ಬೆಂಗಳೂರು: 'ಒಂದು ರಾಷ್ಟ್ರ, ಒಂದು ಚುನಾವಣೆ' ವಿಷಯವಾಗಿ ಚರ್ಚಿಸಲು ಸಭಾಧ್ಯಕ್ಷ ವಿಶೇಶ್ವರ ಹೆಗಡೆ ಕಾಗೇರಿ ಅನುಮತಿ ನೀಡಲು ಮುಂದಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ವಿರೋಧಿಸಿದರು.
ಶಾಸಕ ಸಂಗಮೇಶ್ ಅಮಾನತು ರೂಲಿಂಗ್ ಹಿಂದಕ್ಕೆ ಪಡೆಯಿರಿ. ಇಲ್ಲವೇ ನಮ್ಮನ್ನೆಲ್ಲಾ ಅಮಾನತು ಮಾಡಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು. ನಿಯಮ ಬಾಹಿರವಾಗಿ ಅಮಾನತು ಮಾಡಲಾಗಿದೆ. ಸರ್ವಾಧಿಕಾರ ಧೋರಣೆಗೆ ಧಿಕ್ಕಾರ ಎಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಉಳಿದ ಶಾಸಕರಿಗೆ ಮಾತನಾಡಲು ಅವಕಾಶ ಕೊಡಿ. ಅವರ ಹಕ್ಕನ್ನು ನೀವು ಕಿತ್ತಕೊಳ್ಳಬೇಡಿ. ನಾವೆಲ್ಲರೂ ಇಲ್ಲಿ ಚರ್ಚೆ ಮಾಡಲೆಂದೇ ಸೇರಿದ್ದೇವೆ. ಈ ರೀತಿ ಸದನದಲ್ಲಿ ಚರ್ಚೆ ಮಾಡದೇ ಕಾರ್ಯ ಕಲಾಪಗಳಿಗೆ ಅಡ್ಡಿಪಡಿಸಿ ಇತರ ಶಾಸಕರಿಗೂ ಮಾತನಾಡಲು ಅವಕಾಶ ಕೊಡದಿರುವುದು ಒಳ್ಳೆಯದಲ್ಲ ಎಂದು ಸಭಾಧ್ಯಕ್ಷ ವಿಶೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸದನದ ಘನತೆ, ಗೌರವಕ್ಕೆ ಧಕ್ಕೆಯಾಗುವ ಹಾಗೆ ಶಾಸಕ ಸಂಗಮೇಶ್ ನಡೆದುಕೊಂಡಿದ್ದಾರೆ. ಹಿರಿಯ ನಾಯಕರಾಗಿ ನೀವು ಹೀಗೆ ನಡೆದುಕೊಳ್ಳಬಾರದು. ಇದು ಪ್ರಜಾಪ್ರಭುತ್ವದ ದೇಗುಲ. ಸದನದ ಪಾವಿತ್ರತೆ ಕಾಪಾಡಲು ನಾವೆಲ್ಲ ಜವಾಬ್ದಾರರಾಗಬೇಕು ಎಂದು ಸಭಾಧ್ಯಕ್ಷ ವಿಶೇಶ್ವರ ಹೆಗಡೆ ಕಾಗೇರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಹೇಳಿದರು.
ಆದರೆ ಇದ್ಯಾವುದನ್ನು ಕಿವಿಗೆ ಹಾಕಿಕೊಳ್ಳದ ಪ್ರತಿಪಕ್ಷ ನಾಯಕರು ಸದನದ ಬಾವಿಗಿಳಿದು ತಮ್ಮ ಹೋರಾಟ ಮುನ್ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಕಾರಣದಿಂದಾಗಿ ವಿಧಾನಸಭೆ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿದೆ.