗಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸೌಧಕ್ಕೆ ಬರದಂತೆ ನೋಡಿಕೊಳ್ಳುವುದು ಎಲ್ಲಾ ಸದಸ್ಯರ ಕರ್ತವ್ಯ ಎಂದು ಶಾಸಕರಿಗೆ ಕಿವಿ ಮಾತು ಹೇಳಿದರು.
ಹಲವು ವಿಧೇಯಕಗಳು ಮಂಡನೆ ಆಗಲಿದ್ದು, ಪ್ರಮುಖ ವಿಧೇಯಕಗಳ ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಕೆಲವೊಂದು ವಿಧೇಯಕಗಳ ಚರ್ಚೆಯ ಅಗತ್ಯವಿಲ್ಲ. ಒಂದು ವೇಳೆ ಬೇಕು ಅಂದರೆ ಅದಕ್ಕೂ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸ್ಪೀಕರ್ ತಿಳಿಸಿದರು.